ಗಂಗಾವತಿ: ಕೋವಿಡ್-19 ರೋಗದ ವೈಜ್ಞಾನಿಕ ಮಾಹಿತಿಯ ಕೊರತೆಯಿಂದಾಗಿ ಜನರು ತಮ್ಮ ಊರಿನ ಸ್ಮಶಾನದಲ್ಲಿ ಕೋವಿಡ್-19 ಸೋಂಕಿತನ ಮೃತ ದೇಹವನ್ನು ಸಂಸ್ಕಾರಕ್ಕೆ ವಿರೋಧಿಸಿದ ಹಿನ್ನೆಲೆಯಲ್ಲಿ ಇಡೀ ರಾತ್ರಿ ಅಧಿಕಾರಿಗಳು ಸಂಸ್ಕಾರಕ್ಕಾಗಿ ಜಾಗರಣೆ ಮಾಡಿದ ಪ್ರಸಂಗ ಗಂಗಾವತಿ ತಾಲೂಕಿನ ಸಂಗಾಪೂರ ದಲ್ಲಿ ನಡೆದಿದೆ.
ಗಂಗವತಿ ತಾಲೂಕಿನ ಹಿರೇಜಂತಗಲ್ ನಿವಾಸಿಯಾಗಿದ್ದ 51 ವರ್ಷದ ವ್ಯಕ್ತಿ ಕೋವಿಡ್ ಸೋಂಕಿನಿಂದ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದನು ಮೃತದೇಹವನ್ನು ಕುಟುಂಬ ವರ್ಗ ಸೂಚಿಸುವ ಜಾಗದಲ್ಲಿ ದಫನ್ ಮಾಡಲಾಗುತ್ತದೆ. ಕುಟುಂಬ ಸದಸ್ಯರ ಮನವಿ ಮೇರೆಗೆ ಹಿರೇಜಂತಗಲ್ ಸ್ಮಶಾನದಲ್ಲಿ ದಫನ್ ಮಾಡಲು ಅಧಿಕಾರಿಗಳು ಸಿದ್ದತೆ ನಡೆಸಿದ್ದರು. ಆದರೆ ಸ್ಥಳೀಯ ನಿವಾಸಿಗಳು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಮೃತವ್ಯಕ್ತಿ ಮೂಲತಃ ಸಂಗಾಪೂರ ನಿವಾಸಿಯಾಗಿದ್ದು, ಆತನ ಮೃತದೇಹ ಅಲ್ಲಿಯೇ ಸಂಸ್ಕಾರ ಮಾಡುವಂತೆ ಆಗ್ರಹಿಸಿದ್ದರು.
ಬಳಿಕ ಶಾಸಕ ಪರಣ್ಣ ಮುನವಳ್ಳಿ ಮಧ್ಯೆ ಪ್ರವೇಶ ಮಾಡಿ ಸಂಗಾಪೂರದ ಸರಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲು ಸೂಚನೆ ನೀಡಿದರು. ಆದರೆ ಸೋಂಕಿತನ ಮೃತದೇಹ ಸಂಸ್ಕಾರ ಮಾಡಲು ಸಾಯಿ ನಗರ ಮತ್ತು ಸಂಗಾಪೂರ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮಧ್ಯರಾತ್ರಿ ವರೆಗೂ ಪ್ರತಿಭಟನೆ ನಡೆಸಿದ್ದರಿಂದ ಅಧಿಕಾರಿಗಳು ದಿಕ್ಕು ತೋಚದೆ ಜಿಲ್ಲಾಡಳಿತ ಮೊರೆಗೆ ಹೋಗಿದ್ದರು.
ಬಳಿಕ ಸಂಗಾಪೂರ ಗ್ರಾ.ಪಂ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ದಫನ್ ಮಾಡಲು ಮೇಲಾಧಿಕಾರಿಗಳು ಸೂಚನೆ ಮೇರೆಗೆ ಶವವನ್ನು ಬೆಳಗಿನ ಜಾವ ಗುಡ್ಡಪ್ರದೇಶದ ಮಧ್ಯದಲ್ಲಿ ಸಂಸ್ಕಾರ ಮಾಡಿದರು.
ಅಧಿಕಾರಿಗಳಿಗೆ ಸಂಕಷ್ಟ: ಕೋವಿಡ್ ಸೋಂಕಿನಿಂದ ಮೃತರಾದವರ ಶವಸಂಸ್ಕಾರ ಮಾಡಲು ಆಯಾ ಊರಿನ ಜನ ಬಿಡುತ್ತಿಲ್ಲ. ತಾಲೂಕಿನಲ್ಲಿ ಇದುವರೆಗೆ ಮೂರು ಜನ ಸೋಂಕಿನಿಂದ ಮೃತಪಟ್ಟಿದ್ದು ಮರಳಿ ಗ್ರಾಮದಲ್ಲಿ ಮೃತ ಮಹಿಳೆಯ ಶವ ದಫನ್ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಮಧ್ಯಾನ್ಹದ ವರೆಗೆ ಶವಸಂಸ್ಕಾರ ಆಗಿರಲಿಲ್ಲ. ಶಾಸಕ ದಡೇಸೂಗೂರು ಬಸವರಾಜ ಮಧ್ಯೆ ಪ್ರವೇಶ ಮಾಡಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ಶವಸಂಸ್ಕಾರ ಮಾಡಿಸಿದ್ದರು.
ಸೋಂಕಿನಿಂದ ಮೃತಪಟ್ಟ ಪ್ರತಿ ಸಂದರ್ಭದಲ್ಲಿ ಶವವನ್ನು ದಫನ್ ಮಾಡಲು ಅಧಿಕಾರಿಗಳು ತೊಂದರೆ ಅನುಭವಿಸಬೇಕಾಗಿದ್ದು ಸರಕಾರ ಕೂಡಲೇ ಸೋಂಕಿತರ ಮೃತದೇಹ ದಫನ್ ಮಾಡಲು ಮಾರ್ಗಸೂಚಿ ಮಾಡಿ ಜನರಿಗೆ ಮನವರಿಕೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆಯದಂತೆ ಕೋವಿಡ್-19 ನಿಯಮಗಳ ಅನುಸಾರ ಕ್ರಮ ವಹಿಸಲಾಗಿತ್ತದೆ ಎಂದು ಡಿಸಿ ಸುರಳ್ಕರ್ ವಿಕಾಸ ಕಿಶೋರ್ ಉದಯವಾಣಿ ಗೆ ತಿಳಿಸಿದ್ದಾರೆ