ವಿಜಯಪುರ : ಜಿಲ್ಲೆಯ ಜಾತ್ರೆಯೊಂದರಲ್ಲಿ ವೀರಗಾಸೆಯ ಪುರವಂತಿಗೆ ಪ್ರಮುಖರೊಬ್ಬರು ಸಾಮಾನ್ಯ ಶಸ್ತ್ರ ಹಾಕಿಕೊಳ್ಳುವ ಬದಲು ಕಬ್ಬಿಣದ ಸಲಾಕೆಯನ್ನೇ ಶಸ್ತ್ರವಾಗಿ ಹಾಕಿಕೊಂಡು ನಿಬ್ಬೆರಗು ಮೂಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ವೀರಭದ್ರೇಶ್ವರ ಜಾತ್ರೆ ನಡೆದಿದೆ. ಸದರಿ ಜಾತ್ರೆಯ ಮೆವಣಿಗೆ ವಿವಿಧ ಜಾನಪದ ತಂಡಗಳಂತೆ ವೀರಗಾಸೆಯ ತಂಡವೂ ಪಾಲ್ಗೊಂಡಿತ್ತು. ಲಚ್ಯಾಣ ವೀರಭದ್ರೇಶ್ವರ ಜಾತ್ರೆಯ ಸಂದರ್ಭದಲ್ಲಿ ಪುರವಂತರೊಬ್ಬರು 21 ಅಡಿ ಉದ್ದದ ಕಬ್ಬಿಣದ ಸಲಾಕೆಯನ್ನೇ ಶಸ್ತ್ರವಾಗಿ ತಮ್ಮ ಕೆನ್ನೆಯ ಚರ್ಮಕ್ಕೆ ಚುಚ್ಚಿಕೊಂಡು ವಿಸ್ಮಯ ಮೂಡಿಸಿದ್ದಾರೆ.
ವೀರಗಾಸೆ ತಂಡದವರು ಹಾಗೂ ವೀರಭಧ್ರೇಶ್ವರ ಭಕ್ತರು ತಮ್ಮ ಬಾಯಿಯ ಮಾರ್ಗವಾಗಿ ಕೆನ್ನೆಯ ಚರ್ಮಕ್ಕೆ ವಿವಿಧ ಲೋಹಗಳಿಂದ ಮಾಡಿದ ಸಣ್ಣ ಶಸ್ತ್ರಗಳನ್ನು ಚುಚ್ಚಿಕೊಳ್ಳುತ್ತಾರೆ. ಅದರಲ್ಲಿ ಕೆಲವು ಸಾಹಸಿಗರು ಒಂದು ಇಂಚಿನ ದಾರ, ಗಂಟು ದಾರದಂಥ ವಸ್ತುಗಳನ್ನೂ ಕೆನ್ನೆಯ ಚರ್ಮದ ಮೂಲಕ ಹಾಯಿಸಿಕೊಳ್ಳುವ ಮೂಲಕ ತಮ್ಮ ಭಕ್ತಿ ಪ್ರದರ್ಶನ ಮಾಡುವುದು ಎಲ್ಲಡೆ ಕಂಡು ಬರುವ ಸಾಮಾನ್ಯ ಸಂಗತಿ.
ಇದನ್ನೂ ಓದಿ : ಬೀಜ,ಗೊಬ್ಬರ ಕೊರತೆಯಾಗದಂತೆ ನಿಗಾವಹಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ
ಆದರೆ ಲಚ್ಯಾಣ ವೀರಭದ್ರೇರ್ಶವರ ಜಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವೀರಗಾಸೆ ತಂಡದ ಪುರವಂತ ಈರಣ್ಣ ಮುಜಗೊಂಡ 10 ಎಂ.ಎಂ. ಗಾತ್ರದ 21 ಅಡಿ ಉದ್ದದ ಕಬ್ಬಿಣದ ಸಲಾಕೆಯನ್ನೇ ಕೆನ್ನೆಯ ಚರ್ಮದಲ್ಲಿ ಶಸ್ತ್ರವಾಗಿ ಚುಚ್ಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಉತ್ತಮ ಮಳೆ, ಬೆಳೆಗಾಗಿ ತಮ್ಮ ಆರಾಧ್ಯ ದೈವ ವೀರಭದ್ರೇಶ್ವರನಲ್ಲಿ ಪ್ರಾರ್ಥಿಸಲು ಸಲಾಕೆಯ ಶಸ್ತ್ರ ಹಾಕಿಕೊಂಡಿದ್ದಾಗಿ ಈರಣ್ಣ ಮುಜಗೊಂಡ ನಂತರ ಪ್ರತಿಕ್ರಿಯೆ ನೀಡಿದ್ದಾರೆ.