Advertisement

ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ

03:41 PM May 28, 2020 | Naveen |

ವಿಜಯಪುರ: ಕೋವಿಡ್ ತಡೆಗಟ್ಟುವಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದೇವೆ. ಇದೇ ವೇಳೆ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ನೀಗಲು ರಾಜ್ಯದಲ್ಲಿ ವಿಜಯಪುರ ಸೇರಿದಂಥೆ ನಾಲ್ಕು ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಅಗ್ರೋಕಾಪ್‌ ಸಂಸ್ಥೆ ಸಹಯೋಗದಲ್ಲಿ ನಾನು ನಿರ್ವಹಿಸುವ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 1.50 ಕೋಟಿ ರೂ. ಮೌಲ್ಯದ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಬುಧವಾರ ನಗರದ ಜಿಪಂ ಸಭಾಂಗಣದಲ್ಲಿ ಅಗ್ರೋಕಾಪ್‌ ಸಂಸ್ಥೆ ಸಹಯೋಗದಲ್ಲಿ ಅಪೌಷ್ಟಿಕ ಮಕ್ಕಳಿಗೆ ಸಿದ್ಧ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಿ ಮಾತನಾಡಿದ ಅವರು, ಸದರಿ ಸಂಸ್ಥೆ ವಿಜಯಪುರ ಜಿಲ್ಲೆ ಒಂದರಲ್ಲೇ 4022 ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸುತ್ತಿದೆ. ಬೆಳಗಾವಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸುಮಾರು 1.50 ಕೋಟಿ ರೂ. ಮೌಲ್ಯದ ಪೌಷ್ಟಿಕ ಆಹಾರವನ್ನು ನಾನು ನಿರ್ವಹಿಸುತ್ತಿರುವ ಖಾತೆಗಳಲ್ಲಿ ಒಂದಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿದ್ಧ ಆಹಾರವನ್ನು ವಿತರಿಲಾಗುತ್ತಿದೆ ಎಂದು ವಿವರಿಸಿದರು.

ವಿಜಯಪುರ ಜಿಲ್ಲೆಯಲ್ಲಿ ವಿಪರೀತ ಕಡಿಮೆ ತೂಕ ಹೊಂದಿರುವ 3820 ಮಕ್ಕಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ 202 ಮಕ್ಕಳು ಸೇರಿದಂತೆ ಗಡಿಭಾಗದ ಮಕ್ಕಳಿಗೆ 30 ಪ್ಯಾಕ್‌ಗಳ 4022 ಮಕ್ಕಳಿಗೆ 1.42 ಲಕ್ಷ ಸ್ಯಾಚೆಟ್‌ಗಳನ್ನು ಮನೆಮನೆಗೆ ತೆರಳಿ ವಿತರಿಸುವ ಕಾರ್ಯ ಆರಂಭಗೊಂಡಿದೆ. 30 ದಿನಗಳ ಕಾಲ ಸೇವನೆಯ ನಂತರ ಮಕ್ಕಳಲ್ಲಿ ಪೌಷ್ಟಿಕತೆ ವೃದ್ಧಿಯಾದ ಬಗ್ಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ವರದಿ ಪಡೆಯಲಾಗುತ್ತದೆ. ಪೌಷ್ಟಿಕತೆ ವೃದ್ಧಿಯಾಗಿದ್ದುಮ ಕಂಡುಬಂದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಸ್ತರಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 30 ಸ್ಯಾಚೆಟ್‌ಗಳ ಒಂದು ಕಿಟ್‌ ನೀಡಲಾಗುತ್ತಿದ್ದು, 1 ಸ್ಯಾಚೆಟ್‌ ಪ್ಯಾಕ್‌ ತೆರೆದ ನಂತರ 24 ಗಂಟೆಯೊಳಗೆ ಬಳಕೆ ಮಾಡಬೇಕು. ಸಿಹಿ ಪದಾರ್ಥಗಳಿಂದ ಕೂಡಿರುವ ಈ ಪೌಷ್ಟಿಕ ಆಹಾರವನ್ನು ಸೇವಿಸುವಲ್ಲಿ ಮಕ್ಕಳು ಕೂಡ ಆಸಕ್ತಿ ತೋರಲಿದ್ದು, ಇದರಿಂದ ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿಸುವ ವಿಶ್ವಾಸವಿದೆ ಎಂದರು. ಕೋವಿಡ್‌-19 ಸಂದರ್ಭ ಇರುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿದೆ. ಅಂಗನವಾಡಿಯಲ್ಲಿ ದಾಖಲಾತಿ ಪಡೆದಿರುವ ಮಕ್ಕಳಿಗೆ ಅಂಗನವಾಡಿ ಸಹಾಯಕಿಯರನ್ನು ಬಳಸಿಕೊಂಡು ಮನೆಮನೆಗೆ ತೆರಳಿ ರೇಷನ್‌ ನೀಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಉತ್ತಮ ಪ್ಯಾಕೆಜ್‌ ಘೋಷಣೆ ಆಗಿದ್ದು, ಜನರಿಗೆ ಯಾವುದೇ ತೊಂದರೆ ಆಗದಂತೆ ಉತ್ತಮ ಕಾರ್ಯ ನಿರ್ವಹಿಸುವುದು ನಮ್ಮ ಜವಾಬ್ದಾರಿ ಎಂದರು.

ಕೋವಿಡ್‌-19 ಸಾಂಕ್ರಾಮಿಕ ರೋಗಕ್ಕೆ ಭಯಪಡದೆ ಕೋವಿಡ್ ಜತೆಗೆ ಬದುಕುವುದನ್ನು ಕಲಿಯಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್, ಸ್ಯಾನಿಟೈಜರ್‌ ಹಾಗೂ ಭಾರತೀಯ ಆಹಾರ ಪದ§ತಿಯನ್ನು ಬಳಕೆ ಮಾಡಿಕೊಂಡು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ಕೋವಿಡ್‌-19 ನಂತಹ ಮಹಾಮಾರಿಯನ್ನು ನಾಶಮಾಡಲು ಸಾಧ್ಯ ಎಂದು ಹೇಳಿದರು.

Advertisement

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ, ಎಸ್ಪಿ ಅನುಪಮ್‌ ಅಗರವಾಲ್‌, ಜಿಪಂ ಸಿಇಒ ಗೋವಿಂದ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್‌.ಆರ್‌.ಆಲಗೂರ, ಆಗ್ರೋ ಕಾಪ್‌ ಸಂಸ್ಥೆಯ ಬಿ.ಸಿದ್ದಾರ್ಥ, ಉದ್ಯಮಿ ಸಂದೇಶ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಸುರಪುರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next