ಆಂಧ್ರ ಪ್ರದೇಶ: ಮಂಗಳಮುಖಿ ಜತೆ ಪುತ್ರ ಮದುವೆ ಆಗುವುದಾಗಿ ಹೇಳಿದ ಕಾರಣಕ್ಕೆ ಅವಮಾನಗೊಂಡ ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡ ದಾರುಣ ಘಟನೆ ಆಂಧ್ರಪ್ರದೇಶದ ನಂದ್ಯಾಲ್ನಲ್ಲಿ ನಡೆದಿರುವುದು ವರದಿಯಾಗಿದೆ.
ಏನಿದು ಘಟನೆ?: ಆಂಧ್ರದ ನಂದ್ಯಾಲ ನಿವಾಸಿಗಳಾದ ಸುಬ್ಬು ರಾಯಡು ಮತ್ತು ಸರಸ್ವತಿ ದಂಪತಿಯ ಏಕೈಕ ಪುತ್ರ ಸುನೀಲ್ ಬಿಟೆಕ್ ಪದವೀಧರನಾಗಿದ್ದು, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ.
ಸುನೀಲ್ ಕಳೆದ ಮೂರು ವರ್ಷಗಳಿಂದ ಮಂಗಳಮುಖಿಯಾಗಿರುವ ಸ್ಮಿತಾ ಎಂಬಾಕೆ ಜತೆ ಸಂಬಂಧದಲ್ಲಿದ್ದು, ಇತ್ತೀಚೆಗೆ ಸುನೀಲ್ ಬಳಿ ಪೋಷಕರು ಮದುವೆ ವಿಚಾರವನ್ನು ಮಾತನಾಡಿದ್ದಾರೆ. ಈ ವೇಳೆ ತಾನು ಸ್ಮಿತಾ ಎಂಬಾಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ.
ಮಗ ಪ್ರೀತಿಸುತ್ತಿರುವುದು ಮಂಗಳಮುಖಿ ಎನ್ನವುದನ್ನು ಅರಿತ ಪೋಷಕರು ಸುನೀಲ್ನನ್ನು ಕೌನ್ಸಿಲಿಂಗ್ ಮಾಡಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದಾದ ಬಳಿಕವೂ ಸುನೀಲ್ ಸ್ಮಿತಾಳನ್ನೇ ವಿವಾಹವಾಗುವುದಾಗಿ ಪೋಷಕರ ಮುಂದೆ ಹೇಳಿದ್ದಾನೆ.
ಮಗನ ನಿರ್ಧಾರದಿಂದ ಮನನೊಂದು ಅವಮಾನ ಅನುಭವಿಸಿದ ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಸುನೀಲ್ ಪ್ರೀತಿಸುತ್ತಿರುವ ಮಂಗಳಮುಖಿ ಸ್ಮಿತಾ ಅವರ ಪರಿಚಿತ ಗುಂಪು ಸುನೀಲ್ ಪೋಷಕರಿಗೆ ಅವಮಾನ ಮಾಡಿ, ಕಿರುಕುಳ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಸದ್ಯ ಈ ಬಗ್ಗೆ ಇದುವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.