Advertisement

ರಾಜ್ಯದಲ್ಲಿ ವಿಜಯೇಂದ್ರ ‘ಸಿಎಂ ಕಾರುಬಾರು’ : ಸಿದ್ದರಾಮಯ್ಯ

12:28 AM Nov 23, 2020 | mahesh |

ಪ್ರಸಕ್ತ ರಾಜಕಾರಣ ಪರಿಸ್ಥಿತಿ, ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲ, ಬಣ ರಾಜಕೀಯ, ಯಡಿಯೂರಪ್ಪ ಅಧಿಕಾರದ ಭವಿಷ್ಯ ಕುರಿತು ಉದಯವಾಣಿ ಖಡಕ್‌ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ನೇರಾ ನೇರ ಉತ್ತರಿಸಿದ್ದಾರೆ.

Advertisement

 ನೀವು ಬಿಜೆಪಿ ಸರಕಾರಕ್ಕೆ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿದ್ದೀರಂತೆ ಹೌದಾ ?
ನರೇಂದ್ರ ಮೋದಿ ವಿರುದ್ಧ ನೇರವಾಗಿ ಅಟ್ಯಾಕ್‌ ಮಾಡೋರು ಯಾರು? ಯಡಿಯೂರಪ್ಪನ ವಿರುದ್ಧ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿರೋದು ಯಾರು? ಆರ್‌ಎಸ್‌ಎಸ್‌ನವರು ಆ ರೀತಿ ಆರೋಪ ಮಾಡುತ್ತಾರೆ. ಅವರ ವಿರುದ್ಧ ಕಟು
ಶಬ್ದ ಬಳಸಿ ಮಾತನಾಡುವವನು ನಾನೊಬ್ಬನೇ.

 ಅಮಿತ್‌ ಶಾ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುತ್ತೇವೆ ಎಂದು ಹೇಳುತ್ತಿದ್ದಾರಲ್ಲ ?
ಅವರಿಗೆ ಮೊದಲು ಯಡಿಯೂರಪ್ಪ ಕುಟುಂಬ ರಾಜಕಾರಣ ಅಂತ್ಯ ಹಾಡೋಕೆ ಹೇಳಿ. ಯಡಿಯೂರಪ್ಪ ಡಿ -ಜೂರೆ (ಕಾನೂನು ಪ್ರಕಾರ) ಮುಖ್ಯಮಂತ್ರಿ, ವಿಜಯೇಂದ್ರ ಡಿಫ್ಯಾಕ್ಟೋ ಸಿಎಂ, ರಾಘವೇಂದ್ರ ಸಂಸದ. ಮೊದಲು ಅವರ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿ.

 ಪ್ರಧಾನಿ ಮುಂದೆ ರಾಹುಲ್‌ ಗಾಂಧಿ ಎಳಸು ಅಂತಾರಲ್ಲ?
ಆರ್‌ಎಸ್‌ಎಸ್‌ನವರು ಆ ರೀತಿ ಆರೋಪ ಮಾಡುತ್ತಾರೆ. ರಾಹುಲ್‌ ಗಾಂಧಿ ಕೂಡ ಪ್ರೌಢ ರಾಜಕಾರಣಿಯೇ. ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ವಿಜಯೇಂದ್ರ ಏನು, ಪ್ರೌಢ ರಾಜಕಾರಣಿಯೇ?

 ಕಾಂಗ್ರೆಸ್‌ನಲ್ಲಿ ಏನಾಗ್ತಿದೆ, ಸೋಲಿನ ಮೇಲೆ ಸೋಲಾಗುತ್ತಿದೆಯಲ್ಲ ಯಾಕೆ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಹಜ, ಬಿಜೆಪಿ ಹಿಂದೆ ಜನಸಂಘ ಇದ್ದಾಗ ಎಷ್ಟು ಸೀಟು ಗೆದ್ದಿತ್ತು? ಈಗ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯ ಸುಳ್ಳು ಆಶ್ವಾಸನೆಗೆ ಮಾರುಹೋಗಿ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಬಿಜೆಪಿಯವರ ನಿಜವಾದ ಬಣ್ಣ ಬಯಲಾದ ಮೇಲೆ ಮತ್ತೆ ಬದಲಾವಣೆ ಮಾಡುತ್ತಾರೆ. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತದೆ.

Advertisement

 ಶಿರಾ ಚುನಾವಣೆ ಸೋಲಿನ ಹೊಣೆ ನೀವು ಹೊರುತ್ತೀರಾ?
ಉಪ ಚುನಾವಣೆ ಸೋಲಿಗೆ ಎಲ್ಲರೂ ಹೊಣೆ. ನಾನು, ಕೆಪಿಸಿಸಿ ಅಧ್ಯಕ್ಷರು, ಬೇರೆ ನಾಯಕರು ಎಲ್ಲರೂ ಹೊಣೆಗಾರರು. ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡಲು ಆಗುವುದಿಲ್ಲ. ನಾವು ಶಿರಾದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಇತ್ತು. ಬಿಜೆಪಿ ಅಧಿಕಾರ ದುರುಪಯೋಗ, ಹಣದ ಹೊಳೆ ಹರಿಸಿದ್ದರಿಂದ ಬಿಜೆಪಿ ಗೆದ್ದಿತು.

 ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಬಣ ಇದೆಯಾ ?
ಅದು ಸುಳ್ಳು. ಯಾವುದೇ ಬಣ ಇಲ್ಲ. ಇಲ್ಲಿ ರಾಹುಲ್‌ , ಸೋನಿಯಾ ಗಾಂಧಿ ಒಂದೇ ಬಣ.

ಖರ್ಗೆಯವರು “ಒಗ್ಗಟ್ಟಿಲ್ಲದಿದ್ದರೆ ಪಕ್ಷ ನಾಶವಾಗಲಿದೆ’ ಅಂತ ಯಾರನ್ನು ಗುರಿ ಮಾಡಿ ಹೇಳುತ್ತಿದ್ದಾರೆ ?
ಅವರು ಕೇಂದ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಬೇಸತ್ತು ಹಾಗೆ ಹೇಳಿದ್ದಾರೆ. ರಾಜ್ಯದ ಬಗ್ಗೆ ಹೇಳಿಲ್ಲ. ಕೇಂದ್ರದಲ್ಲಿ ಕೆಲವರು ನಾಯಕತ್ವವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಬಿಹಾರ ಚುನಾವಣೆ ಸೋಲಿಗೆ ರಾಹುಲ್‌ ಗಾಂಧಿ ಕಾರಣ ಅಂತ ಹೇಳುತ್ತಿದ್ದಾರಲ್ಲ. ಅದಕ್ಕೆ ಬೇಸರಗೊಂಡು ಖರ್ಗೆ ಆ ರೀತಿ ಹೇಳುತ್ತಿದ್ದಾರೆ.

 ರಾಜ್ಯದಲ್ಲಿ ಮಧ್ಯಾಂತರ ಚುನಾವಣೆ ಬರುತ್ತದೆ ಅನಿಸುತ್ತದೆಯೇ ನಿಮಗೆ?
ನನ್ನ ಪ್ರಕಾರ ಮುಖ್ಯಮಂತ್ರಿ ಬದಲಾವಣೆ ಆಗಬಹುದು. ಅವರಿಗೆ ಬಹುಮತ ಇರುವುದರಿಂದ ತತ್‌ಕ್ಷಣ ಚುನಾವಣೆ ಬರುವುದು ಅನುಮಾನ. ನನ್ನ ಪ್ರಕಾರ ಸಿಎಂ ಬದಲಾವಣೆ ಆಗುವುದು ಖಚಿತ.

 ಅವಕಾಶ ಸಿಕ್ಕರೆ ಸಿಎಂ ಆಗುತ್ತೀರಾ ?
ಮೊದಲು ನಾವೆಲ್ಲ ಸೇರಿ ಪಕ್ಷವನ್ನು ಬಹುಮತ ತರಬೇಕು. ಕೂಸು ಹುಟ್ಟುವ ಮುನ್ನ ನಾನೇ ಸಿಎಂ ಆಗುತ್ತೇನೆ ಅಂತ ಹೇಳಿಕೊಳ್ಳಲು ಆಗುತ್ತದೆಯೇ?

 ಮರಾಠಾ ಅಭಿವೃದ್ಧಿ ನಿಗಮ ಮಾಡಿರುವುದಕ್ಕೆ ನಿಮ್ಮ ಅಭಿಪ್ರಾಯ ಏನು ?
ಯಾರು ಕನ್ನಡವನ್ನು ದ್ವೇಷಿಸುತ್ತಾರೋ ಅವರನ್ನು ಖಂಡಿಸುತ್ತೇನೆ. ರಾಜ್ಯದಲ್ಲಿರುವ ಯಾವುದೇ ಜಾತಿಯವರಿದ್ದರೂ ಅವರೆಲ್ಲರೂ ಕನ್ನಡಿಗರೇ. ರಾಜಕೀಯ ಓಲೈಕೆಗಾಗಿ ನಿಗಮ ಮಂಡಳಿ ಮಾಡುವುದು ಸರಿಯಲ್ಲ. ಈಗ ರಾಜಕೀಯ ಓಲೈಕೆಗೆ ಮಾಡಿದ್ದಾರೆ.

 ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next