ವಿಜಯಪುರ: ಹೊಸ ವರ್ಷದಲ್ಲಿ ಮೊದಲ ಬಾರಿಗೆ ಗುರುವಾರ ರಾತ್ರಿ ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿದೆ. ಜಿಲ್ಲೆಯ ಮನಗೂಳಿ ಪರಿಸರದಲ್ಲಿ 2.6 ತೀವ್ರತೆ ಹೊಂದಿದ್ದ ಭೂಕಂಪನ ಸಂಭವಿಸಿದರೂ ಯಾವುದೇ ಅಪಾಯ ಸಂಭವಿಸಿಲ್ಲ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ಯರನಾಳ ಗ್ರಾ.ಪಂ. ಪರಿಸರದ ಹತ್ತರಕಿಹಾಳ, ನಂದಿಹಾಳ, ವಿಜಯಪುರ ಭಾಗದ ವ್ಯಾಪ್ತಿಯಲ್ಲಿ ಭೂಮಿಯ 2 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ.
ಗುರುವಾರ ರಾತ್ರಿ 8-40 ನಿಮಿಷ 20 ಸೆಕೆಂಡ್ ಅವಧಿಯಲ್ಲಿ 2.6 ತೀವ್ರತೆ ಹೊಂದಿದ್ದ ಭೂಕಂಪ ಸಂಭವಿಸಿದೆ. ಭೂಮಿ ನಡುವ ಅನುಭವ ಆಗುತ್ತಲೇ ಮನೆಗಳ ಗೋಡೆಗಳಿಗೆ ಹಾಕಿದ್ದ ಪಾತ್ರೆಗಳು ಸೇರಿದಂತೆ ಇತರೆ ವಸ್ತುಗಳು ಅದುರಿ ಸದ್ದು ಮಾಡಿವೆ. ಇದರಿಂದಾಗಿ ಮನೆಗಳಲ್ಲಿ ಟಿ.ವಿ. ನೋಡುತ್ತಿದ್ದ ಊಟ ಮಾಡುತ್ತಿದ್ದ, ವಿಶ್ರಾಂತಿಯಲ್ಲಿದ್ದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ ಲಘು ಭೂಕಂಪನ ಆಗಿರುವುದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ದೃಢೀಕರಿಸಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಪಾಯಕಾರಿ ಅಲ್ಲದ ಲಘು ಭೂಕಂಪನ ಸಂಭವಿಸುತ್ತಲೇ ಇದೆ. ತಜ್ಞರೂ ಅಧ್ಯಯನ ನಡೆಸಿದ್ದು, ನಿರ್ಭಯವಾಗಿರಿ ಎಂದು ಹೇಳಿದ್ದಾರೆ. ಆದರೂ ಪದೇ ಪದೇ ಸಂಬವಿಸುತ್ತಿರುವ ಭೂಕಂಪನ ಆತಂಕದಿಂದ ಜನರು ಭಯಭೀತರಾಗಿದ್ದಾರೆ.