Advertisement

ರಾಮಕುಂಜದ ಅಮೈ ಕೆರೆಗೆ ಭದ್ರಾವತಿ ಮೀನು

02:35 AM Jul 26, 2018 | Team Udayavani |

ಪುತ್ತೂರು: ಹೊಸ ಆದಾಯ ಮೂಲದ ಹುಡುಕಾಟದಲ್ಲಿ ತೊಡಗಿರುವ ಗ್ರಾ.ಪಂ.ಗಳು ಇದೀಗ ಕೃಷಿಯ ಕಡೆಗೂ ಚಿತ್ತ ಹರಿಸಿವೆ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ ರಾಮಕುಂಜ ಗ್ರಾ.ಪಂ. ಹೊಸ ಬೆಳವಣಿಗೆಗೆ ನಾಂದಿ ಹಾಡಿದ್ದು, ಕೆರೆಯಲ್ಲಿ ಮೀನು ಕೃಷಿಗೆ ಮುಂದಾಗಿದೆ. 1.18 ಎಕರೆ ಜಾಗದಲ್ಲಿ ಸುಮಾರು ಮುಕ್ಕಾಲು ಎಕರೆಯಷ್ಟು ವಿಸ್ತೀರ್ಣದಲ್ಲಿ ಅಮೈ ಕೆರೆ ಹರಡಿಕೊಂಡಿದೆ. ಕೆಲ ವರ್ಷಗಳ ಹಿಂದಷ್ಟೇ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ನರೇಗಾ ಯೋಜನೆಯ 30 ಲಕ್ಷ ರೂ., SKDRDPಯ 5 ಲಕ್ಷ ರೂ. ಸಹಾಯಧನ, ಶಾಸಕರ 20 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಲಕ್ಷಾಂತರ ವೆಚ್ಚ ಮಾಡಿರುವ ಕೆರೆಯಿಂದ ಸುತ್ತಮುತ್ತಲಿನ ಅಂತರ್ಜಲದ ಮಟ್ಟ ಏರಿಕೆಯಾಗಿದೆ. ಇತರರಿಗೆ ಮಾದರಿಯಾಗುವ ಜತೆ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬಹುದು ಎನ್ನುವುದು ಗ್ರಾ.ಪಂ. ಲೆಕ್ಕಾಚಾರ.

Advertisement

ಬೇಸಗೆಯಲ್ಲೂ ಬರವಿಲ್ಲ
ಕೆರೆಯಲ್ಲಿ ಆಗಲೇ ಒಂದಷ್ಟು ಮೀನುಗಳಿವೆ. ಇವುಗಳನ್ನು ಖಾಲಿ ಮಾಡುವ ಕೆಲಸ ನಡೆಯುತ್ತಿದೆ. ಅನಂತರ ಸಾಮಾನ್ಯ ಗೆಂಡೆ ಮೀನುಗಳನ್ನು ಬಿಡಲಾಗುವುದು. 7 ಸಾವಿರದಷ್ಟು ಮೀನುಗಳನ್ನು ಬಿಟ್ಟರೆ, ಬೇಸಿಗೆಯಲ್ಲಿ ಏನು ಮಾಡುವುದು ಎನ್ನುವ ಭಯ ಬೇಡ. ಏಕೆಂದರೆ, ಈ ಕೆರೆಯಲ್ಲಿ ಬೇಸಗೆ ಕಾಲದಲ್ಲೂ ಸುಮಾರು 20 ಅಡಿಯಷ್ಟು ನೀರು ಸಂಗ್ರಹವಿರುತ್ತದೆ. ವರ್ಷದ ಯಾವುದೇ ಋತುವಿನಲ್ಲೂ ಈ ಕೆರೆ ಬತ್ತುವುದಿಲ್ಲ.


ಆದಾಯದ ಲೆಕ್ಕಾಚಾರ ಹೀಗಿದೆ

ಮೀನು ಕೃಷಿಯಿಂದ ಸುಮಾರು 5 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.  ಸಾಮಾನ್ಯ ಗೆಂಡೆ ಮೀನು ವರ್ಷಕ್ಕೆ 1ರಿಂದ 1.5 ಕೆ.ಜಿ.ಯಷ್ಟು ತೂಗು ತ್ತದೆ. ಈ ಬಾರಿ 7 ಸಾವಿರ ಮೀನುಗಳನ್ನು ಕೆರೆಗೆ ಬಿಡಲಾಗುವುದು. ಸಾವಿರ ಮೀನಿಗೆ 300 ರೂ.ಗಳಂತೆ 2,100 ರೂ.ಗಳನ್ನು ರಾಮಕುಂಜ ಗ್ರಾ.ಪಂ. ಪಾವತಿಸುತ್ತದೆ. ಬಳಿಕ ಇದರ ಆಹಾರಕ್ಕೆ ಒಂದಷ್ಟು ಖರ್ಚು ಇದೆ. ಅದು ಬಿಟ್ಟರೆ ಬೇರಾವ ಖರ್ಚೂ ಇಲ್ಲ. ಟೆಂಡರ್‌ ಕರೆಯುವುದೇ ಅಥವಾ ಗ್ರಾ.ಪಂ. ನೇರವಾಗಿ ನಿರ್ವಹಣೆ ಮಾಡುವುದೇ ಎನ್ನುವ ತೀರ್ಮಾನಕ್ಕೆ ಬರಲಾಗಿಲ್ಲ.

ಸಿಹಿನೀರಿನ ಮೀನು
ಹೆಚ್ಚಿನವರು ಸಮುದ್ರದ ಮೀನುಗಳನ್ನು ಆಹಾರವಾಗಿ ಬಳಕೆ ಮಾಡುತ್ತಾರೆ. ಮಳೆಗಾಲ ಸಂದರ್ಭ ಸಿಹಿ ನೀರಿನ ಮೀನುಗಳ ಬಳಕೆಯೂ ಇದೆ. ಕೆರೆಗಳು ಕ್ಷೀಣಿಸುತ್ತಿದ್ದಂತೆ ಸಿಹಿನೀರಿನ ಮೀನುಗಳ ಸಂಖ್ಯೆ ಕಡಿಮೆಯಾಗಿದ್ದು, ಸಮುದ್ರದ ಮೀನುಗಳ ಬೆಲೆ ವಿಪರೀತ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿಹಿನೀರಿನಲ್ಲಿ ಮೀನು ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.

7 ಸಾವಿರ ಮೀನು
ಪುತ್ತೂರು ತಾ.ಪಂ.ನ ಸಹಾಯಕ ನಿರ್ದೇಶಕ ನವೀನ್‌ ಭಂಡಾರಿ ಅವರು ಈ ಯೋಜನೆಯ ರೂವಾರಿ. ಮಂಗಳೂರಿನ ಫಿಶರೀಶ್‌ ಕಾಲೇಜನ್ನು ಸಂಪರ್ಕಿಸಿ, ಮೀನು ಕೃಷಿ ಬಗ್ಗೆ ಮಾಹಿತಿ ಪಡೆದರು. ಅವರ ಸಹಕಾರ ಪಡೆದುಕೊಂಡು, ಶಿವಮೊಗ್ಗದ ಭದ್ರಾವತಿ ಮೀನು ಮರಿ ಉತ್ಪಾದನ ಕೇಂದ್ರವನ್ನು ಸಂಪರ್ಕಿಸಿದರು. ಸುಮಾರು ಮುಕ್ಕಾಲು ಎಕರೆ ವಿಸ್ತೀರ್ಣದ ಕೆರೆಗೆ 7 ಸಾವಿರದಷ್ಟು ಸಾಮಾನ್ಯ ಗೆಂಡೆ ಮೀನುಗಳನ್ನು ಹಾಕಬಹುದು ಎನ್ನುವ ಲೆಕ್ಕಾಚಾರವನ್ನೂ ಹಾಕಲಾಯಿತು. ಗ್ರಾ.ಪಂ. ಬಳಿ ಚರ್ಚಿಸಿ ಈ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಮುಂದಿನ 15 ದಿನಗಳೊಳಗೆ ಕೆರೆಗೆ ಮೀನುಗಳನ್ನು ಬೀಡುವುದೆಂದು ನಿರ್ಧರಿಸಲಾಗಿದೆ.

Advertisement

ರಾಜ್ಯಕ್ಕೆ ಮಾದರಿಯಾಗಲಿದೆ
ಗ್ರಾ.ಪಂ.ನ ಉತ್ಸಾಹದಿಂದ ಅಮೈ ಕೆರೆಯಲ್ಲಿ ಮೀನು ಕೃಷಿ ಮಾಡಲು ಮುಂದಾಗಿದ್ದೇವೆ. ಗ್ರಾಮಸ್ಥರು ಸಹಕಾರ ನೀಡಿದ್ದು, ರಾಜ್ಯಕ್ಕೆ ಮಾದರಿಯಾಗುವ ಕೆರೆ ನಿರ್ಮಾ ಣವಾಗಲಿದೆ. ಇದೇ ಮಾದರಿಯಲ್ಲಿ ಗೋಳಿತ್ತೂಟ್ಟಿನಲ್ಲೂ ಇನ್ನೊಂದು ಕೆರೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ಕೆರೆಯಲ್ಲಿ ಮೀನು ಕೃಷಿ ಮಾಡಿದರೆ ವರಮಾನಕ್ಕೆ ದಾರಿ ಆಗುತ್ತದೆ. 15 ದಿನದಲ್ಲಿ ಸಾಮಾನ್ಯ ಗೆಂಡೆ ಮೀನುಗಳನ್ನು ಕೆರೆಗೆ ಬಿಡುತ್ತೇವೆ.
– ನವೀನ್‌ ಭಂಡಾರಿ, ಪುತ್ತೂರು ತಾ.ಪಂ. ಸಹಾಯಕ ನಿರ್ದೇಶಕ

— ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next