Advertisement

ಮನೆಗಳ ಸರ್ವೇ: ಗ್ರಾಮಸ್ಥರ ಆಕ್ರೋಶ

03:41 PM Aug 22, 2020 | Suhan S |

ಬಂಕಾಪುರ: ಸತತ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ಪರಿಶೀಲನೆಗೆ ಆಗಮಿಸಿದ್ದ ಪಿಡಿಒ ಇಮ್ತಿಯಾಜ್‌ ಮುಲ್ಲಾ ಹಾಗೂ ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಮುಳಗುಂದ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಸಮೀಪದ ಗುಡ್ಡದ ಚನ್ನಾಪುರ ಗ್ರಾಮದಲ್ಲಿ ನಡೆದಿದೆ.

Advertisement

ಕಳೆದ ಬಾರಿ ನೆರೆ ಹಾವಳಿಯಿಂದ ಬಿದ್ದ ಮನೆಗಳಿಗೆ ಪರಿಹಾರ ಇದೂವರೆಗೂ ತಲುಪಿಲ್ಲ. ಮತ್ತೆ ಈ ಬಾರಿ ಮಳೆಯಿಂದ ಹಾನಿಯಾದ ಮನೆಗಳ ಸರ್ವೇ ಕಾರ್ಯಕ್ಕೆ ಆಗಮಿಸಿದ್ದೀರಿ. ಮನೆಗಳ ಪರಿಶೀಲನೆಯಲ್ಲಿ ಕಳೆದ ಬಾರಿ ಆದ ಲೋಪ, ದೋಷಗಳನ್ನು ತಮ್ಮಿಂದ ಇದುವರೆಗೂ ಸರಿಪಡಿಸಲಾಗಿಲ್ಲ. ಈ ಹಿಂದೆಯೂ ತಹಶೀಲ್ದಾರ್‌ ಚಂದ್ರಶೇಖರ ಗಾಳಿ ಅವರು ಇರುವಾಗ ನೆರೆ ಹಾವಳಿಯಿಂದ ಮನೆ ಕಳೆದುಕೊಂಡ ನಿಜವಾದ ಫಲಾನುಭವಿಗಳಿಗೆ ಸಿ ಕೆಟಗೆರಿ ನೀಡಿ, ಅನರ್ಹ ಫಲಾನುಭವಿಗಳಿಗೆ ಎ ಕೆಟಗೆರಿ ನೀಡಿ ನೀಜವಾದ ಫಲಾನುಭವಿಗಳನ್ನು ವಂಚಿಸಲಾಗಿತ್ತು. ಇದರ ವಿರುದ್ಧ ಹೋರಾಟ ಮಾಡಿ ಮರು ಸರ್ವೇ ಮಾಡಿ ನಿಜವಾದ ಫಲಾನುಭವಿಗಳಿಗೆ ಪರಿಹಾರದ ಹಣ ನೀಡುವಂತೆ ತಹಶೀಲ್ದಾರ್‌ ರಲ್ಲಿ ಮನವಿ ಮಾಡಿದ್ದೆವು. ಮರು ಸರ್ವೇ ಮಾಡಿ ವರ್ಷ ಗತಿಸುತ್ತಾ ಬಂದರೂ ನಿಜವಾದ ಫಲಾನುಭವಿಗಳಿಗೆ ಪರಿಹಾರದ ಹಣ ತಲುಪದೇ ಇರುವುದರಿಂದ ಮನೆ ಕಳೆದುಕೋಂಡ ಫಲಾನುಭವಿಗಳು ನಿರ್ಗತಿಕರಾಗಿ ದನದ ಕೊಟ್ಟಿಗೆ,ಬಾಡಿಗೆ ಮನೆಗಳಲ್ಲಿ ದಿನ ದೂಡುತ್ತಿದ್ದಾರೆ. ಪರಿಹಾರದ ಹಣ ಇಂದು ಬರಬಹುದು, ನಾಳೆ ಬರಬಹುದು ಎಂದು ಚಾತಕ ಪಕ್ಷಿಯಂತೆ ಸ್ವಂತ ಸೂರಿನ ಕನಸನ್ನು ಕಾಣುವಂತಾಗಿದೆ ಎಂದು ಗ್ರಾಮಸ್ತರು ಆರೋಪಿಸಿದರು.

ತಹಶೀಲ್ದಾರ್‌ ಚಂದ್ರಶೇಖರ ಗಾಳಿ ಅವರು ವರ್ಗಾವಣೆಗೊಂಡ ನಂತರ ಪ್ರಕಾಶ ಕುದರಿ ಅವರು ಬಂದರು. ಇಗ ಪ್ರಭಾರಿ ತಹಶೀಲ್ದಾರ್‌ ರಾಗಿ ಸಿ.ಎನ್‌.ಬಂಗಿ ಅವರು ಆಗಮಿಸಿದ್ದಾರೆ. ಬಂದ ತಹಶೀಲ್ದಾರ್‌ರೆಲ್ಲರಿಗೆ ಮನೆಗಳ ಪರಿಶೀಲನೆಯಲ್ಲಾದ ಲೋಪದೋಷಗಳ ಬಗ್ಗೆ ಬರಿ ಕಥೆ ಹೇಳುವುದೇ ಆಗಿದೆ. ಆದರೆ, ಪರಿಹಾರದ ಹಣ ಇದುವರೆಗೂ ಫಲಾನಿಭವಿಗಳ ಕೈಗೆ ತಲುಪಿಲ್ಲ ಎಂದು ಆರೋಪಿಸಿದರು.

ಈ ಬಾರಿ ಮತ್ತೆ ಮಳೆಯಿಂದ ಹಾನಿಯಾದ ಮನೆಗಳ ಕಾಟಾಚಾರದ ಸರ್ವೇ ಮಾಡಲು ಬಂದಿದ್ದೀರಿ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಸರ್ವೇ ಕಾರ್ಯ ನ್ಯಾಯಸಮ್ಮತವಾಗಬೇಕು. ನಿಜವಾದ ನಿರಾಶ್ರಿತರು ಫಲಾನುಭವಿಗಳಾಗ ಬೇಕು. ಬಿದ್ದ ಮನೆಗಳ ಸರ್ವೇ ಕಾರ್ಯ ಮಾಡುವುದಿದ್ದರೆ ತಹಶೀಲ್ದಾರ್‌ ಸಮ್ಮುಖದಲ್ಲೇ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು.

ಆಗ ಸರ್ವೇ ಮಾಡಲು ಬಂದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬ‌ಂತೆ ಕಾಲ್ಕಿತ್ತರು. ಈ ವೇಳೆ ಪಿಡಿಒ ಇಮ್ತಿಯಾಜ್‌ ಮುಲ್ಲಾ, ಗ್ರಾಮಲೆಕ್ಕಾಧಿ ಕಾರಿ ಮಂಜುನಾಥ ಮುಳಗುಂದ, ತಾಪಂ ಸದಸ್ಯ ವಿಶ್ವನಾಥ ಹರವಿ, ಗ್ರಾಪಂ ಮಾಜಿ ಅಧ್ಯಕ್ಷ ಷಣ್ಮುಖ ಕಾಳಣ್ಣವರ, ಅಶೋಕ ಮಾವೂರ, ರಾಜು ಪಾಟೀಲ, ಫಕ್ಕೀರಗೌಡ ಮರಿಗೌಡ್ರ, ಪುಟ್ಟಯ್ಯ ಬಾಳೂರ, ಮಂಜು ಬಾಡದ, ನಿಂಗಪ್ಪ ಸಣ್ಣಕ್ಕಿ, ಬಸವರಾಜ ದೊಡ್ಡಮನಿ, ಎಲ್ಲಪ್ಪ ಆಡೂರ ಸೇರಿದಂತೆ ಇತರರು ಇದ್ದರು.

Advertisement

ಕಳೆದ ಬಾರಿ ನೆರೆ ಹಾವಳಿಯಿಂದ ಸೂರು ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುವ ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡಿಕೊಡುವವರೆಗೂ ಸರಕಾರ ಬಾಡಿಗೆ ಹಣ ನೀಡಬೇಕು. – ಷಣ್ಮುಖ ಕಾಳಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷರು

ಮೇಲಧಿಕಾರಿಗಳ ಆದೇಶದ ಮೇರೆಗೆ ಮಳೆಯಿಂದ ಹಾನಿಗೊಳಗಾದ ಮನೆಗಳ ಪರಿಶೀಲನೆಗೆ ತೆರಳಿದಾಗ ಗ್ರಾಮಸ್ಥರು ತಡೆಯೊಡ್ಡಿರುವ ಘಟನೆಯನ್ನು ತಹಶೀಲ್ದಾರ್‌ ಗಮನಕ್ಕೆ ತರಲಾಗಿದೆ. ಅವರ ಸಮ್ಮುಖದಲ್ಲೇ ನ್ಯಾಯಯುತವಾಗಿ ಸರ್ವೇ ಕಾರ್ಯ ಮಾಡಲಾಗುವುದು. –ಇಮ್ತಿಯಾಜ್‌ ಮುಲ್ಲಾ, ಪಿಡಿಒ, ಗುಡ್ಡದಚನ್ನಾಪುರ ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next