Advertisement

Vijayapura JDS ಅಭ್ಯರ್ಥಿ ನಿವೃತ್ತಿ; ಕೈಗೆ ಬೆಂಬಲ!: ದಳಪತಿಗಳಿಗೆ ದಂಗು

07:06 PM Apr 30, 2023 | Team Udayavani |

ವಿಜಯಪುರ : ವಿಜಯಪುರ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂದೇನವಾಜ್ ಮಹಾಬರಿ ಏಕಾಏಕಿ ನಿವೃತ್ತಿ ಪ್ರಕಟಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಘೋಷಿಸಿ ದಳಪತಿಗಳಿಗೆ ದಂಗು ಬಡಿಸಿದ್ದಾರೆ.

Advertisement

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಕಣದಿಂದ ನಿವೃತ್ತಿ ಹೊಂದಿದ್ದಾಗಿ ಜೆಡಿಎಸ್ ಅಭ್ಯರ್ಥಿ ಬಂದೇನವಾಜ್ ಮಹಾಬರಿ ಘೋಷಿಸಿದರು. ಅಲ್ಲದೇ ನಗರ ಕ್ಷೇತ್ರದಲ್ಲಿ ಜೆಡಿಎಸ್ ಚುನಾವಣೆ ಎದುರಿಸುವಷ್ಟು ಸಮರ್ಥವಾಗಿ ಸಂಘಟನೆ ಇಲ್ಲ. ಜೆಡಿಎಸ್ ಪಕ್ಷದ ಪರವಾಗಿ ಮತಗಟ್ಟೆ ಹಂತದಲ್ಲಿ ಕೆಲಸ ಮಾಡುವ ಕಾರ್ಯಕರ್ತರೇ ಇಲ್ಲವಾಗಿದೆ. ಇಂಥ ದುಸ್ಥಿತಿಯಲ್ಲಿ ಸ್ಪರ್ಧೆಯಲ್ಲಿ ಮುಂದುವರೆಯುವುದು ಅಸಾಧ್ಯ ಎನಿಸಿತು ಎಂದು ಸಮಜಾಯಿಸಿ ನೀಡಿದ್ದಾರೆ.

ನಾಮಪತ್ರ ಹಿಂಪಡೆಯುವ ದಿನ ಮುಗಿದ ಬಳಿಕ 3-4 ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಿದಾಗ ವಾಸ್ತವ ಸ್ಥಿತಿ ಅರಿವಿಗೆ ಬಂದಿದೆ. ಜೆಡಿಎಸ್ ಪಕ್ಷಕ್ಕೆ ವಿಜಯಪುರ ನಗರ ಕ್ಷೇತ್ರದಲ್ಲಿ ಅಸ್ತಿತ್ವವೇ ಕಂಡು ಬರಲಿಲ್ಲ ಎಂದು ತಮ್ಮ ನಿವೃತ್ತಿಗೆ ಕಾರಣ ನೀಡಿದರು.

ಹೀಗಾಗಿ ಸ್ಪರ್ಧೆ ಮಾಡಿಯೂ ಹೀನಾ ಸೋಲು ಅನುಭವಿಸುವ ಬದಲು ಸ್ಪರ್ಧೆಯಿಂದ ನಿವೃತ್ತಿ ಘೋಷಿಸುದು ಸೂಕ್ತ ಎಂಬ ಕಾರಣಕ್ಕೆ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಹಣಾಹಣಿಯಿದ್ದು ನಾನು ಕನದಲ್ಲಿದ್ದುಕೊಂಡು ಹೀನಾಯವಾಗಿ ಸೋಲುವುದಕ್ಕಿಂತ ನಿವೃತ್ತಿಯಾಗುವುದೇ ಒಳಿತು ಎಂದು ಭಾವಿಸಿ ಕಣದಿಂದ ಹಿಂದೆ ಸರಿದಿದ್ದೇನೆ ಎಂದು ಮಾಹಿತಿ ನೀಡಿದರು.

Advertisement

40 ವರ್ಷಗಳಿಂದ ಜನತಾ ಪರಿವಾರದ ಪಕ್ಷಗಳಲ್ಲೇ ಇದ್ದು, 2008ರಲ್ಲಿ ಸ್ಪರ್ಧಿಸಿ ಕಡಿಮೆ ಮತಗಳಿಂದ ಸೋತಿದ್ದೇನೆ. ಆದರೆ ಬಸನಗೌಡ ಪಾಟೀಲ್ ಯತ್ನಾಳ ಅವರು ಜೆಡಿಎಸ್ ಸೇರಿದ ಮೇಲೆ ನಾನು ಹೊರಬಂದಿದ್ದೇನೆ. ಅವರೇ ನಮ್ಮ ಜೆಡಿಎಸ್ ಪಕ್ಷವನ್ನು ಹಾಳು ಮಾಡಿದವರು ಎಂದು ಶಾಸಕ ಯತ್ನಾಳ್ ವಿರುದ್ಧ ಮಹಾಬರಿ ವಾಗ್ದಾಳಿ ನಡೆಸಿದರು.

ನಾನು ಯಾರೂ ಒತ್ತಡ ಹೇರಿಲ್ಲ, ಯಾವ ಒತ್ತಡಕ್ಕೆ ಮಣಿದು ನಿವೃತ್ತಿ ಘೋಷಿಸಿಲ್ಲ. ನನ್ನ ನಿರ್ಧಾರದಿಂದ ಪಕ್ಷಕ್ಕೆ, ವರಿಷ್ಠರಿಗೆ ಮುಜುಗರ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ನನ್ನ ಈ ದಿಢೀರ ನಿರ್ಧಾರದ ಕುರಿತು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಸುತ್ತೇನೆ ಎಂದರು.

ಸಂಘಟನೆಯೇ ಇಲ್ಲದ ಮೇಲೆ ಸ್ಪರ್ಧೆಯಲ್ಲಿ ಮುಂದುವರೆಯುವುದು ಅರ್ಥಹೀನ. ಹೀಗಾಗಿ ನಿವೃತ್ತಿ ಘೋಷಿಸಿದ್ದು, ಕೋಮುವಾದಿ ಪಕ್ಷವನ್ನು ಬೆಂಬಲಿಸುವ ಬದಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next