ವಿಜಯಪುರ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಜೂ.12ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವಾಗಿ ಜೂ.12ರಂದು ವಿಶ್ವದಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕೂಡ ಇದರ ಅಂಗವಾಗಿ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳದಂತೆ ಹಾಗೂ ಬಾಲಕಾರ್ಮಿಕರಾಗಿ ಮಕ್ಕಳನ್ನು ದುಡಿಯಲು ಕಳುಹಿಸುವ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಇದಕ್ಕಾಗಿ ಬೀದಿ ನಾಟಕ, ಜಾಥಾ ಸೇರಿದಂತೆ ಬಾಲಕಾರ್ಮಿಕ ಕುರಿತು ಅಗತ್ಯ ಜಾಗೃತಿ ಮೂಡಿಸಬೇಕು. ಕಾರ್ಯಕ್ರಮದಲ್ಲಿ ನುರಿತ ಉಪನ್ಯಾಸಕರನ್ನು ಆಹ್ವಾನಿಸಿ ಬಾಲಕಾರ್ಮಿಕ ಪದ್ಧತಿ ವಿರೋಧ ಕುರಿತ ಉಪನ್ಯಾಸ ಆಯೋಜಿಸುವಂತೆ ಸೂಚನೆ ನೀಡಿದರು.
ಬಾಲ ಕಾರ್ಮಿಕ ಕಾಯ್ದೆ 1986 ರನ್ವಯ ಯಾವುದೇ ಉದ್ದಿಮೆಗಳಲ್ಲಿ 14 ವರ್ಷದೊಳಗಿನ ಹಾಗೂ ತಿದ್ದುಪಡೆ ಕಾಯ್ದೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ 2016 ಕಾಯ್ದೆ ಅನ್ವಯ ಸೂಚಿಸಿದ ಅಪಾಯಕಾರಿ ಉದ್ದಿಮೆಯಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. 50 ಸಾವಿರ ರೂ. ದಂಡ ಅಥವಾ 2 ವರ್ಷದ ವರೆಗೆ ಜೈಲು ಶಿಕ್ಷೆಗೆ ಅವಕಾಶವಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಾಲಕಾರ್ಮಿಕ ಪದ್ಧತಿ ತಡೆಗಟ್ಟಲು ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ 2019-20ನೇ ಸಾಲಿನ ಎನ್‌ಸಿಎಲ್ಪಿ, ಎಸ್‌ಸಿಎಲ್ಪಿ ಯೋಜನೆ ಅಂದಾಜು ಆಯವ್ಯಯ, ಎಂಎಸ್‌ಒಪಿ ಕಾರ್ಯಕ್ರಮ ಆಯೋಜನೆ, ಸಮೀಕ್ಷೆಯಲ್ಲಿ ಪತ್ತೆಯಾದ ಬಾಲ ಕಾರ್ಮಿಕರನ್ನು ಬಿಡುಗಡೆಗೊಳಿಸುವುದು, ಬಾಲಕಾರ್ಮಿಕ ತರಬೇತಿ ಕೇಂದ್ರ ಪ್ರಾರಂಭಿಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಕಾರ್ಮಿಕ ಅಧಿಕಾರಿ ಅಶೋಕ ಬಾಳಿಕಟ್ಟಿ, ಜಿಲ್ಲಾ ಸರ್ವಶಿಕ್ಷಣ ಅಭಿಯಾನ ಅಧಿಕಾರಿ ಆರೀಫ ಬಿರಾದಾರ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಶ್ರೀನಿವಾಸ ವಾಲೀಕಾರ, ಡಿಸಿಪಿಒ ನಿರ್ಮಲಾ ಸುರಪುರ ಸೇರಿದಂತೆ ಇತರರು ಇದ್ದರು.