ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್-19 ಗಂಟಲು ದ್ರವ ಮಾದರಿ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗಾಗಿ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಕಾರಾತ್ಮಕ ಸ್ಪಂದನೆ ನೀಡಿದ್ದು, ಅವಶ್ಯಕತೆಗೆ ಅನುಗುಣವಾಗಿ ಆದ್ಯತೆ ಮೇಲೆ ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಬುಧವಾರ ನಗರದ ನೂತನ ಪ್ರವಾಸ ಮಂದಿರದಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಜಿಲ್ಲೆಯಲ್ಲಿ ತೀವ್ರ ಶ್ವಾಸಕೋಶದ ಸೋಂಕು, ನೆಗಡಿ, ಕೆಮ್ಮು, ಜ್ವರ ಲಕ್ಷಣ ಇರುವವರನ್ನು ಪತ್ತೆ ಹಚ್ಚಲು ಆಶಾ ಕಾರ್ಯಕರ್ತರು, ನರ್ಸ್‌ಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಸಂಗ್ರಹಿಸಿದ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.
ಈವರೆಗೆ ಕಂಟೇನ್ಮೆಂಟ್ ವಲಯದಲ್ಲಿ ಮಾತ್ರ ಇಂಥ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದೀಗ ಜಿಲ್ಲೆಯಾದ್ಯಂತ ಮನೆ ಮನೆಗೆ ಭೇಟಿ ನೀಡಿ ಶ್ವಾಸಕೋಶ ಸಮಸ್ಯೆ, ನೆಗಡಿ, ಜ್ವರ ಲಕ್ಷಣ ಇರುವರನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ. ಈ ಸಮೀಕ್ಷೆಗಾಗಿ ಆಶಾ ಕಾರ್ಯಕರ್ತೆಯರು, ನರ್ಸ್‌ಗಳು, ಬಿಎಲ್‌ಒಗಳು ಜಿಲ್ಲೆಯಾದ್ಯಂತ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಇದರ ಜೊತೆಗೆ ಹಿರಿಯ ನಾಗರೀಕರು, ಗರ್ಭಿಣಿಯರು, ಸಕ್ಕರೆ ಕಾಯಿಲೆ ಹೊಂದಿದವರು ಮತ್ತು ಡಯಾಲಿಸಿಸ್ ರೋಗಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚಿಸಲಾಗಿದೆ. ಹೀಗಾಗಿ ಜಿಲ್ಲೆಯ ಜನರು ಸಮೀಕ್ಷೆಗೆ ಬರುವ ಆರೋಗ್ಯ ಸಮೀಕ್ಷೆ ಸಿಬ್ಬಂದಿಗೆ ಜನರು ಸಹಕಾರ ನೀಡುವಂತೆ ಜಾಗೃತಿ ಮೂಡಿಸಿ ಎಂದರು.
ಜಿಲ್ಲೆಯಲ್ಲಿ ಈವರೆಗೆ 35 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಸೋಂಕಿತ 32 ರೋಗಿಗಳ ಆರೋಗ್ಯ ಸ್ಥಿರವಾಗಿದೆ. ಈವರೆಗೆ 1033 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳ ಬಗ್ಗೆ ಪತ್ತೆ ಹಚ್ಚಲಾಗಿದೆ ಎಂದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಅರುಣ ಶಹಾಪುರ ಮಾತನಾಡಿ, ಕಲ್ಲಂಗಡಿ, ದಾಳಿಂಬೆ, ಪಪ್ಪಾಯಿ, ಕರಬೂಜ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಆವರ್ತ ನಿಧಿ ಸ್ಥಾಪಿಸಿ ರೈತರ ನೆರವಿಗಾಗಿ ಪ್ರಸ್ತಾವನೆ ಸಲ್ಲಿಸಬೇಕು. ಕೃಷಿ ಮಾರುಕಟ್ಟೆ ವ್ಯವಸ್ಥೆಯ ಮಧ್ಯವರ್ತಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಬೆಂಬಲ ಬೆಲೆ ಕಲ್ಪಿಸುವಂತೆ ಸಲಹೆ ನೀಡಿದರು.
ಈ ನೀರು ಲಭ್ಯವಾಗಲು ಅನಾನುಕೂಲವಾಗುತ್ತಿದ್ದು ಈ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವಂತೆ ಸಚಿವರಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮೇರೆಗೆ ರಾಜ್ಯ ಮತ್ತು ಮಹಾರಾಷ್ಟ್ರ ಸರ್ಕಾರದ ಗಮನ ಸೆಳೆಯಲು ತಾವು ಪ್ರಯತ್ನಸುವುದಾಗಿ ಸಚಿವರು ತಿಳಿಸಿದರು. ಶಾಸಕರಾದ ಎಂ.ಸಿ.
ಮನಗೂಳಿ, ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್ಪಿ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದರೆಡ್ಡಿ ಇದ್ದರು.