ಮುಂಡರಗಿ: ಪ್ರತಿ ಮಳೆಗಾಲದಲ್ಲೂ ಶಿಂಗಟಾಲೂರು ಏತ ನೀರಾವರಿ ಬ್ಯಾರೇಜಿನ ಹಿನ್ನೀರಿನಲ್ಲಿ ಮುಳಗುಡೆಯಾಗುವ ಗುಮ್ಮಗೋಳ, ಬಿದರಳ್ಳಿ, ವಿಠಲಾಪೂರ ಗ್ರಾಮಗಳ ಗ್ರಾಮಸ್ಥರ ಗೋಳು ಕೇಳುವವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ.
ಮಳೆಗಾಲದಲ್ಲಿ ತುಂಗಭದ್ರಾ ನದಿಗೆ ಒಳಹರಿವು ಹೆಚ್ಚಾದಾಗ ಬ್ಯಾರೇಜಿನಲ್ಲಿ ನೀರು ನಿಂತು ಹಿನ್ನೀರಿನಲ್ಲಿ ಮುಳಗುಡೆಯಾಗುವ ಗುಮ್ಮಗೋಳ, ಬಿದರಳ್ಳಿ, ವಿಠಲಾಪೂರ ಗ್ರಾಮಸ್ಥರಿಗೆ ಪ್ರತಿ ವರ್ಷ ತೊಂದರೆ ತಪ್ಪುತ್ತಿಲ್ಲ. ಹಮ್ಮಿಗಿ-ಗುಮ್ಮಗೋಳ ಸಂಪರ್ಕ ಕಲ್ಪಿಸಲು ಸೇತುವೆ ಹಿನ್ನೀರಿನಲ್ಲಿ ಮುಳಗುಡೆಯಾಗಿದ್ದು, ಗ್ರಾಮಸ್ಥರ ಓಡಾಟಕ್ಕೆ ತೊಂದರೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಸೇತುವೆ ದುರಸ್ತಿ ಕಾಣುತ್ತಿಲ್ಲ. ಸುತ್ತಲೂ ಇರುವ ಹಿನ್ನೀರಿನಲ್ಲಿಯೇ ಗ್ರಾಮಸ್ಥರು ಜೀವಭಯದಲ್ಲಿ ಓಡಾಡುವಂತಾಗಿದೆ.
ಇನ್ನೂ ಬಿದರಳ್ಳಿ ಮುಳಗಡೆಯ ಗ್ರಾಮಸ್ಥರು ಹೊಸ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದರೂ, ಇನ್ನುಳಿದ ಕೆಲವರು ಹಳೆಯ ಗ್ರಾಮದಲ್ಲಿಯೇ ಇದ್ದಾರೆ. ಶ್ರೀ ರೇಣುಕಾಂಬದೇವಿ ದೇವಸ್ಥಾನಕ್ಕೆ ಬರುವ ಭಕ್ತರಿಗಂತೂ ಹಿನ್ನೀರಿನಿಂದ ಇನ್ನಿಲ್ಲದ ತೊಂದರೆಯಾಗುತ್ತಿದೆ. ಇದಕ್ಕಿಂತ ಮುಖ್ಯವಾಗಿ ಏತ ನೀರಾವರಿ ಬ್ಯಾರೇಜಿನಲ್ಲಿ ಮುಳುಗಡೆ ಯಾಗುವ ವಿಠಲಾಪೂರ ಗ್ರಾಮಸ್ಥರಿಗೆ ತೊಂದರೆ ತಪ್ಪುತ್ತಿಲ್ಲ. ಏಕೆಂದರೆ, 2012ರಲ್ಲಿಯೇ ವಿಠಲಾಪೂರ ಮುಳುಗಡೆ ಗ್ರಾಮವೆಂದು ಘೋಷಣೆಯಾಗಿದೆ.
ಆದರೂ ಕೂಡ ಇನ್ನೂವರೆಗೂ ಗ್ರಾಮಸ್ಥರಿಗೆ ಪರಿಹಾರ ಬಂದಿಲ್ಲ. ನೂತನ ಗ್ರಾಮಕ್ಕೆ ನಿವೇಶನ ಗುರುತಿಸಿದ್ದರೂ, ನಿವೇಶನದ ಭೂಮಿ ಖರೀದಿಯಾಗಿಲ್ಲ. ತುಂಗಭದ್ರೆಯಲ್ಲಿ ಒಳಹರಿವು ಹೆಚ್ಚಾದಾಗ ವಿಠಲಾಪೂರ ಗ್ರಾಮಕ್ಕೆ ಹಿನ್ನೀರು ನುಗ್ಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಮೊದಲು ತಗ್ಗು ಪ್ರದೇಶದಲ್ಲಿರುವ ದಲಿತ ಕಾಲೋನಿಗೆ ನೀರು ನುಗ್ಗುವುದರಿಂದ 50 ಮನೆಗಳಿರುವ ದಲಿತ ಕುಟುಂಬಗಳು ಜೀವಭಯದಲ್ಲಿ ಬದುಕುವಂತಾಗಿದೆ. ಇದರಿಂದ ಗ್ರಾಮಸ್ಥರು ನದಿಯ ಹಿನ್ನೀರಿನಲ್ಲಿ ಬರುವ ವಿಷಜಂತುಗಳಾದ ಹಾವು-ಚೇಳುಗಳಿಂದ ಭಯಭೀತರಾಗಿ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ದಲಿತ ಕಾಲೋನಿಯ ಮನೆಗಳ ಸುತ್ತಲೂ ನೀರು ಆವರಿಸುವುದರಿಂದ ಕುಟುಂಬಸ್ಥರಿಗೆ ಮನೆಗಳು ಬೀಳುವ ಭಯದಿಂದ ಜೀವನ ಸಾಗಿಸುವುದೇ ದುಸ್ತರವಾಗಿದೆ.
ಈ ಸಲವೂ ತುಂಗಭದ್ರೆಯಲ್ಲಿ ಒಳಹರಿವು ಹೆಚ್ಚುತ್ತಿರುವುದರಿಂದ ವಿಠಲಾಪೂರ ಗ್ರಾಮದ ದಲಿತ ಕಾಲೋನಿಯೊಳಗೆ ನೀರು ನುಗ್ಗತೊಡಗಿದೆ. ಪ್ರತಿ ಮಳೆಗಾಲದಲ್ಲೂ ಗ್ರಾಮದಲ್ಲಿ ನದಿಯ ನೀರು ನುಗ್ಗಿದಾಗ ಸ್ಥಳಕ್ಕೆ ಭೇಟಿ ನೀಡುವ ಶಾಸಕ ರಾಮಣ್ಣ ಲಮಾಣಿ, ಏತ ನೀರಾವರಿ ಅಧಿ ಕಾರಿಗಳು ಸ್ಥಳಾಂತರದ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಕಳೆದ ವರ್ಷ ಮಳೆಗಾಲದಲ್ಲಿ ಮೂರು ತಿಂಗಳೊಳಗೆ ಗ್ರಾಮವನ್ನು ಸ್ಥಳಾಂತರ ಮಾಡುವ ಭರವಸೆಯನ್ನು ಶಾಸಕ ರಾಮಣ್ಣ ಲಮಾಣಿ ನೀಡಿದ್ದರು. ಆದರೆ, ಒಂದು ವರ್ಷ ಕಳೆದರೂ ಭರವಸೆಯು ಭರವಸೆಯಾಗಿಯೇ ಉಳಿದಿದೆ.
*ಹು.ಬಾ.ವಡ್ಡಟ್ಟಿ