ವಿಜಯಪುರ: ಕೋವಿಡ್ ಸೋಂಕು ರೋಗದ ಸಂಕಷ್ಟದ ದಿನಗಳಲ್ಲಿ ಮಾಹಿತಿ-ಸಂವಹನ ತಂತ್ರಜ್ಞಾನ ಶಿಕ್ಷಣ ಪ್ರಸಾರದಲ್ಲಿ ಬಹುದೊಡ್ಡ ವೇದಿಕೆಯಾಗಿ ರೂಪುಗೊಂಡಿದೆ ಎಂದು ಉಪನ್ಯಾಸಕ ಪ್ರೇಮಾನಂದ ದೇಸಾಯಿ ಹೇಳಿದರು.
ಬಿ.ಎಲ್.ಡಿ.ಇ ಬಿ.ಎಂ. ಪಾಟೀಲ್ ನರ್ಸಿಂಗ್ ಕಾಲೇಜಿನಲ್ಲಿ ಐಸಿಟಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಶಿಕ್ಷಣ ಪ್ರಸಾರದಲ್ಲಿ ಮಾಹಿತಿ-ಸಂವಹನ ತಂತ್ರಜ್ಞಾನದ ಪಾತ್ರ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೊರಬರುವುದರಿಂದ ಸಂಕಷ್ಟಕ್ಕೆ ಸಿಲುಕಬಹುದು ಎಂಬ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಕಳುಹಿಸುತ್ತಿಲ್ಲ. ಇದರಿಂದ ಅವರ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದರು.
ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ಮಾಹಿತಿ-ತಂತ್ರಜ್ಞಾನ ಬಳಸಿಕೊಂಡು ಶಿಕ್ಷಣ ನೀಡುವಲ್ಲಿ ಸಹಕಾರಿ ಆಗಿದೆ. ಈ ತಂತ್ರಜ್ಞಾನದ ನೆರವಿನಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ವ್ಯತ್ಯಯವಾಗುತ್ತಿಲ್ಲ. ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ ಪಡೆಯಲು ಮಾಹಿತಿ ತಂತ್ರಜ್ಞಾನ ಅತೀ ಮುಖ್ಯ ತಂತ್ರಜ್ಞಾನವಾಗಿದೆ. ಈ ನಿಟ್ಟಿನಲ್ಲಿ ಪಾಲಕರು ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದು, ಮಕ್ಕಳಿಗೆ ಮಾರ್ಗದರ್ಶಕರಾಗಬೇಕು ಎಂದರು.
ನರ್ಸಿಂಗ್ ಮಹಾವಿದ್ಯಾಲಯ ಪ್ರಾಚಾರ್ಯ ಶೋಲ್ಮೋನ್ ಚೋಪಡೆ ಮಾತನಾಡಿ, ವಿಶ್ವದಲ್ಲಿ ಕಾಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್ ನಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವದು ಭಯ ಹುಟ್ಟಿಸುತ್ತದೆ. ಆದ್ದರಿಂದ ತಂತ್ರಜ್ಞಾನದ ಮೂಲಕ ಶಿಕ್ಷಣ ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದರು.
ಉಪಪ್ರಾಚಾರ್ಯ ಸುಚಿತ್ರಾ ರಾಠಿ ಮಾತನಾಡಿ, ಪ್ರಾಥಮಿಕ ಹಂತದಿಂದ ಉನ್ನತ ಪದವಿಯವರೆಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಅವಶ್ಯಕವಾಗಿದೆ. ಶಿಕ್ಷಕರು ತಮ್ಮ ಬೋಧನೆಯಲ್ಲಿ ಹೊಸತನ ಮತ್ತು ಹೆಚ್ಚು ಉದಾಹರಣೆಗಳನ್ನು ನೀಡಬಹುದಾಗಿದೆ ಎಂದರು.
ಐಕ್ಯೂಎಸಿ ಸಂಯೋಜಕ ಬಷೀರ ಅಹ್ಮದ, ಉಪನ್ಯಾಸಕರಾದ ಗುರುರಾಜ ಗುಗ್ಗರಿ, ಕವಿತಾ, ಎನ್ .ಜಿ. ಪಾಟೀಲ, ಸೌಜನ್ಯ, ಪ್ರವೀಣ, ಜಯಶ್ರೀ, ಸಿದ್ದು ತಡಲಗಿ, ಶ್ವೇತಾ ಹಿಟ್ನಾಳ ಇದ್ದರು.