ಬಂಗಾರಪೇಟೆ: ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಗ್ರಾಪಂ ಅಧ್ಯಕ್ಷೆ ಮಂಜುಳಾ ಅವರ ಪತಿ ಮಹದೇವ್ ನಡುವೆ ಮಾತಿನ ವಾಗ್ಧಾಳಿ ನಡೆದ ಪ್ರಸಂಗ ತಾಲೂಕಿನ ದೋಣಿಮಡಗು ಗ್ರಾಪಂನ ತನಿಮಡಗು ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿ ನಡೆಯಿತು.
ಗ್ರಾಮ ವಾಸ್ತವ್ಯ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡುವ ವೇಳೆ, ಶಾಸಕನಾಗಿ ನಾನು 10 ವರ್ಷಗಳಲ್ಲಿ ದೋಣಿಮಡಗು ಗ್ರಾಪಂನ ಎಲ್ಲಾ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಹಿಂದೆ ಶಾಸಕರು ಯಾರೂ ಏನೂ ಮಾಡಿಲ್ಲ ಎಂದು ತಮ್ಮ ಸಾಧನೆಗಳ ಪಟ್ಟಿ ವಿವರಿಸಿದಾಗ, ಗ್ರಾಪಂ ಅಧ್ಯಕ್ಷೆ ಮಂಜುಳಾ ಅವರ ಪತಿ ಮಹಾದೇವ್ ಮಧ್ಯೆಪ್ರದೇಶ ಮಾಡಿ, ಶಾಸಕರಾಗಿ ನೀವು ತನಿಮಡಗು ಗ್ರಾಮಕ್ಕೆ ಏನೇನು ಮಾಡಿಲ್ಲ, ಬರೀ ಸುಳ್ಳು ಭರವಸೆ ನೀಡುವಿರಿ ಅಷ್ಟೇ ಎಂದು ಏರಿದ ಧ್ವನಿಯಲ್ಲಿ ಹೇಳಿದರು.
ಅಧ್ಯಕ್ಷರಾಗಿ ಏನು ಮಾಡಿರುವೆ: ಮಹಾದೇವ್ ಮಾತಿನಿಂದ ಆಕ್ರೋಶಗೊಂಡ ಶಾಸಕರು, ನೀನು ಗ್ರಾಪಂ ಅಧ್ಯಕ್ಷರಾಗಿ ಏನು ಮಾಡಿರುವೆ, ಗ್ರಾಪಂನಲ್ಲಿ ಹೆಣ್ಣು ಮಗಳು ಇರುವುದರಿಂದ ನಾನು ಗ್ರಾಪಂನಲ್ಲಿ ಹಲವು ದೋಷಗಳಿದ್ದರೂ ತಲೆಹಾಕಿಲ್ಲ. ಮೊದಲು ನಿಮ್ಮ ಜವಾಬ್ದಾರಿಯನ್ನು ಅರಿತು ಮಾತನಾಡು ಎಂದಾಗ ಇಬ್ಬರ ನಡುವೆ ಮಾತಿನ ವಾಗ್ಧಾಳಿ ನಡೆಯಿತು. ರಸ್ತೆ, ಚೆಕ್ ಡ್ಯಾಂಗೆ ಹಣ ಎಲ್ಲಿಂದ ಬಂತು: ಮಾತೆತ್ತಿದರೆ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗಿದೆ, ರಸ್ತೆ ಮಾಡಲಾಗಿದೆ, ಬೇರೆಯವರ ಕೆಲಸವನ್ನು ನಾನು ಮಾಡಿರುವೆ ಎನ್ನುವಿರಿ, ಅಲ್ಲದೆ, ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನವಿಲ್ಲ ಎನ್ನುವಿರಿ, ಆಗಿದ್ದರೆ ರಸ್ತೆ, ಚೆಕ್‌ಡ್ಯಾಂಗೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಶಾಸಕರಿಗೆ ಸವಾಲು: ದೋಣಿಮಡಗು ಗ್ರಾಪಂ ಸುತ್ತಮುತ್ತಲಿಂದ ಸಾವಿರಾರು ಮಂದಿ ಬೆಂಗಳೂರಿಗೆ ಹೋಗುವರು. ಅವರಿಗೆ ಅನುಕೂಲವಾಗಲಿ ಎಂದು ಜೋಲಾರ್‌ಪೇಟ್ ಎಕ್ಸ್‌ಪ್ರೆಸ್ ರೈಲನ್ನು ನಿಲುಗಡೆ ಮಾಡುವಂತೆ ಮಾಡಿದ ಮನವಿ, ಕಸದ ಬುಟ್ಟಿ ಸೇರಿದೆ. ನಿಮ್ಮವರೇ ರೈಲ್ವೆ ಮಂತ್ರಿಯಾಗಿದ್ದರೂ ಸಾಧ್ಯವಾಗಿಲ್ಲ. ಸಂಸದ ಎಸ್.ಮುನಿಸ್ವಾಮಿ ಗ್ರಾಮಸ್ಥರಿಗೆ ಸ್ಪಂದಿಸಿ ಮಾಡಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆಗೈದರು.
ನನ್ನ ಸಾಧನೆ ಬಗ್ಗೆ ಪಟ್ಟಿ ನೀಡುವೆ, ನೀನು ನಿನ್ನ ಸಾಧನೆ ಏನೆಂದು ತೋರಿಸಿ ಎಂದು ಶಾಸಕರು ಸವಾಲು ಹಾಕಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಬಿಇಒ ಡಿ.ಎನ್.ಸುಕನ್ಯ, ಸಿಡಿಪಿಒ ಮುನಿರಾಜು, ಉಪತಹಶೀಲ್ದಾರ್ ಶಿವಣ್ಣ, ಆರ್‌ಐ ದಿವ್ಯಾಆರಾಧನ, ಪಿಡಿಒ ವಸಂತಕುಮಾರ್, ಮುಖಂಡರಾದ ಎಸ್.ಕೆ.ಜಯಣ್ಣ, ಲಕ್ಷ್ಮೀ ನಾರಾಯಣಪ್ರಸಾದ್ ಮುಂತಾದವರಿದ್ದರು.