Advertisement
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮೀಣ ಪ್ರದೇಶ ದಲ್ಲಿ ಕ್ರೀಡಾ ಅಂಕಣ ನಿರ್ಮಾಣ ಮಾಡಲು ಹಾಗೂ ಕ್ರೀಡಾ ತರಬೇತಿ ನೀಡಲು ಉಭಯ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಜಂಟಿಯಾಗಿ ಮಾರ್ಗಸೂಚಿ ರೂಪಿಸಿ ಸುತ್ತೋಲೆ ಹೊರಡಿಸಿದ್ದಾರೆ.
ಗ್ರಾಮೀಣ ಕ್ರೀಡಾ ಅಂಕಣಗಳಲ್ಲಿ ನರೇಗಾ ಯೋಜನೆಯಡಿ ಸ್ಥಳೀಯ ಆವಶ್ಯಕತೆಗಳಿಗೆ ಅನುಗುಣವಾಗಿ ರನ್ನಿಂಗ್ ಟ್ರ್ಯಾಕ್ , ಕಬಡ್ಡಿ, ಖೋಖೋ, ವಾಲಿಬಾಲ್, ಬಾಸ್ಕೆಟ್‌ಬಾಲ್ ಇತ್ಯಾದಿ ಅಂಕಣಗಳನ್ನು ನಿರ್ಮಿಸಬೇಕು. ಇದರ ವೆಚ್ಚವನ್ನು ನರೇಗಾ ಯೋಜನೆಯಡಿ ಭರಿಸಬೇಕು. ಪ್ರತೀ ಪಂಚಾಯತ್‌ನಲ್ಲಿ ಒಂದರಂತೆ ಸರಕಾರಿ ಶಾಲೆ, ಕಾಲೇಜು, ವಸತಿ ನಿಲಯಗಳಲ್ಲಿ ಆದ್ಯತೆ ಮೇರೆಗೆ ಕ್ರೀಡಾ ಅಂಕಣಗಳನ್ನು ನಿರ್ಮಿಸಬೇಕು ಎಂದು ರಾಜ್ಯದ ಎಲ್ಲ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚುವರಿ ಕ್ರಿಯಾಯೋಜನೆ-ಅವಕಾಶ
ಕ್ರೀಡಾ ಅಂಕಣ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಹೆಚ್ಚುವರಿ ಕ್ರಿಯಾಯೋಜನೆ ತಯಾರಿಸುವುದು ಆವಶ್ಯವಿದ್ದಲ್ಲಿ ಅಂತಹ ಕ್ರಿಯಾ ಯೋಜನೆಗಳಿಗೆ ಜಿಲ್ಲಾ ಪಂಚಾಯತ್‌ನಿಂದ ಅನುಮೋದನೆ ಪಡೆಯಬೇಕು. ಸುತ್ತೋಲೆಯಲ್ಲಿ ತಿಳಿಸಿರುವ ಕ್ರೀಡಾ ಅಂಕಣಗಳ ಜತೆಗೆ ಅಥವಾ ಬದಲಾಗಿ ಸ್ಥಳೀಯವಾಗಿ ಆವಶ್ಯವಿರುವ ಇತರ ಕ್ರೀಡಾ ಅಂಕಣಗಳ ಅಂದಾಜು ಪಟ್ಟಿ ತಯಾರಿಸಿಕೊಂಡು ಅನುಷ್ಠಾನಗೊಳಿಸಬಹುದು ಎಂದೂ ತಿಳಿಸಲಾಗಿದೆ.
Related Articles
ಕ್ರೀಡಾ ಅಂಕಣಗಳನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸರಕಾರಿ ನಿವೇಶನ ಅಥವಾ ಸರಕಾರಿ ಶಾಲೆ-ಕಾಲೇಜು ಆವರಣದಲ್ಲಿ ನಿರ್ಮಿಸಬೇಕು. ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ನೋಂದಾಯಿತ ಕೂಲಿ ಕಾರ್ಮಿಕರಿಂದ ನಿರ್ವಹಿಸಬೇಕು ಮತ್ತು ಯೋಜನೆಯಡಿ ಅನುಮತಿಸಲ್ಪಟ್ಟ ಯಂತ್ರಗಳನ್ನು ಹೊರತುಪಡಿಸಿ ಇತರ ಯಾವುದೇ ಯಂತ್ರಗಳನ್ನು ಬಳಸಬಾರದು. ಕ್ರೀಡಾ ಅಂಕಣ ನಿರ್ಮಾಣ ಕಾಮಗಾರಿಯಲ್ಲಿ ನರೇಗಾ ಯೋಜನೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕ್ರೀಡಾ ಅಂಕಣ ಕಾಮಗಾರಿಗಳಲ್ಲಿ ಸಾಮಗ್ರಿ ವೆಚ್ಚ ಅಧಿಕ ಇರುವುದರಿಂದ ಜಿಲ್ಲೆಯ ಸಾಮಗ್ರಿ ವೆಚ್ಚದ ಅನುಪಾತ ಶೇ. 40ರಷ್ಟು ಮೀರದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.
Advertisement
ಅಂದಾಜು ಮೊತ್ತ ಎಷ್ಟು?ಯಾವ ಕ್ರೀಡಾ ಅಂಕಣಕ್ಕೆ ಎಷ್ಟು ವೆಚ್ಚ ಮಾಡಬೇಕು ಎನ್ನುವುದರ ಬಗ್ಗೆಯೂ ನಿರ್ದೇಶನ ನೀಡಲಾಗಿದೆ. ಕಬಡ್ಡಿ ಅಂಕಣಕ್ಕೆ 2.60 ಲಕ್ಷ ರೂ., ಖೋಖೋ ಅಂಕಣಕ್ಕೆ 3.30 ಲಕ್ಷ ರೂ., ವಾಲಿಬಾಲ್ ಅಂಕಣಕ್ಕೆ 5.10 ಲಕ್ಷ ರೂ., ಬಾಸ್ಕೆಟ್‌ಬಾಲ್ ಅಂಕಣಕ್ಕೆ 5.20 ಲಕ್ಷ ರೂ., ರನ್ನಿಂಗ್ ಟ್ರಾÂಕ್ ಅಂಕಣಕ್ಕೆ 5 ಲಕ್ಷ ರೂ. ಸೇರಿ ಒಟ್ಟು 21.20 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಿ ನಿರ್ದೇಶನ ನೀಡಲಾಗಿದೆ. ಕ್ರೀಡಾ ಅಂಕಣ ನಿರ್ಮಾಣದ ಬಳಿಕ ತಲಾ 25 ಸಾವಿರ ರೂ.ವರೆಗೆ ಕ್ರೀಡಾ ಸಾಮಗ್ರಿಗಳನ್ನು ಜಿಲ್ಲಾ ಪಂಚಾಯತ್ ವಲಯದ ಲೆಕ್ಕ ಶೀರ್ಷಿಕೆಯ ಕ್ರೀಡಾಕೂಟ ಮತ್ತು ರ್ಯಾಲಿ ಸಂಘಟನೆ ಹಾಗೂ ಯುವಜನ ಕ್ರೀಡಾ ಚಟುವಟಿಕೆ ಪ್ರೋತ್ಸಾಹದಡಿ ಒದಗಿಸಿರುವ ಅನುದಾನ ನೀಡಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಮಟ್ಟದ ಉಪ ಹಾಗೂ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.