ವಿಜಯಪುರ : ಜಮ್ಮು ಪರಿಸರದಲ್ಲಿ ಸೋಮವಾರ ಮೃತಪಟ್ಟಿದ್ದ ಜಿಲ್ಲೆಯ ತಿಕೋಟಾ ಮೂಲದ ವೀರ ಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ ತವರಿಗೆ ಆಗಮಿಸಿದೆ.
ಬುಧವಾರ ಬೆಳಗ್ಗೆ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ಆಗಮಿಸುತ್ತಲೇ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ತಿಕೋಟಾ ಪಟ್ಟಣದ ವಾಡೇ ಮೈದಾನದಲ್ಲಿ ಇರಿಸಲಾಗಿದ್ದು, ಸಾರ್ವಜನಿಕರು ಸರದಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು.
ತಿಕೋಟಾ ಸುತ್ತಲಿನ ಸಾವಿರಾರು ಮಂದಿ ಯೋಧನ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದು, ರಾಜಕೀಯ ನಾಯಕರು, ಗಣ್ಯರು ಸೇರಿದಂತೆ ಹಲವರು ಯೋಧನ ಪಾರ್ಥಿವ ಶರೀರದ ಮೇಲೆ ಹೂಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು.
ಸಾರ್ವಜನಿಕ ದರ್ಶನದ ಬಳಿಕ ಮೃತ ಯೋಧನ ಅಂತ್ಯ ಸಂಸ್ಕಾರಕ್ಕೆ ತಿಕೋಟಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿದ್ಧತೆ ನಡೆಸಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿರುವ ಜಿಲ್ಲಾಧಿಕಾರಿ ಭೂಬಾಲನ್, ವಿಜಯಪುರ ಜಿಲ್ಲೆಯ ತಿಕೋಟಾ ಮೂಲದ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಬಟಾಲಿಯನ್ ಹವಾಲ್ದಾರ್ ರಾಜು ಗಿರಿಮಲ್ಲ ಕರ್ಜಗಿ ಮೃತಪಟ್ಟಿದ್ದಾರೆ. ಹೈದರಾಬಾದ್ ಮಾರ್ಗವಾಗಿ ಪಾರ್ಥಿವ ಶರೀರ ಜಿಲ್ಲೆಗೆ ಬರಲಿದ್ದು, ಯೋಧನ ಸಾವಿಗೆ ನಿಖರ ಕಾರಣವೂ ಸೇರಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದರು.
ಮೃತ ಯೋಧ ಹವಾಲ್ದಾರ್ ರಾಜು ಕರ್ಜಗಿ ಭಾರತೀಯ ರೈಫಲ್ಸನ 51 ಯುನಿಟ್ ನ ಮಹಾರ್ ರೆಜಿಮೆಂಟ್ -13 ರ ಹವಾಲ್ದಾರ್ ಆಗಿದ್ದು, ಜಮ್ಮು ಕಾಶ್ಮೀರ ಪರಿಸರದಲ್ಲಿ ಕರ್ತವ್ಯದಲ್ಲಿದ್ದರು.ಆದರೆ ಭಾರತೀ ಸೇನಾ ಹವಾಲ್ದಾರ್ ಸಾವು ಆಗಿರುವುದು ಎಲ್ಲಿ, ಸಾವಿಗೆ ನಿಖರ ಕಾರಣಗಳೇನು ಎಂಬುದನ್ನು ಈ ವರೆಗೂ ಬಹಿರಂಗವಾಗಿಲ್ಲ.