ಬೆಂಗಳೂರು: ರಾಜ್ಯದ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಸಿದ್ದತೆ ನಡೆಸುತ್ತಿದೆ. ರವಿವಾರ ನಡೆದ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಎರಡೂ ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿದೆ. ಆದರೆ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೆಸರು ಉಸ್ತುವಾರಿಗಳ ಪಟ್ಟಿಯಲ್ಲಿರುವುದು ಅವರ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.
ಈ ಬಗ್ಗೆ ‘ನಮ್ಮ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ’ ಎಂಬ ಫೇಸ್ ಬುಕ್ ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಕಿಡಿಕಾರಲಾಗಿದೆ.
“ಬಿಎಲ್ ಸಂತೋಷ್ ಎಂಬ ವಿಘ್ನ ಸಂತೋಷಿಯ ಚಿಲ್ಲರೆ ಬುದ್ದಿಗೆ ಏನು ಹೇಳಬೇಕು. ವಿಜಯೇಂದ್ರ ಯಡಿಯೂರಪ್ಪ ರಾಜ್ಯದ ಚುನಾವಣಾ ಅಖಾಡಕ್ಕೆ ತನ್ನ ತಾಕತ್ತನ್ನು ಪರಿಚಯಿಸಿಯಾಗಿದೆ. ಮತ್ತು ರಾಜ್ಯ ರಾಜಕಾರಣದ ಮಾಸ್ ಲೀಡರ್ ಆಗಿ ರೂಪುಗೊಂಡು ಆಗಿದೆ. ಯಾರದ್ದೋ ಶ್ರಮವನ್ನು ತನ್ನದೆಂದು ಬಿಂಬಿಸಿಕೊಂಡು ಮೆರೆಯುವ ಸಂತೋಷ್ ಬಿಎಲ್ ಎಂಬ ಕುತಂತ್ರಿಯ ಆಟ ಬಹುದಿನ ಉಳಿಯದು. ಹಾಗೂ ಸಂತೋಷ್ ಬಿಎಲ್ ಎಂಬ ಶಾರ್ಟ್ ಕಟ್ ಗಳಿಂದ ಜನನಾಯಕನಾಗಿ ರೂಪುಗೊಂಡಿರುವ ವಿಜಯೇಂದ್ರ ಯಡಿಯೂರಪ್ಪನವರ ಶಕ್ತಿಯನ್ನು ಅಡಗಿಸಲಾಗದು” ಎಂದು ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ:ಚುನಾವಣೆ ಬಂದರೆ ಬಿಜೆಪಿಗೆ ಖುಷಿ, ಕಾಂಗ್ರೆಸ್ ಗೆ ನಡುಕ: ಸಚಿವ ಈಶ್ವರಪ್ಪ
ಮತ್ತೊಂದು ಪೋಸ್ಟ್ ನಲ್ಲಿ ಉಸ್ತುವಾರಿ ಪಟ್ಟಿಗೆ ವಿರೋಧ ಸೂಚಿಸಿ, “ಸರ್ವಶ್ರೇಷ್ಠ ನಾಯಕ ಯಡಿಯೂರಪ್ಪನವರನ್ನು ಸದಾ ನಿಂದಿಸುತ್ತಿದ್ದ ಯತ್ನಾಳರಿಗೆ ಯಾವುದೇ ಶಿಸ್ತುಕ್ರಮ ಕೈಗೊಳ್ಳದೇ ಉಪಚುನಾವಣೆ ಉಸ್ತುವಾರಿ ನೀಡಿರುವ ರಾಜ್ಯಾಧ್ಯಕ್ಷರ ಕ್ರಮ ಎಷ್ಟು ಸರಿ? ಇವರಿಗೆ ಯಡಿಯೂರಪ್ಪನವರ ದುಡಿಮೆ ಮಾತ್ರಬೇಕು, ಅವರ ಗೌರವ ಕಾಪಾಡುವುದು ಯಾರಿಗೂ ಬೇಕಿಲ್ಲ! ನಾಡಿನ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಬಿಜೆಪಿಗರೇ ಎಚ್ಚರ!” ಎಂದು ಬರೆಯಲಾಗಿದೆ.
ಬಿಜೆಪಿ ಉಸ್ತುವಾರಿಗಳ ಪಟ್ಟಿ: ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದು, ಸಿಂದಗಿ ಕ್ಷೇತ್ರಕ್ಕೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಹಾನಗಲ್ ಕ್ಷೇತ್ರಕ್ಕೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಸಿಂದಗಿ ಕ್ಷೇತ್ರಕ್ಕೆ ಗೊವಿಂದ ಕಾರಜೋಳ, ವಿ. ಸೋಮಣ್ಣ, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ, ರಮೇಶ್ ಜಿಗಜಿಣಗಿ, ಬಸನಗೌಡ ಪಾಟೀಲ್ ಯತ್ನಾಳ, ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್, ಎ.ಎಸ್. ಪಾಟೀಲ್ ನಡಹಳ್ಳಿ, ಪಿ. ರಾಜೀವ, ಶ್ರೀಕಾಂತ ಕುಲಕರ್ಣಿ, ಬಾಬುರಾವ್ ಚಿಂಚನಸೂರ್ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರಿಗೆ ಸಿಂದಗಿ ಉಪ ಚುನಾವಣೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಈಗ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರಿಂದ ಅವರ ಬದಲು ಗೋವಿಂದ ಕಾರಜೋಳ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.
ಹಾನಗಲ್ ಕ್ಷೇತ್ರದಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಟಾರ, ಶಿವಕುಮಾರ ಉದಾಸಿ, ಎನ್. ರವಿಕುಮಾರ, ಮಹೇಶ ಟೆಂಗಿನಕಾಯಿ, ರಾಜುಗೌಡ, ನೆಹರೂ ಓಲೇಕಾರ, ಎಂ. ಚಂದ್ರಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್ ಕುಮಾರ್ ಗುತ್ತೂರು ಅವರನ್ನು ನೇಮಕ ಮಾಡಲಾಗಿದೆ.