Advertisement

ವಿಶ್ವಕ್ಕೆ ಜ್ಞಾನದ ಬೆಳಕು ನೀಡಿದ ಸರ್ವಜ್ಞ

11:54 AM Feb 21, 2020 | Naveen |

ವಿಜಯಪುರ: ಅಕ್ಷರ ಬಲ್ಲವ ಮಾತ್ರ ಬ್ರಹ್ಮನಲ್ಲ, ಅಕ್ಷರ ಲೋಕದ ಪರಿಚಯ ಇಲ್ಲದ ಜೀವನಾನುಭವ ಇರುವ ಅಂತಜ್ಞಾನಿ ಕೂಡ ಸರ್ವಜ್ಞನಾಗಬಲ್ಲ. ತ್ರಿಪದಿ ಬ್ರಹ್ಮ ಸರ್ವಜ್ಞನಾಗಿದ್ದು ಕೂಡ ಜೀವನಾನುಭವದಿಂದಲೇ ಎಂಬುದು ಗಮನೀಯ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಹೇಳಿದರು.

Advertisement

ನಗರದ ಕಂದಗಲ್ಲ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತಿ-ಮತ ಮೀರಿದ ಜೀವನಾನುಭವದ ಮೂಲಕ ಸರ್ವಜ್ಞ ಎಂಬ ಮಹಾನ್‌ ವಚನಕಾರ, ತಮ್ಮ ತ್ರಿಪದಿಗಳ ಮೂಲಕ ವಿಶ್ವಜ್ಞಾನದ ಸಂದೇಶ ನೀಡಿದ್ದಾರೆ ಎಂದು ಬಣ್ಣಿಸಿದರು.

ಸರ್ವರೊಳಗೊಂದು ನುಡಿ ಕಲಿತು ಸರ್ವಜ್ಞನಾದೆ ಎಂದು ವಿನೀತವಾಗಿ ಹೇಳವು ಸರ್ವಜ್ಞ, ಜ್ಞಾನ ಸಿಗುವಲ್ಲಿ ಹಾಗೂ ಸದ್ವಿಚಾರಗಳು ಪಸರಿಸುವಲ್ಲಿ ಸಂಪರ್ಕ ಮಾಡಿ ಜ್ಞಾನ ಸಂಪಾದಿಸಬೇಕು. ಸರ್ವಜ್ಞರಂಥ ಶರಣರ ವಚನಗಳಲ್ಲಿ ಇರುವ ಬದುಕಿಗೆ ಸನ್ಮಾರ್ಗ ತೋರಬಲ್ಲ ಜ್ಞಾನವನ್ನು ಪಡೆದು, ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳುವ ಮೂಲಕ ಇಂದಿನ ಮಕ್ಕಳು ಸಾಧನೆ ಮೇರೆ ಏರುವಂತೆ ಸಲಹೆ ನೀಡಿದರು.

ಜೀವನಾನುಭವ ಇರುವ ಹಿರಿಯಲ್ಲಿ ಜ್ಞಾನದ ಅಮೃತ ಹೊಂದಿರುತ್ತಾರೆ. ಹೀಗಾಗಿ ಇಂದಿನ ಮಕ್ಕಳು ಹಿರಿಯರ ಅನುಭವದ ಜೀವನದ ಪಾಠ ಕಲಿಯುವುದು ಅಗತ್ಯವಾಗಿದೆ. ಇಂಥ ಮೌಲಿಕ ಸಂದೇಶಗಳನ್ನು ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಮಾದರಿಯಲ್ಲಿ ಕೇವಲ ಮೂರು ಸಾಲುಗಳಲ್ಲಿ ವಿಶಾಲ ಅರ್ಥ ನೀಡುವ ವಚನಗಳನ್ನು ರಚಿಸುವ ಮೂಲಕ ಸರ್ವಜ್ಞ ಸಮಾಜಕ್ಕೆ ಮಹದುಪಕಾರ ಮಾಡಿದ್ದಾರೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ರಾಜೇಂದ್ರಕುಮಾರ ಬಿರಾದಾರ, ವೇಮನ, ತಿರುವಳ್ಳುವರ, ಕಬೀರರ ಸಾಲಿನಲ್ಲಿ ನಿಲ್ಲುವ ಸಂತಕವಿ ಸರ್ವಜ್ಞ ಅವರ ಪ್ರತಿ ವಚನವೂ ಸಮಾಜಕ್ಕೆ ಚುಚ್ಚುಮದ್ದಿನಂತೆ ಮಾರ್ಗದರ್ಶನ ಮಾಡುತ್ತವೆ. ಇಂಥ ವಿಶಿಷ್ಟ ಜ್ಞಾನಿಯ ವಚನಗಳನ್ನು ಮೊಟ್ಟ ಮೊದಲು ಸಂಗ್ರಹಿಸಿ, ಸಂರಕ್ಷಿಸಿ ಕೊಟ್ಟ ಮೊದಲಿಗರು ಉತ್ತರ ಕರ್ನಾಟಕದ ಉತ್ತಂಗಿ ಚನ್ನಪ್ಪ ಎಂದು ಬಣ್ಣಿಸಿದರು.

Advertisement

ಇದೇ ವೇಳೆ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ,ಕೆಎಎಸ್‌ ಅಧಿಕಾರಿ ಎಸ್‌.ಕೆ.ಭಾಗ್ಯಶ್ರೀ ಇವರನ್ನು ಸನ್ಮಾನಿಸಲಾಯಿತು. ಸರ್ವಜ್ಞರ ವಚನಗಳಿಗೆ ಲಕ್ಷ್ಮೀ
ತೇರದಾಳಮಠ ಭರತನಾಟ್ಯ ಮಾಡಿ ಪ್ರೇಕ್ಷಕರ ಮನ ತಣಿಸಿದರು. ಡಿಎಸ್ಪಿ ಕೆ.ಸಿ.ಲಕ್ಷ್ಮೀ ನಾರಾಯಣ, ಸಿಪಿಐ ಬಸವರಾಜ ಮೂಕರ್ತಿಹಾಳ, ದೈಹಿಕ ಶಿಕ್ಷಣಾಧಿಕಾರಿ ಗಂಗಶೆಟ್ಟಿ, ಸಿ.ಬಿ. ಕುಂಬಾರ, ಶ್ರೀಶೈಲ ಕುಂಬಾರ, ಎಂ.ಎಂ. ಬಾನ್ಸಿ, ಸಿದ್ದಮ್ಮ ಕುಂಬಾರ, ಸುನಂದಾ ಕುಂಬಾರ, ಎಸ್‌.ಎಸ್‌. ಕುಂಬಾರ ಇದ್ದರು. ಪುಷ್ಪಾ ಕುಲಕರ್ಣಿ ನಾಡಗೀತೆ ಹಾಡಿ ಸುಗಮ ಸಂಗೀತ ನಡೆಸಿಕೊಟ್ಟರು. ಮಹೇಶ ಪೋತದಾರ ಸ್ವಾಗತಿಸಿದರು. ಎಚ್‌.ಎ ಮಮದಾಪುರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next