ವಿಜಯಪುರ: ರಾಜ್ಯದಲ್ಲಿ ಒಕ್ಕಲಿಗ ಸ್ವಾಮಿಯೊಬ್ಬರು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಡಿ.ಕೆ.ಶಿವಕುಮಾರ್ ಅವರಿಗೆ ಪಟ್ಟ ಕಟ್ಟಬೇಕೆಂಬ ಹೇಳಿಕೆ ಪರ-ವಿರೋಧ ಚರ್ಚೆ ಹುಟ್ಟುಹಾಕಿದ ಬೆನ್ನಲ್ಲೇ ಬಸವನಾಡಿನ ಯುವಕನೊಬ್ಬ ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಬೇಡಿಕೆ ಇರಿಸಿದ್ದಾನೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಸತೀಶ ಲಮಾಣಿ ಎಂಬ ಯುವಕ ಬಸವನಬಾಗೇವಾಡಿ ಪಟ್ಟಣದಲ್ಲಿನ ಮೂಲನಂದೀಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿನ ಶಿವಲಿಂಗದ ಎದುರು ನಿಂತು ತನ್ನನ್ನು ಮುಖ್ಯಮಂತ್ರಿ ಮಾಡಬೇಕೆಂದು ಬೇಡಿಕೆ ಇರಿಸಿದ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.
“ಶಿವಲಿಂಗದ ಆಣೆಗೂ ನಾನು ಹೇಳುವುದು ಸತ್ಯ, ನನ್ನನ್ನು ಮುಖ್ಯಮಂತ್ರಿ ಮಾಡಿದ್ದರೆ ಕಷ್ಟ ಎಂದು ಹೇಳಿರುವ ಸತೀಶ, ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಸಂದರ್ಭದಲ್ಲೂ ನನ್ನನ್ನು ಮುಖ್ಯಮಂತ್ರಿ ಮಾಡಬೇಕೆಂದು ಹೇಳಿದ್ದೆ. ನಿರ್ಲಕ್ಷ್ಯ ಮಾಡಿದ್ದರಿಂದ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿ, ನನ್ನ ಮಾತು ಸತ್ಯವಾಗಿದೆ ಎಂದಿದ್ದಾನೆ.
ಸದ್ಯ ಪೆಟ್ರೋಲ್, ದವಸ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಇಳಿಯಬೇಕಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನನ್ನನ್ನು ಮುಖ್ಯಮಂತ್ರಿ ಮಾಡಬೇಕು. ಇಲ್ಲವಾದಲ್ಲಿ ದೇಶದ ಅಭಿವೃದ್ಧಿ ಅಸಾಧ್ಯ ಎಂದೂ ಹೇಳಿದ್ದಾನೆ.
ಶಿವಲಿಂಗದ ಮೇಲಾಣೆ, ಜೈ ಸೇವಾಲಾಲ್ ಎಂದು ಕೊನೆಯಲ್ಲಿ ಘೋಷಣೆ ಕೂಗಿದ್ದಾನೆ.