Advertisement

ವಿಜಯ್‌ ಮಲ್ಯ ಗಡಿಪಾರು: ಇಂದು ತೀರ್ಪು?

09:35 AM Dec 10, 2018 | Karthik A |

ಹೊಸದಿಲ್ಲಿ: ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿರುವ ಉದ್ಯಮಿ ವಿಜಯ್‌ ಮಲ್ಯರನ್ನು ಲಂಡನ್‌ನಿಂದ ಗಡೀಪಾರು ಮಾಡುವ ಬಗ್ಗೆ ಸೋಮವಾರ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತೀರ್ಪು ನೀಡಲಿದೆ. ಜಡ್ಜ್ ಎಮ್ಮಾ ಅರ್ಬಥ್ನೋಟ್‌ ನೀಡಲಿರುವ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಒಂದು ವೇಳೆ ಗಡೀಪಾರು ಮಾಡಲು ಕೋರ್ಟ್‌ ಅನುಮತಿ ನೀಡಿದರೂ, ಈ ಹಿಂದಿನ ಇಂಥದ್ದೇ ಪ್ರಕರಣಗಳನ್ನು ಗಮನಿಸಿದರೆ ಮಲ್ಯರನ್ನು ಸುಲಭವಾಗಿ ಭಾರತಕ್ಕೆ ಕರೆತರಲಾಗದು.

Advertisement

1993ರಲ್ಲೇ ಯುನೈಟೆಡ್‌ ಕಿಂಗ್‌ಡಮ್‌ ಹಾಗೂ ಭಾರ ತವು ಗಡಿಪಾರು ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಅದರ ನಂತರದಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ವಿವಿಧ ಕಾರಣಗಳನ್ನು ನೀಡಿ ಇಂಗ್ಲೆಂಡ್‌ ಅಪರಾಧಿಗಳನ್ನು ಭಾರತಕ್ಕೆ ಕಳುಹಿಸಲು ಅನಗತ್ಯ ವಿಳಂಬ ಮಾಡುತ್ತಿದೆ. ಗುಲ್ಶನ್‌ ಕುಮಾರ್‌ ಕೊಲೆ ಪ್ರಕರಣದಲ್ಲಿ ನದೀಮ್‌ ಸೈಫಿ, ನೌಕಾಪಡೆಯ ವಾರ್‌ ರೂಮ್‌ ಮಾಹಿತಿ ಸೋರಿಕೆ ಪ್ರಕರಣದಲ್ಲಿ ರವಿ ಶಂಕರನ್‌, 1993ರ ಗುಜರಾತ್‌ ಸ್ಫೋಟ ಪ್ರಕರಣದಲ್ಲಿ ಟೈಗರ್‌ ಹನೀಫ್ ಸೇರಿದಂತೆ ಹಲವು ಅಪರಾಧಿಗಳು ಇಂದಿಗೂ ಲಂಡನ್‌ನಲ್ಲಿ ವಾಸವಿದ್ದಾರೆ.  ಹನೀಫ್ ಪ್ರಕರಣದಲ್ಲಂತೂ ಗಡೀಪಾರಿಗೆ ಕೋರ್ಟ್‌ ಅನುಮತಿ ನೀಡಿದರೂ, ಗೃಹ ಕಾರ್ಯದರ್ಶಿ ಸಹಿ ಹಾಕಿಲ್ಲ.

ಮಲ್ಯ ಗಡಿಪಾರಿಗೆ ಕೋರ್ಟ್‌ ಅನುಮತಿಸಿದರೆ, ಮಲ್ಯ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಯುರೋಪಿಯನ್‌ ನ್ಯಾಯಾಲಯವು ಮಾನವ ಹಕ್ಕುಗಳ ಕಾರಣ ನೀಡಿ ಗಡಿಪಾರಿಗೆ ವಿರೋಧಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅಂತಿಮವಾಗಿ ಮಲ್ಯ ಸದ್ಯದಲ್ಲಿ ಭಾರತಕ್ಕೆ ವಾಪಸಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next