ವಿಜಯಪುರ: ಒಂದು ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಣ ಮಾಡಿ 24 ಗಂಟೆಯೊಳಗೆ ತಾನೇ ಮರಳಿ ತಂದು ಬಿಟ್ಟಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ರವಿವಾರ ನಡೆದಿದೆ. ಇದರೊಂದಿಗೆ ಸಂದೀಪ ಎಂಬ ಕಂದಮ್ಮನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.
ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ಆರೋಪಿ 38 ವರ್ಷದ ರವಿ ಛಲವಾದಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳು ಹಾಗೂ ತಾಯಿ ಪದ್ಮಾ ಪವಾರ ಅವರೊಂದಿಗೆ ವಿಜಯಪುರದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ, ಪದ್ಮಾ ಪವಾರ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಮೂರು ದಿನಗಳ ಹಿಂದೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಉಪಚಾರಕ್ಕಾಗಿ ರಾಮೇಶ್ವರಿ ಸಹ ತನ್ನ ಇಬ್ಬರು ಮಕ್ಕಳು ಸಮೇತ ಆಸ್ಪತ್ರೆಯಲ್ಲಿದ್ದರು.
ಶನಿವಾರ ಬೆಳಗ್ಗೆ 11ರ ಸುಮಾರಿಗೆ ತಾಯಿ ಪದ್ಮಾಳ ಕಫದ ಪರೀಕ್ಷೆಗಾಗಿ ರಾಮೇಶ್ವರಿ ಮಗು ಸಂದೀಪನನ್ನು ತಾಯಿ ಬಳಿ ಬಿಟ್ಟು ಹೋಗಿದ್ದರು. ಈ ವೇಳೆ, ಸಂದೀಪ ಅಳಲಿಕ್ಕೆ ಶುರು ಮಾಡಿದಾಗ ಅಪರಿಚಿತನಾದ ರವಿ ಛಲವಾದಿ ಮಗುವನ್ನು ಎತ್ತಿಕೊಂಡು ಆಟವಾಡಿಸಿದ್ದಾನೆ. ಬಳಿಕ ಹೊರಗೆ ತೆಗೆದುಕೊಂಡು ಬಂದು ಅಲ್ಲಿಂದ ಮಗುವಿನ ಸಮೇತವಾಗಿ ಕಾಲ್ಕಿತ್ತಿದ್ದ. ರಾಮೇಶ್ವರಿ ಮರಳಿ ಬಂದು ನೋಡಿದಾಗ ಕಂದಮ್ಮ ಕಾಣಿಸಿಲ್ಲ. ಹೀಗಾಗಿ ವಾರ್ಡ್ನಲ್ಲಿ ಹುಡುಕಾಟ ನಡೆಸಿ, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಪೊಲೀಸ್ ಠಾಣೆ ಹಾಗೂ ವೈದ್ಯರ ಗಮನಕ್ಕೆ ತಂದಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಈ ಮಾಹಿತಿ ಅರಿತ ಪೊಲೀಸರು ಜಿಲ್ಲಾಸ್ಪತ್ರೆ ಆವರಣ ಮತ್ತು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದಾರೆ. ಆಗ ವ್ಯಕ್ತಿಯೊಬ್ಬ ಮಗು ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದ ಆರೋಪಿ ಒಂದು ಕೈಯಲ್ಲಿ ಚೀಲ, ಮತ್ತೂಂದು ಕೈಯಲ್ಲಿ ಮಗು ಹೊತ್ತುಕೊಂಡು ಹೋಗುವ ದೃಶ್ಯ ಕಂಡು ಬಂದಿದೆ. ಈ ದೃಶ್ಯಾವಳಿ ಆಧರಿಸಿ ಮಗು ಪತ್ತೆಗಾಗಿ ಶನಿವಾರದಿಂದಲೇ ಗಾಂಧಿ ಚೌಕ್ ಠಾಣೆಯ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಇತ್ತ, ಮಗು ಕಾಣೆಯಾಗಿದ್ದರಿಂದ ತಾಯಿ ರಾಮೇಶ್ವರಿ ಕಂಗಾಲಾಗಿ ಎರಡು ದಿನಗಳಿಂದ ಕಣ್ಣೀರಿಡುತ್ತಿದ್ದರು. ಆದರೆ, ರವಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಗುವನ್ನು ಆರೋಪಿ ರವಿ ಛಲವಾದಿ ತಾನೇ ಆಸ್ಪತ್ರೆಗೆ ಮರಳಿ ಕರೆ ತಂದಿದ್ದಾನೆ.
ಆಸ್ಪತ್ರೆಯ ವೈದ್ಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಮಗುವನ್ನು ತಾಯಿಗೆ ಒಪ್ಪಿಸಲಾಗಿದೆ. ಮಗು ಮರಳಿ ತನ್ನ ಮಡಿಲು ಸೇರಿರುವುದರಿಂದ ಹೆತ್ತ ಅಮ್ಮ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿನ ಅಪಹರಣದಂತಹ ಘಟನೆ ನಡೆದಿರುವುದು ರೋಗಿಗಳು ಮತ್ತು ಅವರ ಸಂಬಂ ಧಿಕರಲ್ಲಿ ಗಾಬರಿ ಪಡುವಂತೆ ಮಾಡಿದೆ. ಜತೆಗೆ ಭದ್ರತೆ ವ್ಯವಸ್ಥೆ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ.
ಮಗುವಿಗೆ ಹಾಲು ಕುಡಿಸಿ, ಬಿಸ್ಕಟ್ ತಿನ್ನಿಸಿದ್ದ ಆರೋಪಿ
ಮಗು ಅಪಹರಣದ ಪ್ರಕರಣದ ಆರೋಪಿ ರವಿ ಛಲವಾದಿ ತಾನು ಬೆನ್ನು ನೋವಿನಿಂದಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಬೇಕು ಎಂದು ಬಂದಿದ್ದ. ಆದರೆ, ಆಧಾರ್ ಕಾರ್ಡ್ ಇದರ ಕಾರಣಕ್ಕೆ ಸಿಬ್ಬಂದಿ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ 2 ದಿನದಿಂದ ಆಸ್ಪತ್ರೆ ಆವರಣದಲ್ಲೇ ಇದ್ದ. ಈ ವೇಳೆ, ಶನಿವಾರ ವಾರ್ಡ್ ನಲ್ಲಿ ಮಗು ತನ್ನ ಅಜ್ಜಿ ಬಳಿ ಇತ್ತು. ಆಗ ಮಗು ಆಳುವುದು ಕೇಳಿ ಆರೋಪಿ ಬಂದಿದ್ದಾನೆ. ಅಲ್ಲದೇ, ಎತ್ತಿಕೊಂಡು ಹೊರಗಡೆ ಬಂದು ಮಗುವಿಗೆ ಹಾಲು ಕುಡಿಸಿ, ಬಿಸ್ಕಟ್ ತಿನ್ನಿಸಿದ್ದಾನೆ. ಜತೆಗೆ ಅಜ್ಜಿ ಬಳಿ ಯಾರೂ ಇರದೇ ಕಾರಣಕ್ಕೆ ಅಲ್ಲಿಯೇ ಎರಡ್ಮೂರು ಗಂಟೆ ಕಳೆದಿದ್ದ. ಇಷ್ಟೇ ಅಲ್ಲ, ಕಲಬುರಗಿಯಲ್ಲಿ ಸಂಬಂಧಿಕರು ನಿಧನ ಹೊಂದಿದ ವಿಷಯ ತಿಳಿದು ಮಗುವನ್ನು ಅಲ್ಲಿಗೂ ಕರೆದೊಯ್ದಿರುವುದಾಗಿ ಸದ್ಯ ಆರೋಪಿ ಹೇಳಿಕೊಂಡಿದ್ದಾನೆ. ಹೀಗಾಗಿ ಆರೋಪಿಯ ಪೂರ್ವಪರ ಪರಿಶೀಲನೆ ಮತ್ತು ನಿಖರ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ