Advertisement

ಅರೆಹೊಳೆ: ಜಲ್ಲಿ ಮಿಶ್ರಣ ಘಟಕ ವಿರುದ್ಧ ಪ್ರತಿಭಟನೆ

02:30 AM Dec 13, 2018 | Karthik A |

ಉಪ್ಪುಂದ: ನಾವುಂದ ಗ್ರಾ.ಪಂ. ವ್ಯಾಪ್ತಿಯ ಅರೆಹೊಳೆ ಕುದ್ರಕೋಡ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಲ್ಲಿ ಮಿಶ್ರಣ ಘಟಕದಿಂದ ಸ್ಥಳೀಯ ಜನರ ಮೇಲೆ ಹಾಗೂ ಪರಿಸರ ಮತ್ತು ಕೃಷಿ ತೋಟಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಡಿ.12ರಂದು ಘಟಕದ ಎದರು ಪ್ರತಿಭಟನೆ ನಡೆಸಿದರು. ಐಆರ್‌ಬಿಯ ಮಾಡರ್ನ್ ರೋಡ್‌ ಮೇಕರ್ ಕಂಪೆನಿಯವರು ಹಾಟ್‌ ಮಿಕ್ಸ್‌, ವೆಟ್‌ ಮಿಕ್ಸ್‌ ಮತ್ತು ರೆಡಿ ಮಿಕ್ಸ್‌ ಕಾಂಕ್ರೀಟ್‌ ಪ್ಲಾಂಟ್‌ ನಡೆಸುತ್ತಿರುವ ಪರಿಣಾಮ ಸುತ್ತಮುತ್ತಲಿನ 80ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಹಾಗೂ ನೂರಾರು ಎಕ್ರೆ ಗದ್ದೆ, ಕೃಷಿ ತೋಟಗಳಿಗೆ ಮತ್ತು ಜನರ ಆರೋಗ್ಯದ ಮೇಲೆ ತೀವ್ರವಾದ ತೊಂದರೆ ಉಂಟಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇದುವರೆಗೆ ಉಂಟಾಗಿರುವ ನಷ್ಟಕ್ಕೆ ಪರಿಹಾರ ದೊರಕಿಸಿಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

Advertisement

ಈ ಭಾಗದ ಗೋವಿಂದ ಖಾರ್ವಿ, ಮುಕಾಂಬು ದೇವಾಡಿಗ, ರಾಮ ಜಿ. ಖಾರ್ವಿ ಇವರ ಜಮೀನುಗಳಲ್ಲಿ ಜಲ್ಲಿ ಮಿಶ್ರಿತ ಕಲುಪಿತ ನೀರು ಹರಿದು ಬಂದು ಶೇಖರಣೆಗೊಂಡು ಕೃಷಿ ಚಟುವಟಿಕೆ ನಡೆಸಲು ಸಮಸ್ಯೆಯಾಗುತ್ತಿದೆ.ಶೇಖರಣೆ ಗೊಂಡಿರುವ ಕಾಂಕ್ರೀಟ್‌ನ್ನು ಕಂಪೆನಿ ವತಿಯಿಂದ ತೆರವುಗೊಳಿಸಬೇಕು ಎಂದರು.

ವೆಚ್ಚ ಭರಿಸಿ
ಈ ಘಟಕದಿಂದ ಹೊರಬರುವ ಧೂಳಿನಿಂದ ಸ್ಥಳೀಯರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಧೂಳು ಹೊರ ಹೋಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಕಾಯಿಲೆಗೆ ತುತ್ತಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವವರ ಮಾಹಿತಿ ಪಡೆದು ಅದರ ವೆಚ್ಚವನ್ನು ಭರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿರುವನಾಗಿ, ಚಣ್ಣಮ್ಮ ಶೆಟ್ಟಿ, ಜಯರಾಮ, ಸೀತಾ, ಜಲಜಾ, ರವಿ ಶೆಟ್ಟಿ, ರಾಮ ಖಾರ್ವಿ, ಗಿರಿಜಾ, ಕಾವೇರಿ ಮೊದಲಾದವರು ತಾವು ಪಡೆದುಕೊಂಡಿರುವ ಚಿಕಿತ್ಸೆಯ ವಿವರವುಳ್ಳ ಫೈಲ್‌ಗ‌ಳನ್ನು ಹಿಡಿದುಕೊಂಡು ಬಂದು ಪ್ರತಿಭಟನೆಯಲ್ಲಿ  ಕುಳಿತು ಗಮನ ಸೆಳೆದರು. ಪೊಲೀಸ್‌ ಅಧಿಕಾರಿ ಬಿ.ಎನ್‌. ತಿಮ್ಮೇಶ್‌ ನೇತೃತ್ವದಲ್ಲಿ ಬಿಗು ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ಬೇಡಿಕೆಗಳಿಗೆ ಸ್ಪಂದನೆ ಸ್ಥಳೀಯ ನಿವಾಸಿಗಳ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಅನಾರೋಗ್ಯಕ್ಕೆ ತುತ್ತಾಗಿರುವ ನಿವಾಸಿಗಳು ಚಿಕಿತ್ಸೆ ಪಡೆದಿರುವ ಬಗ್ಗೆ ವೈದ್ಯರ ಸೂಕ್ತ ದಾಖಲೆ ಒದಗಿಸಿದರೆ ಕಂಪೆನಿಯ ವತಿಯಿಂದ ಪರಿಹಾರದೊರಕಿಸಿಕೊಡುತ್ತೇವೆ.
– ಯೋಗೇಂದ್ರಪ್ಪ, ಯೋಜನಾ ಕಾರ್ಯನಿರ್ವಾಹಕ

Advertisement

ಪರಿಹಾರ ಒದಗಿಸಿ
ಜಲ್ಲಿ ಮಿಶ್ರಣ ಘಟಕದಿಂದ ಈ ಭಾಗದ ತೋಟಗಳಿಗೆ, ಪರಿಸರಕ್ಕೆ ವ್ಯಾಪಕ ಹಾನಿ ಉಂಟಾಗಿದೆ. ನಷ್ಟವನ್ನು ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳುತ್ತೆವೆ.
-ಜಗದೀಶ ದೇವಾಡಿಗ, ಗ್ರಾ.ಪಂ.ಸದಸ್ಯರು, ನಾವುಂದ

Advertisement

Udayavani is now on Telegram. Click here to join our channel and stay updated with the latest news.

Next