ಮುದ್ದೇಬಿಹಾಳ: ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣ ವಿಸ್ತರಣೆಗೆ ದಶಕಗಳ ಹಿಂದೆ ಭೂಸ್ವಾಧೀನಪಡಿಸಿಕೊಂಡಿದ್ದ 22.29 ಎಕರೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಮೀನು ಮಾಲಿಕರ ಪೈಕಿ ಒಬ್ಬನಾಗಿರುವ ಶ್ರೀಶೈಲ ವಾಲಿಕಾರ ಎಪಿಎಂಸಿ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಮತ್ತು ಪೊಲೀಸರ ಎದುರೆ ಕೀಟನಾಶಕ ಸೇವಿಸಿದ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.
ಎಎಸೈ ಮತ್ತು ಪೊಲೀಸರ ಸಕಾಲಿಕ ಪ್ರಯತ್ನದಿಂದ ಪೂರ್ತಿ ಬಾಟಲಿ ವಿಷ ಹೊಟ್ಟೆಯೊಳಗೆ ಹೋಗುವುದು ತಪ್ಪಿ ಅಲ್ಪ ಪ್ರಮಾಣದ ವಿಷ ಒಳಗೆ ಹೋಗಿದೆ. ತಕ್ಷಣ ಪೊಲೀಸರೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಆತನನ್ನು ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.
ಇದನ್ನೂ ಓದಿ:ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರುತ್ತೇನೆ : ಎಂಎಲ್ ಸಿ ಸಂದೇಶ್ ನಾಗರಾಜ್
ಈ ಮಧ್ಯೆ ವಿಷದ ಬಾಟಲು ಕಸಿದುಕೊಳ್ಳಲು ಮುಂದಾಗಿದ್ದ ಎಎಸೈ ಕೆ.ಎಸ್.ಅಸ್ಕಿ ಅವರ ಎಡಗೈಗೆ ಶ್ರೀಶೈಲನು ಬಲವಾಗಿ ಉಗುರಿನಿಂದ ಚೂರಿದ್ದರಿಂದ ಅವರ ಕೈ ಮೇಲೆ ಸಣ್ಣ ಗಾಯವಾಗಿದೆ.
ಏನಿದು ವಿವಾದ: ದಶಕಗಳ ಹಿಂದೆ ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಹೆಚ್ವಿನ ಪರಿಹಾರ ಕೋರಿ ಜಮೀನಿನ ಮೂಲ ಮಾಲಿಕರ ವಾರಸುದಾರರು ಕೋರ್ಟ್ ಮೆಟ್ಟಿಲೇರಿದ್ದರು. ಹಲವು ವರ್ಷ ವಿಚಾರಣೆ ನಡೆದು ಕೇಸ್ ವಜಾಗೊಂಡಿತ್ತು. ಆದರೂ ಎಪಿಎಂಸಿಯವರು ಮತ್ತು ಜಮಿನು ವಾರಸುದಾರರು ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಿಕೊಳ್ಳುವಂತೆ ಕೋರ್ಟ್ ಸಲಹೆ ನೀಡಿತ್ತು. ಈ ಮದ್ಯೆ ಎಪಿಎಂಸಿಯವರು ಪೊಲೀಸ್ ಬಲ ಬಳಸಿ ವಿವಾದಿತ ಜಮೀನಿನಲ್ಲಿ ಸ್ವಚ್ಚತಾ ಕಾರ್ಯ ನಡೆಸಲು ಮುಂದಾಗಿತ್ತು. ಇದನ್ನು ವಿರೋಧಿಸುವ ಭರದಲ್ಲಿ ಶ್ರೀಶೈಲ ಕೀಟನಾಶಕ ಸೇವಿಸಿದ್ದ.