ವಿಜಯಪುರ : ದೂರದರ್ಶನ, ಮೊಬೈಲ್ ಜಗತ್ತಿನಲ್ಲಿ ಗ್ರಾಮೀಣ ಜಾನಪದ ಕಲೆಗಳು ಅಳಿದು ಹೋಗುತ್ತಿವೆ. ನಮ್ಮ ಮೂಲ ಸಂಸ್ಕೃತಿ ಅಡಗಿರುವ ಜಾನಪದ ಬದುಕನ್ನು ಉಳಿಸಿ-ಬೆಳೆಸುವ ಕೆಲಸವಾಬೇಕು ಎಂದು ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಮಮದಾಪುರದ ಸಿದ್ರಾಮೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆದ ಮಮದಾಪುರ ಜಾನಪದ ಪರಿಷತ್ ವಲಯ ಘಟಕದ ಉದ್ಘಾಟನೆ, ಪದಗ್ರಹಣ ಮತ್ತು ಕಲಾಪ್ರದರ್ಶನಕ್ಕೆ ಡೊಳ್ಳು ಬಾರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಜಾನಪದ ಪರಿಷತ್ ಜಾನಪದ ಉಳಿಸುವಲ್ಲಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಜಾನಪದ ಮಾನವನ ಹುಟ್ಟಿನಿಂದ ಬಂದ ಸಂಸ್ಕೃತಿ. ಆದರೂ ಪಾಶ್ಚಾತ್ಯ ಸಂಸ್ಕೃತಿಯಿಂದ ಜಾನಪದ ಕಲೆಗಳು ಮರೆಮಾಗುತ್ತಿವೆ. ನಮ್ಮ ಮೂಲ ಜಾನಪದವನ್ನು ಪ್ರತಿ ಹಳ್ಳಿಗಳಲ್ಲಿ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕಿದೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಜಾನಪದ ಸಂಸ್ಕೃತಿಯ ಶ್ರೀಮಂತಿಕೆ ಹಾಗೂ ಅದರಲ್ಲಿರುವ ಮೌಲ್ಯಗಳನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಮಮದಾಪುರ ಜಿಪಂ ಸದಸ್ಯ ಕಲ್ಲಪ್ಪ ಕೊಡಬಾಗಿ ಮಾತನಾಡಿ, ಜಾನಪದ ಎನ್ನುವುದು ನಿಜವಾದ ಜಾನರ ಜಾತ್ರೆ. ಒಳ್ಳೆ ಸಂಸ್ಕಾರ ಕಲಿಸಿಕೊಡುತ್ತಿರುವುದು ಶ್ಲಾಘನೀಯ. ಕಲಾವಿದರ ನೋವು ನಲಿವುಗಳಿಗೆ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಾಳನಗೌಡ ಪಾಟೀಲರ ಧ್ವನಿಯಾಗಿದ್ದು ಅವರ ನೇತೃತ್ವದಲ್ಲಿ ಜಾನಪದ ಕಲಾವಿದರಿಗೆ ಸರ್ಕಾರಿ ಸೌಲಭ್ಯ ಒದಗಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಬಬಲೇಶ್ವರ ತಾಲೂಕಾಧ್ಯಕ್ಷ ಗೊಳಪ್ಪ ಯರನಾಳ ಮಾತನಾಡಿ, ತಾಲೂಕಿನಲ್ಲಿ ವಲಯ ಘಟಕ ಉದ್ಘಾಟನೆ ಸಂತಸ ತಂದಿದೆ. ತಾಲೂಕಿನಾದ್ಯಂತ ಎಲ್ಲ ಗ್ರಾಮಗಳ ಕಲಾವಿದರು ಮತ್ತು ಕಲೆ ಗುರುತಿಸಿ ಗೌರವಿಸಿ, ಪ್ರೋತ್ಸಾಹಿಸಿ ಜಾನಪದ ಕಲೆ ಉಳಿಸೋಣ ಎಂದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಬಬಲೇಶ್ವರ ಬ್ರಹ್ಮನ್ಮಠದ ಡಾ| ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಸಾನ್ನಿಧ್ಯ ಮಮದಾಪುರ ವಿರಕ್ತಮಠದ ಅಭಿನವ ಮುರಘೇಂದ್ರ ಸ್ವಾಮೀಜಿ ವಹಿಸಿದ್ದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ ಸಾಲಳ್ಳಿ, ಹಿರಿಯ ಕಲಾವಿದ ಸಿದ್ದಲಿಂಗಯ್ಯ ಹಂಚಿನಾಳಮಠ ಡಾ| ಎಂ.ಎಸ್. ಹಿರೇಮಠ ಶಿವಾನಂದ ಬಡಿಗೇರ, ಗುರುರಾಜ, ವಿದ್ಯಾನಂದಯ್ಯ ಹಂಚಿನಾಳಮಠ, ನಾಗಯ್ಯ ಹಿರೇಮಠ, ಮಲ್ಲಪ್ಪ ಗಲಗಲಿ, ಭೀಮಪ್ಪ ಬಡಿಗೇರ, ನಾಗಪ್ಪ ಭಜಂತ್ರಿ, ಶಂಕರ ಹೂಗಾರ, ಭಗವಂತ ಬೆಳ್ಳನ್ನವರ ಅವರನ್ನು ಸನ್ಮಾನಿಸಲಾಯಿತು. ಡೊಳ್ಳು ಕುಣಿತ, ವೀರಗಾಸೆ ಗೊಂದಳಿ ಪದ, ಹಂತಿ ಪದ, ಗೊಂಬೆ ಕುಣಿತ, ಚೌಡಕಿ ಪದ, ಭಜನಾ, ಶಹನಾಯಿ ಹೋಳಿ ಪದ ಸೇರಿದಂತೆ 15ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಕಲೆ ಪ್ರದರ್ಶನ ನೀಡಿದರು.
ಯುವ ಧುರೀಣ ಗುರನಗೌಡ ಅಂಗಡಿ, ಸದಾಶಿವಯ್ಯ ಕಾಖಂಡಕಿಮಠ ಮಾತನಾಡಿದರು. ತಾಪಂ ಸದಸ್ಯ ಮಾಬೂಬ್ಬಿ ಕೀಜಿ, ಜಾನಪದ ವಲಯ ಘಟಕ ಅಧ್ಯಕ್ಷ ಈರಪ್ಪ ಶಿಂತ್ರಿ. ಈರಣ್ಣ ಹೊಸಟ್ಟಿ, ಜಿ.ಎಂ. ಹಳ್ಳೂರ, ಜಿಲ್ಲಾ ಕಜಾಪ ಸದಸ್ಯ ಮೌಲಾಸಾಬ ಜಾಗೀರದಾರ, ಗಂಗವ್ವ ಶಿಂಧೆ, ಮಲ್ಲಿಕಾರ್ಜುನ ಗಂಗೂರ ಇದ್ದರು.