ವಿಜಯಪುರ: ಮೂಡಾ ಹಗರಣ ಬಿಜೆಪಿ ಸರ್ಕಾರದಲ್ಲೇ ನಡೆದಿದೆ. ಆಗ ಬಿಜೆಪಿ ಪಕ್ಷದಲ್ಲಿದ್ದ ರಾಜೀವ ಯಾರ ಶಿಷ್ಯ ಎಂಬುದು ಕರ್ನಾಟಕದ ಮೂಲೆ ಮೂಲೆಗೂ ಗೊತ್ತಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಜು.28ರ ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿದ್ದ ರಾಜೀವ ಯಾರ ಶಿಷ್ಯ ಎಂದು ವಿಜಯೇಂದ್ರ ಹೇಳಲಿ. ಬಿಜೆಪಿ ಅಧಿಕಾರದಲ್ಲಿ ನಡೆದಿರುವ ಹಗರಣ ಸಿದ್ಧರಾಮಯ್ಯ ಸರ್ಕಾರದಲ್ಲಿ ಮುಚ್ಚಿ ಹೋಗಲೆಂದು ಕಾಂಗ್ರೆಸ್ ಸೇರಿದ್ದಾನೆ. ಲೋಕಸಭಾ ಚುನಾವಣಾ ಸಂದರ್ಭದಲ್ಲೇ ಬಿಜೆಪಿ ತೊರೆದು ರಾಜೀವ ಕಾಂಗ್ರೆಸ್ ಸೇರಿದ್ದು ಯಾರ ನಿರ್ದೇಶನದ ಮೇರೆಗೆ ಎಂದು ವಿಜಯೇಂದ್ರ ಬಹಿರಂಗವಾಗಿ ಹೇಳಲಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ವಿರುದ್ಧ ಹೋರಾಟವಲ್ಲ, ಕಾಂಗ್ರೆಸ್ ವಿರುದ್ಧ ಹೋರಾಟ ಎನ್ನುತ್ತಿದ್ದಾರೆ ವಿಜಯೇಂದ್ರ. ಸಿದ್ಧರಾಮಯ್ಯ ಬಿಜೆಪಿ ಪಕ್ಷದವರಾ, ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತಾರೆ ಎಂದು ಕಿಡಿ ಕಾರಿದರು.
ದಲಿತರ ಅಭಿವೃದ್ಧಿ ಹಣ ಅವ್ಯವಹಾರ ಮಾಡಿದ ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷ ಕಿತ್ತು ಹಾಕಿದ್ದರೆ ನಿಜವಾದ ಸಿದ್ಧರಾಮಯ್ಯ ಎನ್ನುತ್ತಿದ್ದೆ ಎಂದು ನಾನು ಹೇಳಿದೆ ಎಂದರು.
ಎಲ್ಲಾ ಪಕ್ಷದವರು ಇದ್ದಾರೆ ಎಂದು ಸಚಿವ ಭೈರತಿ ಸುರೇಶ ಹೇಳುತ್ತಿದ್ದಾರೆ. ಸಿಬಿಐ ತನಿಖೆಗೆ ಒಪ್ಪಿಸಿದರೆ 4-5 ಸಾವಿರ ಕೋಟಿ ರೂ. ದೊಡ್ಡ ಹಗರಣವಾಗಿದೆ. ಇದರಲ್ಲಿ ಯಡಿಯೂರಪ್ಪ, ವಿಜಯೇಂದ್ರ, ಯಡಿಯೂರಪ್ಪ ಅಕ್ಕನ ಮಕ್ಕಳು ಇದ್ದಾರೋ, ರಾಜೀವ ಇದ್ದಾನೋ, ಯಾರಿದ್ದಾರೋ ಎಲ್ಲರೂ ಸಿಕ್ಕಿಹಾಕಿಕೊಳ್ಳಲಿದ್ದಾರೆ ಎಂದು ಆಗ್ರಹಿಸಿದರು.
ದಲಿತರ ಸರ್ಕಾರ ಎನ್ನುತ್ತಿದ್ದ ಕಾಂಗ್ರೆಸ್ ಪಕ್ಷದಲ್ಲಿ ದಲಿತರ ಅನುದಾನ ಅವ್ಯವಹಾರ, ದಲಿತರ ಭೂಮಿ ಪಡೆದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಕ್ಷ್ಮೀಬಾಯಿ ಸುಮ್ಮನೇ ಕುಳಿತಿದ್ದರು. ಭಾಗ್ಯಲಕ್ಷ್ಮೀ ಬಾರಮ್ಮ, ಎರಡು ಸಾವಿರ ರೂಪಾಯಿ ಕೊಡ್ರೆಮ್ಮ ಎಂದು ಸದನದಲ್ಲೇ ಹೇಳಿದ್ದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಕುಟುಕಿದರು.