Advertisement

LAC ಸನಿಹ ಚೀನಾದಿಂದ ಹಳ್ಳಿ ನಿರ್ಮಾಣ

09:40 PM May 26, 2023 | Team Udayavani |

ಡೆಹ್ರಾಡೂನ್‌: ಗಡಿ ವಿಚಾರವಾಗಿ ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುತ್ತಲೇ ಇರುವ ಚೀನಾ, ಇದೀಗ ಉತ್ತರಾಖಂಡದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯಲ್ಲಿ ಗಡಿ ಗ್ರಾಮಗಳ ನಿರ್ಮಾಣಕ್ಕೆ ಮುಂದಾಗಿದೆ. ಎಲ್‌ಎಸಿಯಿಂದ 11 ಕಿ. ಮೀ. ದೂರದಲ್ಲಿ 250 ನಿವಾಸಗಳನ್ನೊಳಗೊಂಡಿರುವ ಗ್ರಾಮವನ್ನು ನಿರ್ಮಿಸುತ್ತಿದೆ ಎಂದು ಎಂದು ಮೂಲಗಳು ತಿಳಿಸಿವೆ.

Advertisement

ಗಾಲ್ವಾನ್‌ ವಿಚಾರವಾಗಿ ಭಾರತವನ್ನು ಕೆಣಕಿ ಪೆಟ್ಟು ತಿಂದ ಬಳಿಕವೂ ಅರುಣಾಚಲ ಪ್ರದೇಶದ ಗಡಿ ವಿಚಾರದಲ್ಲೂ ಚೀನಾ ಉದ್ಧಟತನ ಮುಂದುವರಿಸಿತ್ತು. ಇದೀಗ ಉತ್ತರಾಖಂಡದ ಗಡಿಗಳತ್ತ ಚೀನಾ ಕಣ್ಣಾಯಿಸಿದೆ. ಈಗಾಗಲೇ ಗಡಿಯಿಂದ 35 ಕಿ.ಮೀ.ದೂರದಲ್ಲಿ 55-56 ಮನೆಗಳನ್ನು ನಿರ್ಮಿಸಿದ್ದು, ಪೀಪಲ್‌ ಲಿಬರೇಶನ್‌ ಆರ್ಮಿ(ಪಿಎಲ್‌ಎ) ಅವುಗಳ ಕಾವಲಿಗೆ ನಿಂತಿದೆ. ಈ ಸಂದರ್ಭವನ್ನೇ ಬಳಸಿಕೊಂಡು ಪೂರ್ವ ಗಡಿಯಾದ್ಯಂತ ಒಟ್ಟು 300 ರಿಂದ 400 ಮನೆಗಳನ್ನು ನಿರ್ಮಿಸಿಬಿಡಲು ಚೀನಾ ಯೋಜಿಸುತ್ತಿದೆ.
ಉತ್ತರಾಖಂಡವು ಚೀನಾದ ಜತೆಗೆ 350 ಕಿ.ಮೀ. ಗಡಿ ಹಂಚಿಕೊಂಡಿದ್ದು, ಬಹುತೇಕ ಗಡಿ ಗ್ರಾಮಗಳಲ್ಲಿ ಜೀವನೋಪಾಯ ಅವಕಾಶಗಳ ಕೊರತೆಯಿಂದಾಗಿಯೇ ಜನರು ಗ್ರಾಮಗಳನ್ನು ತೊರೆದಿದ್ದಾರೆ. ಇದನ್ನೇ ಚೀನಾ ಅಸ್ತ್ರವಾಗಿಸಿಕೊಳ್ಳಲು ಹೊರಟಿದೆ ಎನ್ನಲಾಗಿದೆ.

6 ಕಿ.ಮೀ. ಸುರಂಗ ನಿರ್ಮಾಣಕ್ಕೆ ಭಾರತ ಸಜ್ಜು
ಭಾರತ-ಚೀನಾ ಗಡಿ ಭಾಗದಲ್ಲಿರುವ ಉತ್ತರಾಖಂಡದ ಘಟಿಯಾಬಗರ್‌ ಹಾಗೂ ಲಿಪುಲೇಖ್‌ ರಸ್ತೆಯಲ್ಲಿ ಬುಂಡಿ ಮತ್ತು ಗಾರ್ಬಿಯಂಗ್‌ ನಡುವೆ 6 ಕಿ.ಮೀ. ದೂರದ ಸುರಂಗ ನಿರ್ಮಿಸಲು ಭಾರತ ಸನ್ನದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಟಿನೋಕ್‌ ಇಂಡಿಯಾ ಕನ್ಸಲ್ಟೆಂಟ್ಸ್‌ ಸಂಸ್ಥೆಯು ಈಗಾಗಲೇ ಸಮೀಕ್ಷೆ ಆರಂಭಿಸಿದ್ದು, ಸುರಂಗ ನಿರ್ಮಾಣವಾದರೆ ಲಿಪುಲೇಖ್‌ ಪಾಸ್‌ನ ಕೊನೆಯ ಗಡಿ ಚೆಕ್‌ಪೋಸ್ಟ್‌ ಅನ್ನು ಸುಗಮವಾಗಿ ತಲುಪಲು ಸಹಾಯವಾಗಲಿದೆ. 2 ಸಾವಿರ ಕೋಟಿ ರೂ. ಮೌಲ್ಯದ ಈ ಯೋಜನೆ ಪೂರ್ಣಗೊಂಡರೆ ಗಡಿ ಕಾವಲು ಹೆಚ್ಚಿಸುವಲ್ಲಿ ಸೇನಾಪಡೆಗೆ ಹೆಚ್ಚಿನ ಬೆಂಬಲ ಬಂದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next