Advertisement
“ನೀವು ಹೇಳಿಕೇಳಿ ಸನ್ಯಾಸಿಗಳು. ನೀವು ಇಷ್ಟೊಂದು ಬಗೆಯ ಆಹಾರ ಪದಾರ್ಥಗಳನ್ನು ಸ್ವೀಕರಿಸುವುದು ಸರಿಯೋ?’ ಎಂಬುದು ಅಪ್ಪಯ್ಯ ದೀಕ್ಷಿತರ ಪ್ರಶ್ನೆ. “ಸಿಂಹವು ಆನೆಯ ಗಂಡಸ್ಥಳವನ್ನು ಬೇಧಿಸಿ ತಿನ್ನುತ್ತದೆ. ಅದು ಪೌಷ್ಟಿಕವಾದ ಆಹಾರ. ಪಾರಿವಾಳಗಳು ಸಣ್ಣ ಸಣ್ಣ ಹರಳು (ಕಲ್ಲಿನ ಚೂರು) ತಿನ್ನುತ್ತವೆ. ಆದರೆ ಸಿಂಹವು ವರ್ಷಕ್ಕೊಂದು ಬಾರಿ ಲೈಂಗಿಕ ಜೀವನ ನಡೆಸುತ್ತದೆ. ಪಾರಿವಾಳಗಳು ಬಹುತೇಕ ದಿನಗಳಲ್ಲಿ ಲೈಂಗಿಕ ಜೀವನ ನಡೆಸುತ್ತದೆ. ಹೀಗಾಗಿ ಆಹಾರಕ್ಕೂ ಲೈಂಗಿಕ ಜೀವನಕ್ಕೂ ಸಂಬಂಧವಿಲ್ಲ. ಅದು ಮನಸ್ಸಿಗೆ ಸಂಬಂಧಪಟ್ಟದ್ದು’ ಎಂಬುದು ಶ್ರೀವಿಜಯೀಂದ್ರಸ್ವಾಮಿಗಳ ಉತ್ತರ.
“ಗಂಡಸ್ಥಳ ಎಂದರೇನು? ಇದು ಮಿದುಳ್ಳೋ? ಮಣಿಶಿರವೋ? ಪ್ರಾಣಿಗಳ ಶಿರಭಾಗದಲ್ಲಿ ಒಂದು ಸೂಕ್ಷ್ಮ ಭಾಗವಿದೆ. ಬಿಎಸ್ಸಿ ಪದವಿಯ ಪ್ರಾಣಿಶಾಸ್ತ್ರದ ಪಠ್ಯದಲ್ಲಿ ಇದರ ವಿಚಾರ ಬರುತ್ತದೆ. ಇದರ ವೈಜ್ಞಾನಿಕ ಹೆಸರು “ಮೆಡುಲ್ಲಾ ಒಬ್ಲಿಂಗಟಾ’. ಪ್ರಾಯಃ ಇದುವೇ ಮಣಿಶಿರವಾಗಿರಬೇಕು. ನಾವು ಕಲಿಯುವಾಗ/ ಕಲಿಸುವಾಗ ಗಂಡಸ್ಥಳವೆಂದು ಕನ್ನಡದಲ್ಲಿ ಕಲಿಯುವುದೂ ಇಲ್ಲ, ಕಲಿಸುವುದೂ ಇಲ್ಲ. ಮನುಷ್ಯನ ಕುತ್ತಿಗೆಯ ತುದಿ ಮತ್ತು ತಲೆಬುರುಡೆಯ ಕೆಳಭಾಗದಲ್ಲಿ ಮೆದುವಾದ ಮಣಿಶಿರ ಇರುತ್ತದೆ. ಇದಕ್ಕೆ ಆಕ್ರಮಣ ಮಾಡಿದರೆ ಆತನ ಶಕ್ತಿ ಮುಗಿದಂತೆ. ಇದನ್ನು ಕರಾಟೆ ತರಗತಿಗಳಲ್ಲಿ ಕಲಿಸಿಕೊಡುತ್ತಾರೆ. ಬೆಕ್ಕಿನ ಕುತ್ತಿಗೆ ಭಾಗವನ್ನು ಹಿಡಿದಾಗ ಅದು ತೆಪ್ಪಗೆ ಇರುವುದನ್ನು ನೋಡಿ. ಬೆಕ್ಕಿನ ಜಾತಿಯ ಸಿಂಹ, ಹುಲಿ, ಚಿರತೆಗಳಿಗೆ ಇದರ ಅರಿವು ನೈಸರ್ಗಿಕವಾಗಿ ಇರಬೇಕು’ ಎಂದು ಪ್ರಾಣಿಶಾಸ್ತ್ರಜ್ಞ ಉಡುಪಿಯ ಪ್ರೊ|ವಿ.ಅರವಿಂದ ಹೆಬ್ಟಾರ್ ಹೇಳುತ್ತಾರೆ.
Related Articles
ಭಾರತದಲ್ಲಿ ನೈಸರ್ಗಿಕ ಕಾಡುಗಳಲ್ಲಿ ಆನೆ ಇರುವಲ್ಲಿ ಸಿಂಹ ಇಲ್ಲ. ಸಿಂಹಗಳು ಇರುವಲ್ಲಿ ಆನೆಗಳು ಇಲ್ಲ. ಆದ್ದರಿಂದ ಇವೆರಡೂ ಮುಖಾಮುಖೀಯಾಗುವ ಸಂಭವವೇ ಇಲ್ಲ. ಹೀಗಾಗಿ ಇದಕ್ಕೆ ಪ್ರತಿಕ್ರಿಯೆ ಕೊಡಲಾಗುವುದಿಲ್ಲ. ಬನ್ನೇರುಘಟ್ಟ, ಶಿವಮೊಗ್ಗದ ಆನೆ ಸಫಾರಿ, ಲಯನ್ ಸಫಾರಿಗಳಿವೆ. ಇವು ಸಾಕಣೆ, ಚಿಕಿತ್ಸೆ ಇತ್ಯಾದಿ ಉದ್ದೇಶಗಳಿಗೆ ತಂದವು. ಇವು ನೈಸರ್ಗಿಕವಾಗಿ ಇರುವಂಥವಲ್ಲ. ಇವೆರಡೂ ನೈಸರ್ಗಿಕವಾಗಿರುವುದು ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಎಂಬ ಅಭಿಮತ ಬೆಂಗಳೂರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಅವರದು.
Advertisement
ಪ್ರಾಣಿಗಳಲ್ಲೂ ಪುರುಷಪ್ರಧಾನ ವ್ಯವಸ್ಥೆ!ಸಾಮಾಜಿಕ ಜಾಲತಾಣಗಳನ್ನು ಅವಲೋಕಿಸಿದರೆ ಎರಡು ಗಂಡು ಸಿಂಹಗಳು ಒಂದು ಆನೆಯನ್ನು, ಐದು ಹೆಣ್ಣು ಸಿಂಹಗಳು ಒಂದು ಆನೆಯನ್ನು ಕೊಲ್ಲಬಹುದು. ಸಿಂಹಗಳು ಗುಂಪುಗಳಲ್ಲಿ ಹೋಗಿ ಆಕ್ರಮಣ ನಡೆಸಿ ಒಂದು ಸಿಂಹ ಹಿಂಭಾಗದಿಂದ ಆನೆಯ ಮೇಲೆ ಆಕ್ರಮಣ ಮಾಡುವುದು ತಿಳಿಯುತ್ತದೆ. ವಿಶೇಷವೆಂದರೆ ಇಲ್ಲಿಯೂ ಪುರುಷ ಪ್ರಧಾನ ವ್ಯವಸ್ಥೆ ಇದೆ. ಬಾಯಲ್ಲಿ ಹಲ್ಲಿಲ್ಲವಯ್ನಾ!
ಪಾರಿವಾಳಗಳು ಸಣ್ಣ ಸಣ್ಣ ಕಲ್ಲುಗಳನ್ನು ತಿನ್ನುವುದು ಹೌದು. ಕೋಳಿಗಳೂ ಸಣ್ಣ ಕಲ್ಲುಗಳನ್ನು ತಿನ್ನುತ್ತವೆ. ಹಕ್ಕಿಗಳಿಗೆ ಬಾಯಲ್ಲಿ ಹಲ್ಲುಗಳು ಇರುವುದಿಲ್ಲ. ಹೊಟ್ಟೆಯಲ್ಲಿ ಹಲ್ಲಿನ ತರಹದ ಅಂಗಗಳಿವೆ. ಅವು ತಿಂದ ಕಲ್ಲುಗಳು ತಿಂದ ಇತರ ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಗ್ರೈಂಡರ್ ತರಹ ಕೆಲಸ ಮಾಡುತ್ತದೆ. ಪಾರಿವಾಳಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಹೆಚ್ಚಿಗೆ ಇರುತ್ತವೆ ಮತ್ತು ಸಿಂಹಗಳು ವರ್ಷಕ್ಕೆ ಒಮ್ಮೆ ಮಾತ್ರ ಹೀಟ್‌ಗೆ ಬಂದಾಗ ಲೈಂಗಿಕ ಸಂಪರ್ಕವನ್ನು ಮಾಡುತ್ತವೆ ಎನ್ನುವುದನ್ನು ಪಕ್ಷಿತಜ್ಞರೂ, ಪ್ರಾಣಿಶಾಸ್ತ್ರಜ್ಞರೂ ಆದ ಡಾ|ಎನ್.ಎ.ಮಧ್ಯಸ್ಥ ಬೆಟ್ಟು ಮಾಡುತ್ತಾರೆ. ಮನುಷ್ಯನ ಲೈಂಗಿಕತೆ- ಮಾನಸಿಕತೆ
ಮನುಷ್ಯರಲ್ಲಿ ಲೈಂಗಿಕ ಆರ್ಗನ್ ಎರಡು ಕಿವಿಗಳ ನಡುವೆ ಇರುತ್ತವೆ. ಲೈಂಗಿಕ ಸಮಸ್ಯೆಯಿಂದ ಬಳಲುವ ಶೇ.90 ಜನರು ಹಿಂದಿನ ಅನುಭವ, ಲೈಂಗಿಕತೆಗೆ ವಿರುದ್ಧವಾದ ಭಾವನೆ, ನಿರ್ದಿಷ್ಟ ವ್ಯಕ್ತಿಗಳಿಗೆ ನಿರ್ದಿಷ್ಟ ವ್ಯಕ್ತಿಗಳ ಬಗೆಗೆ ಇರುವ ಅನಾಸಕ್ತಿ ಇತ್ಯಾದಿ ಕಾರಣಗಳನ್ನು ಹೊಂದಿರುತ್ತಾರೆ. ಇದು ಮಾನಸಿಕ ಸಮಸ್ಯೆ ಎಂಬುದು ಜನರಿಗೆ ಗೊತ್ತಿರಬೇಕು. ಆಹಾರ ಜಾಸ್ತಿ ತಿಂದಾಗ ಉಂಟಾಗುವ ಥೈರಾಯ್ಡ, ಮಧುಮೇಹ ಸಮಸ್ಯೆಗಳೂ ಲೈಂಗಿಕ ಅನಾಸಕ್ತಿಗೆ ಕಾರಣವಾಗುತ್ತದೆ ಎಂದು ಮನಃಶಾಸ್ತ್ರಜ್ಞ, ಉಡುಪಿ ದೊಡ್ಡಣಗುಡ್ಡೆ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ನಿರ್ದೇಶಕ ಡಾ|ಪಿ.ವಿ.ಭಂಡಾರಿ ಅಭಿಪ್ರಾಯಪಡುತ್ತಾರೆ. “ಎಷ್ಟೋ ಜನರಿಗೆ ಮದ್ಯಪಾನ ಮಾಡಿದರೆ ಲೈಂಗಿಕ ಉತ್ತೇಜನ ಸಿಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಮದ್ಯ ಸೇವನೆ ಲೈಂಗಿಕ ಬಯಕೆಯನ್ನು ಮಾತ್ರ ಹೆಚ್ಚಿಸುತ್ತದೆ, ಬಳಿಕ ಲೈಂಗಿಕ ನಿಷ್ಕ್ರಿಯತೆಯನ್ನು ಉಂಟು ಮಾಡುತ್ತದೆ. ಕ್ರಮೇಣ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತದೆ’ ಎಂಬ ಮಾತನ್ನು ಮದ್ಯವರ್ಜನೆಗಾಗಿ ವಿಶೇಷ ಶ್ರಮ ವಹಿಸುತ್ತಿರುವ ಡಾ|ಪಿ.ವಿ.ಭಂಡಾರಿಯವರು “ಬಾಳುವಂಥ ಹೂವೇ, ಬಾಡುವಾಸೆ ಏಕೆ?’ ಪುಸ್ತಕದಲ್ಲಿ ದಾಖಲಿಸಿ ಜನರನ್ನು ಎಚ್ಚರಿಸಿದ್ದಾರೆ. ಪ್ರಾಣಿಗಳಲ್ಲಿ ಹಾರ್ಮೋನುಗಳು ಋತು ಆಧರಿಸಿ ಶಾರೀರಿಕ ಪರಿವರ್ತನೆಯಿಂದ ಲೈಂಗಿಕ ಚಟುವಟಿಕೆಗೆ ತೊಡಗುವಂತೆ ಮಾಡುತ್ತವೆ. ಮನುಷ್ಯರಲ್ಲಿ ಮಾನಸಿಕ ಸಂಕಲ್ಪ ಮುಖ್ಯ ಕಾರಣ. ಆದ್ದರಿಂದ ಯಾವುದೇ ಸಂದರ್ಭದಲ್ಲಿಯೂ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಬಹುದು. ಆಹಾರ ಇದಕ್ಕೆ ಪೂರಕ ಅಂಶವಾಗುತ್ತದೆ ಮತ್ತು ಆಹಾರದಲ್ಲಿಯೂ ಸಾತ್ವಿಕ, ರಾಜಸ, ತಾಮಸ ಆಹಾರಗಳು ಪರಿಣಾಮ ಬೀರುತ್ತವೆ ಎಂಬ ಅಭಿಪ್ರಾಯವನ್ನು ಉಡುಪಿ ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಫಾರ್ಮಸಿ ಪ್ರಧಾನ ವ್ಯವಸ್ಥಾಪಕ ಡಾ|ಮುರಳೀಧರ ಬಲ್ಲಾಳ್ ನೀಡುತ್ತಾರೆ. ಐದು ಶತಮಾನಗಳ ಹಿಂದಿದ್ದ ಶ್ರೀವಿಜಯೀಂದ್ರತೀರ್ಥರು ಹೆಚ್ಚಿಗೆ ನೆಲೆಸಿದ್ದು ತಮಿಳುನಾಡಿನ ಕುಂಭಕೋಣದಲ್ಲಿಯಾದರೂ ಕರ್ನಾಟಕದ ಸಂಬಂಧವೂ ಇದೆ. ಇವರು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಗುರುಗಳ ಗುರುಗಳು. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಧಾರ್ಮಿಕ ಪೀಠವಾದ ಶ್ರೀಕಾಶೀ ಮಠ ಸಂಸ್ಥಾನದ ಆದ್ಯ ಪ್ರವರ್ತಕರು ಮತ್ತು ದ.ಕ. ಜಿಲ್ಲೆಯ ಮೂಲ್ಕಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿರುವ ಅಷ್ಟಬಾಹು ನರಸಿಂಹನನ್ನು ಪ್ರತಿಷ್ಠಾಪಿಸಿದ ಸಂಕೇತವಾಗಿ ಪ್ರತಿವರ್ಷ ಪ್ರತಿಷ್ಠಾ ಹುಣ್ಣಿಮೆಯಲ್ಲಿ ಮಹಾಭಿಷೇಕ ನಡೆಯುತ್ತದೆ. ಉಡುಪಿ ರಥಬೀದಿಯಲ್ಲಿರುವ ರಾಘವೇಂದ್ರ ಮಠದ ಜಾಗವನ್ನು ಶ್ರೀವಾದಿರಾಜ ಸ್ವಾಮಿಗಳು ಶ್ರೀವಿಜಯೀಂದ್ರರಿಗೆ ಕೊಟ್ಟಿದ್ದರು. ಅಪ್ಪಯ್ಯ ದೀಕ್ಷಿತರು ಹೆಸರಾಂತ ವೇದಾಂತಪಟು, ವಿದ್ವಾಂಸರು. ಇವರಿಬ್ಬರ ನಡುವೆ ಅನೇಕ ದಂತಕತೆಗಳು ಇವೆ. ವಿಜಯೀಂದ್ರತೀರ್ಥರ ಜೀವನಚರಿತ್ರೆಯಲ್ಲಿ ಲೈಂಗಿಕ ಪರೀಕ್ಷೆ ನಡೆದದ್ದೂ, ಅವರು ಯಾವುದೇ ಮಾನಸಿಕ ವಿಕಾರಕ್ಕೆ ಒಳಗಾಗದೆ ಆ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದ್ದೂ ಉಲ್ಲೇಖವಿದೆ. ಮಟಪಾಡಿ ಕುಮಾರಸ್ವಾಮಿ