ವಿಜಯಪುರ: ಮುಳವಾಡ ಏತ ನೀರಾವರಿ ಕಾಲುವೆಗೆ ನೀರು ಹರಿಸಿ ಕೆರೆ ಹಾಗೂ ಬಾಂದಾರಗಳನ್ನು ತುಂಬಿಸಬೇಕಿದೆ. ಕೂಡಗಿ ಬಳಿ ಹಾಯ್ದು ಹೋಗಿರುವ ಕಾಲುವೆ ಮಾರ್ಗದಲ್ಲಿ ರೈಲ್ವೆ ಸೇತುವೆ ಕೆಳಗೆ ಬಾಕ್ಸ್ ಪುಸ್ಸಿಂಗ್ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು ಸಮಸ್ಯೆ ಆಗುತ್ತಿದೆ. ಕೂಡಗಿ ಬಳಿ ಮಣ್ಣಿನ ರಾಶಿ ತೆಗೆಯಯವಲ್ಲಿ ರೈಲ್ವೆ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ಜಿಲ್ಲೆ ನೀರಾವರಿ ಅನುಷ್ಠಾನಕ್ಕೆ ತೊಂದರೆ ಉಂಟಾಗುತ್ತಿದೆ. ತಕ್ಷಣ ರೈಲ್ವೆ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಬರುವ ದಿನಗಳಲ್ಲಿ ರೈಲು ತಡೆ ಹೋರಾಟ ಹಮ್ಮಿಕೊಳ್ಳುವುದಾಗಿ ರೈತರು ಎಚ್ಚರಿಸಿದ್ದಾರೆ.
ನಗರದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಡಾ|ಔದ್ರಾಮ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈಲ್ವೆ ಇಲಾಖೆ ಅನಗತ್ಯ ವಿಳಂಬದ ಮೂಲಕ ನಾಲೆಗೆ ನೀರು ಹರಿಸಲು ಸಮಸ್ಯೆ ಆಗುತ್ತಿದೆ. ಕೂಡಲೇ ರೈಲ್ವೆ ಇಲಾಖೆ ರೈತರ ನೀರಾವರಿಗಾಗಿ ರೈಲ್ವೆ ಸೇತುವೆ ಕಾಮಗಾರಿ ತ್ವರಿತಗೊಳಿಸುವ ಜೊತೆಗೆ ನಾಲೆಗೆ ನೀರು ಹರಿಸಲು ತೊಡಕಾಗಿರುವ ಮಣ್ಣಿನ ರಾಶಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಕೂಡಗಿ ರೈಲ್ವೆ ಬ್ರಿಜ್ಡ್ ಬಳಿ ಬಾಕ್ಸ್ ಪುಸ್ಸಿಂಗ್ ಕಾಮಗಾರಿ ಸ್ಥಳದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಿ ರೈಲು ತಡೆ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಕೂಡಗಿ ಬಳಿ ಮುಳವಾಡ ಏತ ನೀರಾವರಿ ಕಾಲುವೆಯಲ್ಲಿ ರೈಲ್ವೆ ಸೇತುವೆ ಕೆಳಗೆ ಬಾಕ್ಸ್ ಪುಸ್ಸಿಂಗ್ ಕಾಮಗಾರಿ ನಡೆಯುತ್ತಿದೆ. ಮಂದಗತಿಯಲ್ಲಿ ಬಾಕ್ಸ್ ಪುಸ್ಸಿಂಗ್ ನಡೆಯುತ್ತಿದೆ. ಸದರಿ ಕಾಮಗಾರಿ ಸ್ಥಳದಲ್ಲಿ ಕಾಲುವೆಗೆ ನೀರು ಹರಿಸಲಕು ತೊಡಕಾಗಿರುವ ಮಳೆ ಮಣ್ಣಿನ ರಾಶಿಯನ್ನು ಹೊರ ಹಾಕುವಲ್ಲಿ ವಿಳಂಬ ಮಾಡಲಾಗುತ್ತಿದೆ. ಇದರಿಂದಾಗಿ ಬೇಸಿಗೆ ನಿಗ್ರಹಕ್ಕಾಗಿ ಮಾರ್ಚ್ ತಿಂಗಳಲ್ಲಿ ಕಾಲುವೆಗೆ ನೀರು ಹರಿಸುವ ಯೋಜನೆ ಕೈಗೂಡುವುದು ಅನುಮಾನವಾಗಿದೆ. ವಿಳಂಬವಾದಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ನೀರಿನ ಆಹಾಕಾರ ಉಂಟಾಗಲಿದೆ ಎಂದು ಆಕ್ರೋಶ ಹೊರ ಹಾಕಿದರು.
ಮುಳವಾಡ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ ಕಾಲವೆಗಳಿಗೆ ನೀರು ಹರಿಸಿ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ, ಕುಲಬೆಂಚಿ, ವಡವಡಗಿ, ನಾಗರಾಳ ಹುಲಿ, ಸೋಮನಾಳ, ತಳೇವಾಡ, ಮನಗೂಳಿ, ಮಸೂತಿ, ಗ್ರಾಮಗಳ ವ್ಯಾಪ್ತಿಗೆ ಬರುವ ಹಾಗೂ ಸಿಂದಗಿ ತಾಲೂಕಿನ ಬಮ್ಮನಜೋಗಿ, ಕನ್ನೋಳ್ಳಿ, ಬೋರಗಿ, ಬ್ಯಾಕೋಡ, ಕೊಗಟನೂರು, ಇಬ್ರಾಹಿಂಪುರ, ಹುರದಾಳ ಗ್ರಾಮಗಳ ವ್ಯಾಪ್ತಿಗೆ ಬರುವ ಕೆರೆಗಳಿಗೆ ಹಾಗೂ ಬಾಂದಾರಗಳಿಗೆ ಕೋರವಾರ ಶಾಖಾ ಕಾಲುವೆ ಮುಖಾಂತರ ನೀರು ಹರಿಸಿ ಕರೆ ಬಾಂಬಾರ ತುಂಬಿಸಬೇಕಿದೆ. ಕುಂಟು ನೆಪಗಳನ್ನು ಹೇಳದೇ ಮೂರ್ನಾಲ್ಕು ದಿನಗಳಲ್ಲಿ ನಾಲೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ರೈಲು ತಡೆ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.
ಸದಾಶಿವ ಬರಟಗಿ, ಸಿದ್ದರಾಮ ಅಂಗಡಗೇರಿ, ರೇವಣೆಪ್ಪ ಕಡಗೋಲ, ಗಂಗಯ್ಯ ಚಿಕ್ಕಮಠ, ಅಣ್ಣುಗೌಡ ಪಾಟೀಲ, ವಿಠ್ಠಲ ಬಿರಾದಾರ, ಕಾಸಪ್ಪ ಬಡಿಗೇರ, ರವಿ ಕೊಲ್ಲೂರ, ದೇವೇಂದ್ರ ಕೊಡೇಕಲ, ಸುರೇಖಾ ರಜಪೂತ, ರಾಮಣ್ಣ ಶಿರಮಗೋಳ, ಖಾಜೇಸಾಬ ಕೋಲಾರ, ಮಳಸಿದ್ದ ನಾಯ್ಕೋಡಿ, ಗಂಗಯ್ಯ ಚಿಕ್ಕಮಠ, ಮಹಮ್ಮದ ಅಲಿ ಕೊಲಾರ, ಭೂತಾಳಿ ಪೂಜೇರಿ, ರಮೇಶ ತೋಟದ, ಜಿ.ಎಸ್. ಇಂಗಳಗಿ, ಸಂಗಮೇಶ ಬಾಗಿ, ಮಳಿಸಿದ್ದ ನಾಯ್ಕೋಡಿ, ನಾಗಪ್ಪ ಹಡಪದ, ಮೈಬೂಸಾಬ ಮುಲ್ಲಾ, ಬಸವರಾಜ ಅಗಸರ, ಕಾಸಪ್ಪ ಬಡಿಗೇರ, ಸಿದ್ದಪ್ಪ ಕೊರಬು, ಲಾಲಸಾಬ ಹಳ್ಳೂರ, ಈರಣ್ಣ ಮಠಪತಿ, ಕೃಷ್ಣಪ್ಪ ಬಮ್ಮರಡ್ಡಿ, ಧರೆಪ್ಪ ಅವಟಿ, ಚಂದ್ರಾಮ ತೆಗ್ಗಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.