Advertisement

Vijayapura; ಕೇಂದ್ರದಿಂದ ಸೂಚನೆ ಬಂದಿದೆ, ನಾನೇ ಅಭ್ಯರ್ಥಿ: ರಮೇಶ್ ಜಿಗಜಿಣಗಿ

03:05 PM Feb 26, 2024 | keerthan |

ವಿಜಯಪುರ: ಆರೋಗ್ಯ ಸರಿ ಇಲ್ಲ ಎಂದು ವಿರೋಧಿಗಳು ನನ್ನ ಬಗ್ಗೆ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕೇಂದ್ರದಿಂದ ಸೂಚನೆ ಬಂದಿದ್ದು, ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ನಾನೇ ಅಭ್ಯರ್ಥಿ ಎಂದು ಲೋಕಸಭೆ ಹಾಲಿ ಸದಸ್ಯ ರಮೇಶ ಜಿಗಜಿಣಗಿ ಹೇಳಿದ್ದಾರೆ.

Advertisement

ಸೋಮವಾರ ನಗರದ ರೈಲ್ವೇ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನಗೆ ಬೇಡವಾದವರು ನನಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನನಗೆ ಹಾರ್ಟೇ ಇಲ್ಲ ಎಂದು ನಗಡೆಯಾಡಿದರು.

ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿದ್ದು ಮಾತ್ರವಲ್ಲದೇ, ನೆರೆಯ ಚಿಕ್ಕೋಡಿ ಕ್ಷೇತ್ರದಿಂದಲೂ ಈ ಹಿಂದೆ ಸತತ ಮೂರು ಬಾರಿ ಗೆದ್ದಿದ್ದೆ. ಸ್ವಂತ ಜಿಲ್ಲೆಯಲ್ಲಿ ಗೆಲ್ಲುವುದು ಸುಲಭ ಆದರೆ, ಅನ್ಯ ಜಿಲ್ಲೆಯ ಕ್ಷೇತ್ರಕ್ಕೆ ತೆರಳಿ ನಿರಂತರ ಮೂರು ಬಾರಿ ಗೆಲ್ಲುವುದು ಸುಲಭದ ಕೆಲಸವೇನು ಎಂದು ಪ್ರಶ್ನಿಸಿದರು.

ನಾನು ದಲಿತನಾದರೂ ನನ್ನ ಹಿಂದೆ ದಲಿತರನ್ನು ಇರಿಸಿಕೊಂಡಿಲ್ಲ, ಆದರೆ ದಲಿತರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯ ಕಲ್ಪಿಸಿದ್ದೇನೆ. ನಾನು ಎಲ್ಲ ಜಾತಿ-ಧರ್ಮದವರೊಂದಿಗೆ ಸರ್ವ ಜನಾಂಗದವರೊಂದಿಗೆ ಬೆರೆಯುವ ಮನೋಭಾವದ ರಾಜಕೀಯ ವ್ಯಕ್ತಿ ಎಂದರು.

ಇನ್ನು ಕೆಲವು ಮಾಧ್ಯಮಗಳಲ್ಲಿ ನನ್ನ ಆಸ್ತಿ ಕಳೆದ ಮೂರು ಅವಧಿಯಲ್ಲಿ ನಿರೀಕ್ಷೆ ಮೀರಿ ಹೆಚ್ಚಿದೆ ಎಂದು ಬರೆಯಲಾಗಿದೆ. ಲಕ್ಷದ ಲೆಕ್ಕದಲ್ಲಿದ್ದ ಆಸ್ತಿ 150 ಕೋಟಿ ರೂ. ಹೆಚ್ಚಿದೆ ಎಂದು ವರದಿಯಾಗಿದೆ. ಆದರೆ ಮಾಧ್ಯಮಗಳಲ್ಲಿ ವರದಿ ಆಗಿರುವುದಕ್ಕಿಂತ ನನ್ನ ಆಸ್ತಿ ಹೆಚ್ಚಿದೆ. ಆದರೂ ಮಾಧ್ಯಮದವರು ಕಡಿಮೆ ಆಸ್ತಿ ಇದೆ ಎಂದು ಬರೆದಿದ್ದೀರಿ ಎಂದು ಹಾಸ್ಯ ಮಾಡಿದರು.

Advertisement

ನಾನು ಯಾರ ಬಳಿಯೂ ಲಂಚ ಹೊಡೆದು ಆಸ್ತಿ ಮಾಡಿಲ್ಲ, ನಾನು-ನನ್ನ ಮಕ್ಕಳು ಪ್ರಾಮಾಣಿಕವಾಗಿ ದುಡಿದು ಗಳಿಸಿದ್ದೇವೆ. ನನ್ನ ಜೀವನ ಗಾಂಧೀಜಿ ಅವರಂತೆ ಸಂಪೂರ್ಣ ತೆರೆದ ಪುಸ್ತಕ ಎಂದು ಜಿಗಜಿಣಗಿ, ವಾಸ್ತವವಾಗಿ ನನ್ನ ಆಸ್ತಿ ಹೆಚ್ಚಿಲ್ಲ. ಇರುವ ಆಸ್ತಿಯ ಮೌಲ್ಯ ಪ್ರಸ್ತುತ ದರದಂತೆ ಹೆಚ್ಚಿದೆ ಎಂದರು.

ಬಿಜೆಪಿ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ವಿಜಯಪುರ ಕ್ಷೇತ್ರವನ್ನೂ ಜೆಡಿಎಸ್ ಪಕ್ಷ ಕೇಳುವುದರಲ್ಲಿ ತಪ್ಪೇನಿದೆ. ಪಕ್ಷದ ವರದಿಷ್ಠರು ಬಿಜೆಪಿ ಪಕ್ಷಕ್ಕೆ ವಿಜಯಪುರ ಕ್ಷೇತ್ರವನ್ನು ಉಳಿಸಿಕೊಳ್ಳಲಿದೆ. ಇದರ ಹೊರತಾಗಿ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟರೂ ಸಂತೋಷ ಎಂದರು.

ವಿಜಯಪುರ ಕ್ಷೇತ್ರದಿಂದ ಮೂರು ಬಾರಿ, ನೆರೆಯ ಚಿಕ್ಕೋಡಿ ಕ್ಷೇತ್ರದಿಂದ ಸತತ ಮೂರು ಬಾರಿ ಸೇರಿದಂತೆ ಸತತವಾಗಿ ಆರು ಬಾರಿ ಗೆದ್ದಿದ್ದೇನೆ. ಬೇರೆ ಬೇರೆ ಕ್ಷೇತ್ರದಿಂದ ಬೇರೆ ಬೇರೆ ಪಕ್ಷದಿಂದ ಸತತವಾಗಿ ಗೆಲ್ಲುವುದು ಸುಲಭದ ಮಾತಲ್ಲ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ನನ್ನನ್ನು ಗೆಲ್ಲಿಸಿಕೊಂಡು ಬರಲು ಪ್ರಮುಖ ಕಾರಣ ಎಂದರು.

ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಸಚಿವನಾಗಿ, ಎರಡು ಬಾರಿ ಸಂಸದನಾಗಿ ಮೋದಿ ಅವರ ಕೈಕೆಳಗೆ ಸೇವೆ ಸಲ್ಲಿಸಿರುವುದು ಸಂತೃಪ್ತಿ ನೀಡಿದೆ. ನನ್ನ ಅವಧಿಯಲ್ಲಿ ವಿಜಯಪುರ ಕ್ಷೇತ್ರಕ್ಕೆ ಒಂದು ಲಕ್ಷ ಕೋಟಿ ರೂ. ಅನುದಾನ ತಂದಿದ್ದು, ವಿವಿಧ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹೀಗಾಗಿ ಜನರು ನನಗೆ ನಿರಂತರ ಆಶೀರ್ವದಿಸಿ ಗೆಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next