Advertisement
ಹೆಮ್ಮಾಡಿ ಕಟ್ಟುವಿನ ಸರಕಾರಿ ಕಿ.ಪ್ರಾ. ಶಾಲೆಯ ಒಂದು ಕೊಠಡಿಯ ಮಾಡಿನ ಪಕ್ಕಾಸಿ ಮುರಿದು ಕುಸಿದು ಬೀಳುವುದರಲ್ಲಿ ಇತ್ತು. ಈಗ ಶಾಲೆಗೆ ದಸರಾ ರಜೆ ಇರುವುದರಿಂದ ಮತ್ತೆ ಶಾಲೆ ಆರಂಭವಾಗುವುದರ ಮೊದಲು ದುರಸ್ತಿ ನಡೆಸುವಂತೆ ಶಾಲೆಯ ವತಿಯಿಂದ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಪಂಚಾಯತ್ ನಿಂದ ತುರ್ತು ಅನುದಾನ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಿಡಿಒ ಕಾರ್ಯವೈಖರಿ ಬಗ್ಗೆ ಗ್ರಾ.ಪಂ. ಅಧ್ಯಕ್ಷ, ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಒಂದೇ ಕೊಠಡಿ
ಬೆಳ್ಳಿ ಹಬ್ಬ ವರ್ಷಾಚರಣೆ ಸಂಭ್ರಮದಲ್ಲಿರುವ ಈ ಶಾಲೆಯಲ್ಲಿ ಪ್ರಸ್ತುತ ಒಂದ ರಿಂದ 5ನೇ ತರಗತಿಯವರೆಗೆ 27 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶೈಕ್ಷಣಿಕ ಸಾಲಿನಲ್ಲಿ 6 ಮಂದಿ ದಾಖಲಾತಿ ಮಾಡಿಕೊಂಡಿದ್ದಾರೆ. ಇಬ್ಬರು ಶಿಕ್ಷಕಿಯರಿದ್ದಾರೆ. ಇಲ್ಲಿ ಆರಂಭ ದಿಂದ ಎರಡು ಕೊಠಡಿಯಿದೆ. ಎಲ್ಲ 5 ತರಗತಿಗಳಿಗೂ ಇಲ್ಲಿಯೇ ಪಾಠ- ಪ್ರವಚನ ನಡೆಯುತ್ತಿದೆ. ಇನ್ನು ಶಿಕ್ಷಕರ ಕೊಠಡಿಯೂ ಇಲ್ಲ. ಈಗ ಎರಡರಲ್ಲಿ ಒಂದರ ಮಾಡು ಕುಸಿಯುವ ಭೀತಿ ಇದ್ದುದರಿಂದ ಆ ಕೊಠಡಿಯಲ್ಲಿ ತರಗತಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಕೊಠಡಿ ಕೊರತೆ ಎದುರಾಗಿತ್ತು.
ಶಾಸಕರ ಅನುದಾನ
ಈ ಶಾಲೆಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರ ಮುತುವರ್ಜಿಯಲ್ಲಿ ಶಾಸಕರ ನಿಧಿಯಡಿ ಅನುದಾನ ಮಂಜೂ ರಾಗಿದ್ದು, ಅದನ್ನು ಹೊಸ ಕೊಠಡಿ ನಿರ್ಮಾಣಕ್ಕೆ ಬಳಸಿಕೊಳ್ಳುವ ಉದ್ದೇಶವನ್ನು ಶಾಲಾಡಳಿತ ಹೊಂದಿದೆ.
ನನ್ನ ತೀರ್ಮಾನವಲ್ಲ: ಶಾಲೆಯ ದುರಸ್ತಿ ಬಗ್ಗೆ ಅಧ್ಯಕ್ಷರು, ಸದಸ್ಯರು ಸಭೆ ನಡೆಸಿ, ಆ ಸಭೆಯಲ್ಲಿ ತುರ್ತು ಅನುದಾನ ಬಿಡುಗಡೆ ಬಗ್ಗೆ ತೀರ್ಮಾನವಾಗಬೇಕು. ಆ ಸಭೆಯಲ್ಲಿ ತೀರ್ಮಾನ ಕೈಗೊಂಡ ಅನಂತರ ಅನುದಾನ ಬಿಡುಗಡೆಗೆ ಅವಕಾಶವಿದೆ. ತುರ್ತು ಅನುದಾನ ಬಿಡುಗಡೆ ಆಗದಿರುವ ಬಗ್ಗೆ ನನ್ನ ಪಾತ್ರವಿಲ್ಲ. – ಮಂಜು ಬಿಲ್ಲವ, ಹೆಮ್ಮಾಡಿ ಪಿಡಿಒ
ಮನವಿ ನೀಡಲಾಗಿದೆ: ಕಟ್ಟು ಶಾಲಾ ದುರಸ್ತಿ ಸಂಬಂಧ ಈಗ ರಜೆ ಇರುವುದರಿಂದ ತುರ್ತು ದುರಸ್ತಿಗೆ ಅನುದಾನ ಬಿಡುಗಡೆ ಬಗ್ಗೆ ಪಿಡಿಒ ಗಮನಕ್ಕೆ ಅಧ್ಯಕ್ಷರಾದಿಯಾಗಿ ನಾವೆಲ್ಲ ಗಮನಕ್ಕೆ ತಂದಿದ್ದೇವೆ. ಆದರೆ ಅವರು ಈ ಬಗ್ಗೆ ನಮಗೆ ಸಹಕಾರ ನೀಡದಿರುವುದರಿಂದ ನಾವೇ ವೈಯಕ್ತಿಕ ನೆಲೆಯಲ್ಲಿ ಹಣ ಸಂಗ್ರಹಿಸಿ, ದುರಸ್ತಿ ಮಾಡುತ್ತಿದ್ದೇವೆ. -ಸತ್ಯನಾರಾಯಣ, ಮಾಜಿ ಅಧ್ಯಕ್ಷರು, ಹೆಮ್ಮಾಡಿ ಗ್ರಾ.ಪಂ.