ಮುದ್ದೇಬಿಹಾಳ: ಇಲ್ಲಿನ ಪೊಲೀಸ್ ಠಾಣೆಯ ಪಿಎಸೈ ಸಂಜಯ್ ತಿಪ್ಪರಡ್ಡಿ ಅವರು ದೌರ್ಜನ್ಯ ನಡೆಸಿದ್ದಾರೆ. ಜಾತಿ ಹೆಸರು ಎತ್ತಿ ಜಾತಿ ನಿಂದನೆ ಮಾಡಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕೋಳೂರು ತಾಂಡಾದ ಮಹಿಳೆಯರೂ ಸೇರಿ 200ಕ್ಕೂ ಹೆಚ್ಚು ಗ್ರಾಮಸ್ಥರು ಇಲ್ಲಿನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಡಿಎಸ್ಪಿ ಬಂದು ಕ್ರಮ ಕೈಕೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಾಂಡಾದಲ್ಲಿ ಈಚೆಗೆ ಇಸ್ಪೀಟ್ ಜೂಜಾಟ ಆಡುವ ತಂಡದ ಮೇಲೆ ಛದ್ಮವೇಷದಲ್ಲಿದ್ದ ಪೊಲೀಸರು ದಾಳಿ ನಡೆಸಿದಾಗ ಅಮಾಯಕರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಸುಮ್ಮನೆ ಕುಳಿತವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅಮಾಯಕರ ಹಣ ಕಸಿದುಕೊಂಡಿದ್ದಾರೆ. ಠಾಣೆಗೆ ಕರೆದೊಯ್ದು ಸೆಲ್ಲಿನಲ್ಲಿ ಹಾಕಿ ಮನಸೋ ಇಚ್ಛೆ ಥಳಿಸಿ ಜಾತಿ ಎತ್ತಿ ಬೈದಿದ್ದಾರೆ. ಲಕ್ಷ ರೂ ಕೊಟ್ಟರೆ ಬಿಡುವುದಾಗಿ ಬೆದರಿಸಿದ್ದಾರೆ, ನಂಬಿಸಿ ಕರೆತಂದು ಹಲ್ಲೆ ಮಾಡಿದ್ದಾರೆ ಎಂದೆಲ್ಲ ದೂರಿದರು. ಈ ವೇಳೆ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ಮನವೊಲಿಸಲು ಯತ್ನಿಸಿದರು.
ಸ್ಥಳಕ್ಕೆ ಬಂದ ಡಿಎಸ್ಪಿ ಬಲ್ಲಪ್ಪ ನಂದಗಾಂವಿ ಅವರು ದೂರುಗಳನ್ನು ಆಲಿಸಿ ಸ್ಥಳದಲ್ಲಿದ್ದ ಸಿಪಿಐಗೆ ಈ ಕುರಿತು ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸಬೇಕು. ಪಿಎಸೈ ತಪ್ಪು ಮಾಡಿದ್ದರೆ ಕ್ರಮ ಆಗಲಿ ಎಂದು ತಿಳಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.
ಡಿಎಸ್ಪಿ, ಸಿಪಿಐ ಮಾತನಾಡಿ ಜನರನ್ನು ಕಲೆ ಹಾಕಿ ಠಾಣೆ ಎದುರು ಬಂದು ಪ್ರತಿಭಟಿಸುವುದು ಕಾನೂನಿಗೆ ವಿರುದ್ಧವಾಗಿದೆ. ನಿಮ್ಮ ಮೇಲೆ ಕ್ರಮ ಜರುಗಿಸಬಹುದು ಎಂದು ಎಚ್ಚರಿಕೆ ನೀಡಿದರು.