ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲಿ ಸೇರಿಸಿರುವುದು ಬಿಜೆಪಿ ಆಂತರಿಕ ವಲಯದಲ್ಲಿ ತಳಮಳ ಸೃಷ್ಟಿಸಿದೆ. ಕೋರ್ ಕಮಿಟಿಯ ಈ ನಿರ್ಣಯಕ್ಕೆ ರಾಷ್ಟ್ರೀಯ ನಾಯಕರು ಒಪ್ಪಿಗೆಯ ಮುದ್ರೆ ಹಾಕುವರೇ ಎಂಬ ಜಿಜ್ಞಾಸೆ ಈಗ ಆರಂಭವಾಗಿದೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಶಿಫಾರಸ್ಸು ಮಾಡಿದ ಹೆಸರುಗಳು ಹಾಗೂ ನಿರ್ಣಯಗಳನ್ನು ವರಿಷ್ಠರು ತಿರಸ್ಕರಿಸಿದ ಹಲವು ಉದಾಹರಣೆಗಳು ಇವೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯಸಭೆಗೆ ಪ್ರಭಾಕರ ಕೋರೆ ಹಾಗೂ ಇನ್ನಿತರರ ಹೆಸರು ಕಳುಹಿಸಿದಾಗ ಹೈಕಮಾಂಡ್ ಅದನ್ನು ನಿರಾಕರಿಸಿತ್ತು. ಈಗ ವಿಜಯೇಂದ್ರ ಸೇರಿದಂತೆ ಇನ್ನಿತರರ ಹೆಸರಿನ ಪಟ್ಟಿಗೆ ಹೈಕಮಾಂಡ್ ಒಪ್ಪುತ್ತದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಇದನ್ನೂ ಓದಿ:ವಿಜಯೇಂದ್ರಗೆ ಸಚಿವ ಸ್ಥಾನ, ಇನ್ನೆರಡು ದಿನದಲ್ಲಿ ಸಂಪುಟ ವಿಸ್ತರಣೆ ತಯಾರಿ: ಸಿಎಂ
ಕುಟುಂಬ ರಾಜಕಾರಣ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನಿರ್ಣಾಯಕ ಯುದ್ಧ ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲೂ ವಂಶವಾದಕ್ಕೆ ಮಣೆ ಹಾಕಿಲ್ಲ. ಅದೇ ಕಾಲಕ್ಕೆ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲೂ ಕುಟುಂಬ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳುವ ವಿಚಾರಗಳಿಗೆ ಒತ್ತು ನೀಡಲಾಗಿದೆ. ಆದರೆ ಗಾಂಧಿ ಕುಟುಂಬ ಹಾಗೂ ಇತರೆ ಕೆಲ ಕುಟುಂಬ ಸದಸ್ಯರಿಗೆ ” ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ” ನಿಯಮ ಅನ್ವಯವಾಗುವುದಿಲ್ಲ ಎಂಬ ನಿರ್ಧಾರವನ್ನು ಬಿಜೆಪಿ ಬಲವಾಗಿ ಟೀಕಿಸಿದೆ. ಈ ಹಂತದಲ್ಲೇ ಯಡಿಯೂರಪ್ಪ ಪುತ್ರನ ಹೆಸರನ್ನು ಪರಿಷತ್ ಗೆ ಅಖೈರುಗೊಳಿಸಿರುವುದು ಬಿಜೆಪಿಗೆ ಬಿಸಿತುಪ್ಪವಾಗಿದೆ.
ಕೋರ್ ಕಮಿಟಿ ಈ ನಿರ್ಧಾರ ತೆಗೆದುಕೊಂಡ ಮರುದಿನವೇ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿರುವುದು ಈಗ ತೀವ್ರ ಕುತೂಹಲ ಸೃಷ್ಟಿಸಿದೆ.