ವಿಜಯಪುರ: ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿಯ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರಾ ಗ್ರಾಮದ ಕಲ್ಲಪ್ಪ ಪಾಟೀಲ ಎಂದು ಗುರುತಿಸಲಾಗಿದೆ.
ವಿಜಯಪುರ ಜಿಲ್ಲೆ ಕೊಲ್ಹಾರ ಬಳಿಯ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರೋ ಮೂರು ಕಿಲೋ ಮೀಟರ್ ಉದ್ದದ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಅಮೀನಸಾಬ್ ಜಾಲಗಾರ ನೇತೃತ್ವದಲ್ಲಿ ಸ್ಥಳೀಯ ಯುವಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾನು ಸೇತುವೆ ಮೇಲಿಂದ ಬಿದ್ದು ಸತ್ತರೆ ನನ್ನ ಶವ ಸಿಗುತ್ತಾ ಎಂದು ಕಲ್ಲಪ್ಪ ಕೇಳಿ ನದಿಗೆ ಹಾರಲು ಮುಂದಾಗಿದ್ದ. ಇದರಿಂದ ಕೂಡಲೇ ಎಚ್ಚೆತ್ತ ಅಮೀನ ಸಾಬ್ ಸ್ಥಳೀಯರ ನೆರವಿನಿಂದ ಕಲ್ಲಪ್ಪನ ಕೈ-ಕಾಲು ಕಟ್ಟಿ ನದಿಗೆ ಹಾರುವುದನ್ನು ತಡೆದು, ಆತ್ಮಹತ್ಯೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೇ ತ್ವರಿತವಾಗಿ ಕೊಲ್ಹಾರ ಪೊಲೀಸರಿಗೆ ಕರೆ ಮಾಡಿ, ಘಟನೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಲ್ಲಪ್ಪನನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.
ಪೊಲೀಸ್ ವಾಹನ ಹತ್ತಿಸುವ ವೇಳೆ ನಾ ಸಾಯಬೇಕು ಬಿಡಿ ಎಂದು ಕಲ್ಲಪ್ಪ ಚೀರಾಡುತ್ತಾ ಕಣ್ಣೀರು ಹಾಕಿದ್ದಾನೆ. ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಕಲ್ಲಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸಮಯ ಪ್ರಜ್ಞೆಯಿಂದ ಕಲ್ಲಪ್ಪನ ಜೀವ ರಕ್ಷಣೆ ಮಾಡಿದ ಅಮೀನ ಸಾಬ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕಲ್ಲಪ್ಪನ ಕುಟುಂಬದವರಿಗೆ ಮಾಹಿತಿ ನೀಡಿರುವ ಕೊಲ್ಹಾರ ಪೊಲೀಸರು, ಕುಟುಂಬದವರು ಆಗಮಿಸಿದ ಬಳಿಕ ಮನೆಗೆ ಕಳಿಸಲು ನಿರ್ಧರಿಸಿದ್ದಾರೆ.