Advertisement

ಗ್ರಾಮ ಸಹಾಯಕರ ಅರೆಬೆತ್ತಲೆ ಪ್ರತಿಭಟನೆ

12:07 PM Feb 10, 2018 | |

ಬೆಂಗಳೂರು: ಗ್ರಾಮ ಸಹಾಯಕರನ್ನು ಡಿ ಗ್ರೂಪ್‌ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರು ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

Advertisement

ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಮುಷ್ಕರ ಹಮ್ಮಿಕೊಂಡಿರುವ ಗ್ರಾಮ ಸಹಾಯಕರು ತಾವು ಕಳೆದ 30-40 ವರ್ಷಗಳಿಂದ ಹಳ್ಳಿಗಳಲ್ಲಿ ಸೇವೆಸಲ್ಲಿಸುತ್ತಿದ್ದರೂ ಸರ್ಕಾರ ಕನಿಷ್ಠ ವೇತನ ನಿಗದಿಪಡಿಸಿಲ್ಲವೆಂದು ದೂರಿದ್ದಾರೆ.

ಹಗಲಿರಳು ಕೆಲಸ ಮಾಡಿದರೂ ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲ. ತಮ್ಮನ್ನು ಡಿ ಗ್ರೂಪ್‌ ನೌಕರರನ್ನಾಗಿ ಪರಿಗಣಿಸಬೇಕೆಂದು ಸಾವಿರಾರು ಪ್ರತಿಭಟನಾ ನಿರತ ನೌಕರರು ಒತ್ತಾಯಿಸಿದ್ದಾರೆ. ಈ ಸಂಬಂಧ ಶುಕ್ರವಾರ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎನ್‌.ಎಚ್‌.ಕೋನರೆಡ್ಡಿ ಹಾಗೂ ವಿಪಕ್ಷನಾಯಕ ಜಗದೀಶ್‌ ಶೆಟ್ಟರ್‌ ಪ್ರಸ್ತಾಪಿಸಿದ್ದು, ನೌಕರರಿಗೆ ನ್ಯಾಯ ಒದಗಿಸಬೇಕು.

ವೇತನ ನಿಗದಿಪಡಿಸಿ ಅವರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿದರು. ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಗ್ರಾಮ ಸಹಾಯಕರನ್ನು ಡಿ ಗ್ರೂಪ್‌ ನೌಕರರನ್ನಾಗಿ ಪರಿಗಣಿಸುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ.

ಗ್ರಾಮ ಸಹಾಯಕರ ಬೇಡಿಕೆಗಳ ವಿಚಾರವನ್ನು ಬಜೆಟ್‌ ಪೂರ್ವ ಸಿದ್ಧತಾ ಸಭೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಬಜೆಟ್‌ ಮಂಡನೆ ವೇಳೆ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಸರ್ಕಾರ ಗ್ರಾಮ ಸಹಾಯಕರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಧರಣಿಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮೊದಲು ಶಾಸಕ ಕೋನರೆಡ್ಡಿ ಮಾತನಾಡಿ, ಈಗಾಗಲೇ ಬೇರೆ ಬೇರೆ ಇಲಾಖೆ ನೌಕರರನ್ನು ಸರ್ಕಾರ ಖಾಯಂಗೊಳಿಸಿದೆ.

ಅದರಂತೆ ಗ್ರಾಮ ಸಹಾಯಕರ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ್‌ ಶಾಸಕ ಕೆ.ಎನ್‌.ರಾಜಣ್ಣ ಕೂಡ ಧ್ವನಿಗೂಡಿಸಿ ಗ್ರಾಮ ಸಹಾಯಕರಿಗೆ ವೇತನ ನಿಗದಿ ಮಾಡಿಲ್ಲ. ಕೇವಲ ಗೌರವಧನ ನೀಡಲಾಗುತ್ತಿದೆ. ಇವರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು. 

ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಮಾತನಾಡಿ, ಕಂದಾಯ ಇಲಾಖೆಯ ಬಹುತೇಕ ಕೆಲಸವನ್ನು ಗ್ರಾಮ ಸಹಾಯಕರೇ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ನೌಕರರ ಗೌರವ ಧನ ಹೆಚ್ಚಳ ಮಾಡಲಾಗಿತ್ತು. ಇವರಿಗೆ ಯಾವುದೇ ಸೇವಾ ಭದ್ರತೆ ಇಲ್ಲ. ಹೀಗಾಗಿ 23 ಸಾವಿರ ಮಂದಿ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next