Advertisement

BY Election: ನಾಳೆ ವಿಜಯೇಂದ್ರ ದಿಲ್ಲಿಗೆ: ಟಿಕೆಟ್‌ ಚರ್ಚೆ

12:48 AM Oct 18, 2024 | Team Udayavani |

ಬೆಂಗಳೂರು: ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಸೋಮವಾರದೊಳಗೆ ಅಭ್ಯರ್ಥಿ ಆಯ್ಕೆ ಮಾಡಬೇಕಾದ ಧಾವಂತ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಶನಿವಾರ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದು, ವರಿಷ್ಠರ ಜತೆಗೆ ಚರ್ಚೆ ನಡೆಸಲಿದ್ದಾರೆ. ರಾಜ್ಯಾಧ್ಯಕ್ಷರಾದ ಅನಂತರ ವಿಜಯೇಂದ್ರರಿಗೆ ಎದುರಾಗಿರುವ ಮೊದಲ ನೇರ ಸವಾಲು ಇದಾಗಿದೆ. ಅಲ್ಲದೆ, ಸಾಮರ್ಥ್ಯ ಸಾಬೀತುಪಡಿಸುವ ಒತ್ತಡವೂ ಅವರ ಮೇಲಿದೆ.

Advertisement

ಈ ಹಿನ್ನೆಲೆಯಲ್ಲಿ ಅಳೆದು-ತೂಗಿ ಹೆಜ್ಜೆ ಇಡುವುದಕ್ಕೆ ವಿಜಯೇಂದ್ರ ನಿರ್ಧರಿಸಿದ್ದು, ಸಂಡೂರು ಕ್ಷೇತ್ರದಲ್ಲಿ ಕಮಲ ಅರಳಿಸುವ ಹೊಣೆಯನ್ನು ಖುದ್ದು ಸ್ವೀಕರಿಸುವ ಸಾಧ್ಯತೆ ಇದೆ. 3 ವಿಧಾನಸಭೆ ಹಾಗೂ 1 ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆದ್ದು ಪಕ್ಷದಲ್ಲಿನ ಭಿನ್ನಧ್ವನಿ ಅಡಗಿಸುವುದಕ್ಕೆ ಇದೊಂದು ಸುಸಂದರ್ಭ ಎಂದು ವಿಜಯೇಂದ್ರ ಟೀಂ ಯೋಚನೆ ನಡೆಸಿದ್ದು, ರಾಜ್ಯ ಸರಕಾರದ ವಿರುದ್ಧ ಮೂಡಿರುವ ಅಲೆಯನ್ನು ಫ‌ಲಿತಾಂಶದ ಮೂಲಕ ಪರಿವರ್ತನೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿ ಮುಳುಗಿದೆ. ಹೀಗಾಗಿ ಎಲ್ಲ ಒಳ ರಾಜಕಾರಣಗಳನ್ನು ಸದ್ಯಕ್ಕೆ ಬದಿಗಿಟ್ಟು ಹೋರಾಡಬೇಕೆಂಬ ಅಭಿಪ್ರಾಯ ಕೇಸರಿ ಪಾಳಯದಲ್ಲಿ ಮೂಡಿದೆ.

3 ಕ್ಷೇತ್ರ ಗೆಲ್ಲುವ ವಿಶ್ವಾಸ
ಶಿರಾ ಹಾಗೂ ಕೆ.ಆರ್‌.ಪೇಟೆ ಮಾದರಿಯಲ್ಲಿ ಸಂಡೂರು ಕ್ಷೇತ್ರವನ್ನು ಗೆಲ್ಲಬೇಕೆಂಬುದು ವಿಜಯೇಂದ್ರ ಲೆಕ್ಕಾಚಾರ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದ ಜತೆಗೆ ಎಸ್‌ಟಿ ಸಮುದಾಯ ಕಾಂಗ್ರೆಸ್‌ ವಿರುದ್ಧ ಇರುವ ಹಿನ್ನೆಲೆಯಲ್ಲಿ ಸಂಡೂರಿಗೆ ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಬೇಕೆಂಬ ಉತ್ಸಾಹದಲ್ಲಿ ವಿಜಯೇಂದ್ರ ಇದ್ದಾರೆ. ಮಾಜಿ ಸಂಸದ ದೇವೇಂದ್ರಪ್ಪ ಹಾಗೂ ಕಳೆದ ಬಾರಿ ಪಕ್ಷೇತರವಾಗಿ ಸ್ಪರ್ಧಿಸಿ ಗಣನೀಯ ಪ್ರಮಾಣದಲ್ಲಿ ಮತ ಗಳಿಸಿದ್ದ ದಿವಾಕರ್‌ ಹೆಸರು ಮುಂಚೂಣಿಯಲ್ಲಿದೆ.

ಶಿಗ್ಗಾವಿ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ ವ್ಯಕ್ತಿಯೇ ಅಭ್ಯರ್ಥಿಯಾಗಲಿದ್ದು, ಭರತ್‌ ಬೊಮ್ಮಾಯಿ ಕಣಕ್ಕಿಳಿಸುವ ವಿಚಾರದಲ್ಲಿ ಅವರಿನ್ನು ಗೊಂದಲದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಯಡಿಯೂರಪ್ಪನವರ ಮಾರ್ಗ
ದರ್ಶನ ಕೇಳಿದ್ದಾರೆ. ಮಾಜಿ ಸಚಿವ ಮುರುಗೇಶ್‌ ನಿರಾಣಿ ಒಮ್ಮತ ಅಭ್ಯರ್ಥಿಯಾದರೂ ಅಚ್ಚರಿಯಲ್ಲ ಎಂಬ ಮಾತಿದೆ. ಇದರ ಜತೆಗೆ ಚನ್ನಪಟ್ಟಣದಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೆಂಬುದು ರಾಜ್ಯ ನಾಯಕರ ಅಭಿಪ್ರಾಯ. ವರಿಷ್ಠರು ಮಾತ್ರ ಜೆಡಿಎಸ್‌ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡೋಣ ಎಂಬ ನಿಲುವಿನಲ್ಲಿದ್ದಾರೆ. ಆದರೆ, ಕ್ಷೇತ್ರದಲ್ಲಿ ಯೋಗೇಶ್ವರ್‌ ಪರ ವಾತಾವರಣ ಇದೆ ಎಂಬುದು ರಾಜ್ಯ ನಾಯಕರ ಅಭಿಪ್ರಾಯವಾಗಿದ್ದು, ವಿಜಯೇಂದ್ರ ಭೇಟಿ ಸಂದರ್ಭದಲ್ಲಿ ಈ ಎಲ್ಲ ಅಂಶಗಳು ಚರ್ಚೆಗೆ ಬರುವ ಸಾಧ್ಯತೆ ಇದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next