ವಿಜಯಪುರ: ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನೀಡಿದ ಸಹಕಾರದಿಂದಾಗಿ ಬಬಲೇಶ್ವರ ತಾಲೂಕು ಕೇಂದ್ರವಾಗಿ ಘೋಷಿಸಲ್ಪಟ್ಟಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹೊಸ ತಾಲೂಕು ಕೇಂದ್ರಗಳ ರಚನೆ ಪ್ರಸ್ತಾವನೆ ಬಂದಾಗ ಬಬಲೇಶ್ವರ ನೂತನ ತಾಲೂಕು ಕೇಂದ್ರವಾಗಿ ಕಾರ್ಯಾರಂಭ ಮಾಡಲು ಅವಕಾಶ ಸಿಕ್ಕಿತು. ಅಲ್ಲದೇ ಬಬಲೇಶ್ವರ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ಸಹಕಾರವೇ ಪ್ರಮುಖ ಕಾರಣ ಎಂದು ಮಾಜಿ ಸಚಿವ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.
ಬುಧವಾರ ಬಬಲೇಶ್ವರ ಪಟ್ಟಣದಲ್ಲಿ ನೂತನ ತಾಪಂ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 2002ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವಿಶೇಷ ತಹಶೀಲ್ದಾರ್ ಕಚೇರಿ ನಿಯೋಜಿತ ತಾಲೂಕು ಕೇಂದ್ರಗಳಿಗೆ ಕೊಡುಗೆಯಾಗಿ ನೀಡಿತ್ತು. ಆದರೆ ಬಬಲೇಶ್ವರಕ್ಕೆ ಮಾತ್ರ ಆ ಭಾಗ್ಯ ದೊರಕಿರಲಿಲ್ಲ. ಇದರಿಂದ ಡಾ| ಮಹಾದೇವ ಶ್ರೀಗಳ ಅಧ್ಯಕ್ಷತೆಯಲ್ಲಿ, ವಿ.ಎಸ್. ಪಾಟೀಲ ನೇತೃತ್ವದಲ್ಲಿ ಬಬಲೇಶ್ವರ ತಾಲೂಕು ಕೇಂದ್ರ ಹೋರಾಟ ಮಾಡಲಾಗಿತ್ತು. 2003ರಲ್ಲಿ 51 ದಿನಗಳವರೆಗೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಮಾಡಲಾಗಿತ್ತು. ಪರಿಣಾಮ ಅಂದು ನಾನು ನೀಡಿದ್ದ ಪತ್ರಕ್ಕೆ ಅಂದಿನ ಕಂದಾಯ ಸಚಿವ ಎಚ್.ಸಿ. ಶ್ರೀಕಂಠಯ್ಯ ಅವರು ವಿಶೇಷ ತಹಶೀಲ್ದಾರ್ ಕಚೇರಿ ಮಂಜೂರು ಮಾಡಿದ್ದರು. ಇಂಥ ಸುದೀರ್ಘ
ಹೋರಾಟ, ಸತತ ಪ್ರಯತ್ನದಿಂದಾಗಿ ಬಬಲೇಶ್ವರ ತಾಲೂಕು ಕೇಂದ್ರದ ಮಾನ್ಯತೆ ಪಡೆಯುವಂತಾಗಿದೆ ಎಂದು ವಿವರಿಸಿದರು.
ಜಿಲ್ಲೆಯನ್ನು ಬರಮುಕ್ತ ಮಾಡಲು ಕೋಟಿ ವೃಕ್ಷ ಅಭಿಯಾನ ಆರಂಭಿಸಿದ್ದು, ಲಾಲ್‌ಬಾಗ್‌ನಲ್ಲಿ ಬೆಳೆದಿರುವ ಎಲ್ಲ ತರಹದ ಸಸಿಗಳನ್ನು ವಿಜಯಪುರ ನಗರದ ಕರಾಡ ದೊಡ್ಡಿ 35 ಎಕರೆ ಪ್ರದೇಶದಲ್ಲಿ ನೆಟ್ಟು ಪೋಷಿಸಲಾಗಿದೆ. ಲಾಲ್‌ಬಾಗ್ ಎಂದರೆ ಹೂವಿನಿಂದ ಅಲಂಕೃತಗೊಂಡ ಪಾರ್ಕ್ ಮಾದರಿಯಂತೆ ವಿಜಯಪುರದ ಕರಾಡ ದೊಡ್ಡಿಯಲ್ಲಿ ಸಸ್ಯ ಸಂಗಮ ಹೆಸರಿನಲ್ಲಿ ಅಪರೂಪದ ಉದ್ಯಾನವನ ನಿರ್ಮಿಸಲಾಗುತ್ತಿದೆ ಎಂದರು.
ಜಿಪಂ ಸಿಇಒ ಗೋವಿಂದರೆಡ್ಡಿ, ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಬಬಲೇಶ್ವರ ತಾಪಂ ಇಒ ಬಿ.ಆರ್. ಬಿರಾದಾರ, ತಿಕೋಟಾ ತಾಪಂ ಇಒ ಬಿ.ಎಸ್. ರಾಠೊಡ, ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ ಬಬಲೇಶ್ವರ, ನಂದಿ ಸಕ್ಕರೆ ಸಹಕಾರಿ ಕಾರ್ಖಾನೆ ಉಪಾಧ್ಯಕ್ಷ ಎಚ್.ಆರ್. ಬಿರಾದಾರ, ಜಿಪಂ ಸದಸ್ಯ ಕಲ್ಲಪ್ಪಣ್ಣ ಕೊಡಬಾಗಿ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಗ್ರಾಪಂ ಅಧ್ಯಕ್ಷೆ ಬೋರಮ್ಮ ಬೂದಿಹಾಳ, ಉಪಾಧ್ಯಕ್ಷೆ ನಿವೇದಿತಾ ಮರ‍್ಯಾಣಿ ಇದ್ದರು.