Advertisement

ವಿಶ್ವ ಪರಂಪರೆ ಪಟ್ಟಿ ಸೇರುತ್ತಾ ಗೋಲಗುಮ್ಮಟ?

12:02 PM Sep 30, 2019 | Naveen |

ಜಿ.ಎಸ್‌. ಕಮತರ
ವಿಜಯಪುರ: ಅಪರೂಪದ ವಾಸ್ತು ವಿನ್ಯಾಸ, ಕಟ್ಟಡದ ವಿಶಿಷ್ಟ ಸಂಯೋಜನೆಗಳಿಂದಾಗಿ ಅವರ್ಣನೀಯ ಐತಿಹಾಸಿಕ ಹಿನ್ನೆಲೆ ಹಲವು ಸ್ಮಾರಕಗಳು ವಿಜಯಪುರ ನಗರದಲ್ಲಿವೆ. ಆದಿಲ್‌ ಶಾಹಿ ಅರಸರ ರಾಜಧಾನಿಯಾಗಿದ್ದ ವಿಜಯಪುರ ಪಾರಂಪರಿಕ ನಗರದ ಸ್ಥಾನ ಪಡೆಯುವ ಅರ್ಹತೆ ಇದ್ದರೂ, ಕನಿಷ್ಠ ಗೋಲಗುಮ್ಮಟ ವಿಶ್ವ ಪರಂಪರೆ ಪಟ್ಟಿಗೆ ಸೇರುವುದು ಯಾವಾಗ ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ.

Advertisement

ವಿಶ್ವ ಪರಂಪರೆ ಪಟ್ಟಿಗೆ ಈಗಾಗಲೇ ರಾಜ್ಯದ ಹಂಪಿ ಪಟ್ಟಣ ಹಾಗೂ ಪಟ್ಟದಕಲ್ಲು ಸ್ಮಾರಕ ಸೇರಿವೆ. ಗೋಲಗುಮ್ಮಟ ಸೇರ್ಪಡೆಗೆ ಅಗತ್ಯವಾದ ಕಾರ್ಯಯೋಜನೆ ರೂಪುಗೊಳ್ಳುತ್ತಿಲ್ಲ. ಯುನೆಸ್ಕೋ ಪ್ರವಾಸಿ ಸಂಭಾವ್ಯ ಪಟ್ಟಿಯಲ್ಲಿ ಪಾರಂಪರಿಕ ಹಿರಿಮೆ ಹೊಂದಿರುವ ಕರ್ನಾಟಕ ರಾಜ್ಯದ ಮೂರು ತಾಣಗಳು ಸೇರಿವೆ.

ಮಧ್ಯ ಯುಗಿನ ಕಾಲದ ದಕ್ಷಿಣ ಭಾರತದ ಸುಲ್ತಾನರ ಅವಶೇಷಗಳೆಂದು ಗುರುತಿಸಿರುವ ಪಟ್ಟಿಯಲ್ಲಿ ಗೋಲಗುಮ್ಮಟ ಸೇರಿದೆ. ಇದರಲ್ಲಿ ನೆರೆಯ ಕಲಬುರಗಿ ನಗರದ ಜಾಮಾ ಮಸೀದ್‌ ಹಾಗೂ ಬೀದರ ಕೋಟೆಗಳ ಹೆಸರೂ ಇವೆ. ಆದರೆ ಯುನೆಸ್ಕೋ ಪ್ರವಾಸಿ ಸಂಭಾವ್ಯ ಪಟ್ಟಿಯಿಂದ ಶಾಶ್ವತವಾಗಿ ಪರಂಪರೆ ಪಟ್ಟಿಗೆ ಸೇರಿಸುವ ಅಗತ್ಯವಿದೆ. ಆಗಲೇ ವಿಶ್ವದಲ್ಲೇ ಧ್ವನಿ ತರಂಗ, ಪ್ರತಿ ಧ್ವನಿ ಹಾಗೂ ಪಿಸುಗುಟ್ಟುವ ಗೋಡೆಗಳಂಥ ವಿಶಿಷ್ಟತೆಯಿಂದ ಜಗತ್ತಿನ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಸಾಧ್ಯವಾಗುತ್ತದೆ. ಆದರೆ ಐತಿಹಾಸಿಕ ಹಾಗೂ ಅಪರೂಪದ ವಾಸ್ತು ವಿನ್ಯಾಸದ ಶೈಲಿ ಗೋಲಗುಮ್ಮಟ ಸ್ಮಾರಕ ಹೊಂದಿರುವ ವೆÂಶಿಷ್ಟéತೆ ಕುರಿತು ಮನವರಿಕೆ ಮಾಡಿಕೊಡುವಲ್ಲಿ ನಮ್ಮ ವ್ಯವಸ್ಥೆ ಹಿಂದೆ ಬಿದ್ದಿದೆ.

ಗೋಲಗುಮ್ಮಟ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಯಾದಲ್ಲಿ ವಿಶ್ವದ ಪ್ರವಾಸಿ ಆಸಕ್ತರು, ಇತಿಹಾಸ-ವಾಸ್ತು ಸಂಶೋಧಕರು ಸೇರಿದಂತೆ ದೇಶ-ವಿದೇಶದ ಪ್ರವಾಸಿಗರು ಗೋಲಗುಮ್ಮಟ ವೀಕ್ಷಣೆಗೆ ಬರಲಿದ್ದಾರೆ. ಇದರಿಂದ ಜಿಲ್ಲೆಯಲ್ಲಿರುವ ಐತಿಹಾಸಿಕ ನೂರಾರು ಸ್ಮಾರಕಗಳ ಅಭಿವೃದ್ಧಿಗೂ ಸಹಕಾರಿ ಆಗಲಿದ್ದು ಸಂರಕ್ಷಣೆಗೂ ರಹದಾರಿ ಆಗಲಿದೆ.

ಯುನೆಸ್ಕೋ ಸೇರ್ಪಡೆಯ ಮಾನದಂಡ: ಮಾನವ ಸೃಜನಶೀಲ ಪ್ರತಿಭೆಯ ಒಂದು ಮೇರು ಕೃತಿಯನ್ನು ಪ್ರತಿನಿಧಿಸಬೇಕು. ಮಾನವನ ಮೌಲ್ಯಗಳ ಒಂದು ಪ್ರಮುಖ ವಿನಿಮಯವನ್ನು, ಸಮಯದ ಅವಧಿಯಲ್ಲಿ ಅಥವಾ ವಿಶ್ವದ ಸಾಂಸ್ಕೃತಿಕ ಪ್ರದೇಶದ ವಿಭಿನ್ನ ಹಿರಿಮೆ ಹೇಳಬೇಕು. ಸಾಂಸ್ಕೃತಿಕ ಸಂಪ್ರದಾಯಕ್ಕೆ, ವಾಸಿಸುತ್ತಿರುವ, ಕಣ್ಮರೆಯಾಗಿರುವ ನಾಗರಿಕತೆಯನು ಸಾರಬೇಕು. ಮಾನವ ಇತಿಹಾಸದಲ್ಲಿ ಮಹತ್ವದ ಹಂತಗಳನ್ನು ವಿವರಿಸುವ ಒಂದು ರೀತಿಯ ಕಟ್ಟಡ, ವಾಸ್ತುಶಿಲ್ಪ ಅಥವಾ ತಾಂತ್ರಿಕ ಸಮೂಹ ಅಥವಾ ಭೂದೃಶ್ಯದ ಅತ್ಯುತ್ತಮ ಉದಾಹರಣೆಯಾಗಿರಬೇಕು. ಈ ಕುರಿತು ವಿಶಿಷ್ಟ ಅಥವಾ ಕನಿಷ್ಠ ಅಸಾಧಾರಣವಾದ ಸಾಕ್ಷ್ಯ ನೀಡುವಂತಿರಬೇಕು.

Advertisement

ಸ್ಮಾರಕಗಳು, ವಾಸ್ತುಶಿಲ್ಪದ ಕೃತಿಗಳು, ಸ್ಮಾರಕ ಶಿಲ್ಪಕಲೆ ಮತ್ತು ಚಿತ್ರಕಲೆಯ ಕೃತಿಗಳು, ಪುರಾತತ್ವ ಶಾಸ್ತ್ರದ ಅಂಶಗಳು ಅಥವಾ ರಚನೆಗಳು, ಶಾಸನಗಳು, ಗುಹೆ ವಾಸಗಳು ಮತ್ತು ವೈಶಿಷ್ಟ್ಯಗಳ ಸಂಯೋಜನೆಗಳು, ಇವು ಇತಿಹಾಸ, ಕಲೆ ಅಥವಾ ವಿಧಾನದ ದೃಷ್ಟಿಕೋನದಿಂದ ಮಹೋನ್ನತ ಸಾರ್ವತ್ರಿಕ ಮೌಲ್ಯ ಹೊಂದಿರಬೇಕು.

ಪ್ರತ್ಯೇಕ ಅಥವಾ ಸಂಕೀರ್ಣ ಕಟ್ಟಡಗಳ ಗುಂಪುಗಳು, ಅವುಗಳ ವಾಸ್ತುಶಿಲ್ಪದ ವಿಶಿಷ್ಟತೆ ವಿಶ್ವ ಪರಂಪರೆ ಪಟ್ಟಿಗೆ ಸೇರಲು ಇರಬೇಕು ಎಂಬ 10 ಮಾನದಂಡಗಳನ್ನು ಯುನೆಸ್ಕೋ ಹಾಕಿಕೊಂಡಿದೆ. ಇಂತ ನಿರ್ದಿಷ್ಟ 10 ಮಾನದಂಡಗಳಲ್ಲಿ ಹಲವು ನಮ್ಮ ಗೋಲಗುಮ್ಮಟಕ್ಕೆ ಇರುವ ಕುರಿತು ಯುನೆಸ್ಕೋ ಸಂಸ್ಥೆಗೆ ಮನವರಿಕೆ ಮಾಡಿಕೊಡಬೇಕು.

ಆದರೆ ಸರ್ಕಾರ ಅಥವಾ ಯಾವುದೇ ಸಂಸ್ಥೆ ಗೋಗರೆಯುವಿಕೆ ಇಲ್ಲದೇ ಯುನೆಸ್ಕೋ ಸ್ಪಯಂ ಪ್ರೇರಿತವಾಗಿ 1986ರಲ್ಲಿ ಹಂಪಿಯನ್ನು ಹಾಗೂ 1987ರಲ್ಲಿ ಪಟ್ಟದಕಲ್ಲು ಸ್ಮಾರಕವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿದೆ. ಗೋಲಗುಮ್ಮಟದ ವಿಷಯದಲ್ಲಿ ಮಾತ್ರ ನಿರ್ಲ ಕ್ಷ್ಯ ಮಾಡಿದೆ. ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಯಾದಲ್ಲಿ ಜಗತ್ತಿನ ಮೂಲೆ ಮೂಲೆಗೆ ಗೋಲಗುಮ್ಮಟದ ಕುರಿತು ಪರಿಚಯವಾಗಲಿದೆ.

ಅಭಿವೃದ್ಧಿಗೆ ವಿಶೇಷ ಅನುದಾನ ತರುವುದಕ್ಕೆ ಹಾಗೂ ದೇಶ-ವಿದೇಶದ ಪ್ರವಾಸಿಗರನ್ನು ನಿರೀಕ್ಷೆ ಮೀರಿ ಸೆಳೆಯುವಲ್ಲಿ ಸಹಕಾರಿ ಆಗಲಿದೆ. ಹಾಗಂತ ಯುನೆಸ್ಕೋ ಪಾರಂಪರಿಕ ಪಟ್ಟಿ ಸೇರ್ಪಡೆ ವಿಭಾಗಕ್ಕೆ ಗೋಲಗುಮ್ಮಟದ ಕುರಿತು ತಿಳಿದಿಲ್ಲ ಎಂದೇನಲ್ಲ. ಗೋಲಗುಮ್ಮಟವನ್ನು ದಕ್ಷಿಣ ಭಾರತದ ಸುಲ್ತಾನರ ಅವಶೇಷಗಳಲ್ಲಿ ಸೇರ್ಪಡೆ ಮಾಡಿದ್ದು, ಇದು ಕೇವಲ ಪ್ರವಾಸಿ ಪಟ್ಟಿಗೆ ಮಾತ್ರ ಸೇರ್ಪಡೆಗೆ ಅವಕಾಶ ಕಲ್ಪಿಸುತ್ತದೆ. ಆದರೆ ಶಾಶ್ವತ ಪರಂಪರೆ ಪಟ್ಟಿಗೆ ಸೇರ್ಪಡೆಗೆ ಇದು ಅವಕಾಶ ನೀಡುವುದಿಲ್ಲ. ಒಂದೊಮ್ಮೆ ಈಗಿರುವ ವ್ಯವಸ್ಥೆಯಲ್ಲೇ ಮುಂದುವರಿದು ಯುನೆಸ್ಕೋ ಸಮಿತಿ ಸಭೆಯ ಪರಿಶೀಲನೆ ಹಂತದಲ್ಲಿ ನಕಾರಾತ್ಮಕ ಸಂದೇಶ ಹೊರ ಬಿದ್ದರೆ ವಿಶ್ವ ಪರಂಪರೆ ಪಟ್ಟಿಗೆ ಗೋಲಗುಮ್ಮಟ ಸೇರ್ಪಡೆ ಕನಸಿನ ಮಾತಾಗುವ ಅಪಾಯವೂ ಇದೆ.

ಸೇರ್ಪಡೆ ವಿಧಾನ: ಯುನೆಸ್ಕೋ ಹಲವು ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಅಧ್ಯಯನ ನಡೆಸಿ, ವಿಶ್ವ ಪರಂಪರೆ ಪಟ್ಟಿಗೆ ಸೇರಿಸುತ್ತವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಆಯಾ ದೇಶಗಳು ಪುರಾತನ ಪಟ್ಟಿಗೆ ತನ್ನ ಸ್ಥಳ ಸೇರ್ಪಡೆಗೆ ಹೊಂದಿರುವ ಐತಿಹಾಸಿಕ-ಪಾರಂಪರಿಕ ಮಹತ್ವ ತಿಳಿಸುವ ಹಾಗೂ ಅಗತ್ಯ ದಾಖಲೆಗಳ ಸಮೇತ ಪ್ರಸ್ತಾವನೆ ಸಲ್ಲಿಸಬೇಕು. ಹಂಪಿ ಹಾಗೂ ಪಟ್ಟದಕಲ್ಲು ಸ್ಮಾರಕಗಳು ಯುನೆಸ್ಕೋ ಸ್ವಯಂ ಪ್ರೇರಣೆಯ ಆಯ್ಕೆ ಎಂಬುದು ಗಮನೀಯ.

ಹೀಗಾಗಿ ಆದಿಲ್‌ ಶಾಹಿ ಅರಸರ ರಾಜಧಾನಿ ವಿಜಯಪುರ ನಗರದಲ್ಲಿ ಶಾಹಿ 7ನೇ ದೊರೆ ಮೊಹ್ಮದ್‌ ಆದಿಲ್‌ ಶಹಾ ಕ್ರಿ.ಶ. 1626-1656 ಅವಧಿಯಲ್ಲಿ ಗೋಲಗುಮ್ಮಟ ನಿರ್ಮಿಸಿದ. ಗೋಲಗುಮ್ಮಟ ವಿಶ್ವ ವಿಖ್ಯಾತಿ ಪಡೆಯಲು ಕಾರಣವಾಗಿರುವ ವಿಶೇಷ ಅಂಶಗಳ ಕುರಿತು ಸಚಿತ್ರ ಹಾಗೂ ಐತಿಹಾಸಿಕ ಹಾಗೂ ಸ್ಮಾರಕದ ವೈಶಿಷ್ಟ್ಯತೆ, ವಿಭಿನ್ನತೆ ಸೇರಿದಂತೆ ಗೋಲಗುಮ್ಮಟವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡುವ ಅಗತ್ಯದ ಕುರಿತು ಹೇಳುವ ಸಮಗ್ರ ಯೋಜನಾ ವರದಿ ಸಹಿತ ಪ್ರಸ್ತಾವನೆ ಸಲ್ಲಿಕೆಯಾಗಬೇಕು.

ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾಯದರ್ಶಿಗೆ ಸಮಗ್ರ ಯೋಜನಾ ವರದಿಯ ಪ್ರಸ್ತಾವನೆ ಸಲ್ಲಿಕೆಯಾಗಿ, ಅಲ್ಲಿಂದ ಕೇಂದ್ರ ಸರ್ಕಾರದ ಮುಖ್ಯ ಕಾರ್ಯಕದರ್ಶಿ ಹಾಗೂ ಸಂಸ್ಕೃತಿ ಸಚಿವಾಲಯದ ಮೂಲಕ ಯುನೆಸ್ಕೋಗೆ ಸಲ್ಲಿಕೆಯಾಗಬೇಕು. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಮುನ್ನ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡಲ್ಲಿ ಇನ್ನೂ ಹೆಚ್ಚಿನ ಬಲ ದೊರೆಯುತ್ತದೆ. ಹಾಗಂತ ಇದಕ್ಕೆ ಸದನದ ಒಪ್ಪಿಗೆ, ಸಂಪುಟದ ಮುದ್ರೆ ಬೀಳುವ ಅಗತ್ಯವಿಲ್ಲ.

ಯುನೆಸ್ಕೋ ತನಗೆ ಸಲ್ಲಿಕೆಯಾದ ಪ್ರಸ್ತಾವನೆ ಪರಿಶೀಲಿಸಿದ ಬಳಿಕ ತನ್ನ ಪ್ರತಿನಿಧಿಯನ್ನು ಸ್ಥಳಕ್ಕೆ ಕಳುಹಿಸಿ, ಅಧ್ಯಯನ ಮಾಡಿಸಿ, ವರದಿ ಪಡೆಯುತ್ತದೆ. ಆದರೆ ಯುನೆಸ್ಕೋ ಪ್ರತಿನಿಧಿ ಸ್ಥಳಕ್ಕೆ ಬರುವಂತೆ ಮಾಡಲು ಕೇಂದ್ರ ಸರ್ಕಾರ ಯುನೆಸ್ಕೋ ಆಡಳಿತ ಮಂಡಳಿ ಸದಸ್ಯರ ಮೇಲೆ ಒತ್ತಡ ಹೇರುವ ಕೆಲಸವಾಗಬೇಕು. ಇದಕ್ಕಾಗಿ ರಾಜ್ಯ ಸಮಗ್ರ ಯೋಜನಾ ವರದಿ ಸಲ್ಲಿಸಿ ಪರಿಸ್ಥಿತಿ, ಗಂಭೀರತೆ ಹಾಗೂ ಅಗತ್ಯದ ಕುರಿತು ಮನವರಿಕೆ ಮಾಡಿಕೊಡಬೇಕು.

ಡಿಪಿಆರ್‌ ತಯಾರಿಗೆ ಬೇಕು 15 ಲಕ್ಷ ರೂ.: ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಹೀಗೆ ಸಲ್ಲಿಕೆಯಾಗುವ ಪ್ರಸ್ತಾವನೆಗೆ ಬೇಕಾದ ಐತಿಹಾಸಿಕ ದಾಖಲೆಗಳ ಸಂಗ್ರಹ, ಚಿತ್ರಗಳು, ವಿಡಿಯೋ ತುಣುಕುಗಳು ಸೇರಿದಂತೆ ಸುಮಾರು 400 ಪುಟಗಳ ಸಮಗ್ರ ಯೋಜನೆಯ ವರದಿ ರೂಪಿಸಲು ಕನಿಷ್ಠ 15 ಲಕ್ಷ ರೂ. ಬೇಕು. ಹಣ ನೀಡಿದ ಬಳಿಕ ಯೋಜನೆ ರೂಪಿಸಲು ಸ್ಥಾನಿಕ ಇತಿಹಾಸಿಕ ಸಂಶೋಧಕರು, ಐತಿಹಾಸಿಕ ವಾಸ್ತು ತಜ್ಞರು, ಪಾರಂಪರಿಕ ಜ್ಞಾನ ಇರುವ ಪರಿಣಿತರು, ಆಧುನಿಕ ಛಾಯಾ ತಂತ್ರಜ್ಞಾನ ಹೊಂದಿರುವ ನುರಿತ ಛಾಯಾಗ್ರಾಹಕರು, ವಿಡಿಯೋಗ್ರಾಫ‌ರ್‌, ಇತಿಹಾಸವನ್ನು ಶಿಸ್ತುಬದ್ದವಾಗಿ ಒಂದಕ್ಷರವೂ ತಪ್ಪುಗಳಿಲ್ಲದಂತೆ ಡಿಟಿಪಿ ಮಾಡುವ ಹಾಗೂ ಪ್ರೂಫ್ ರೀಡರ್‌ ಸೇರಿದಂತೆ ಸುಮಾರು 10-15 ಜನರ ತಂಡವೊಂದು ಈ ನಿರ್ದಿಷ್ಟ ಕೆಲಸಕ್ಕೆ ಪ್ರತ್ಯೇಕವಾಗಿ ನಿಯೋಜನೆಗೊಳ್ಳಬೇಕು. ಈ ತಂಡ ಸಮಗ್ರ ಯೋಜನಾ ವರದಿ ಸಲ್ಲಿಸಿ ಜಿಲ್ಲಾಡಳಿತಕ್ಕೆ ನೀಡಬೇಕು.

ಸುಳ್ಳುಗಳ ಕಂತೆ: ಈ ಶಿಷ್ಟಾಚಾರದ ಮಾರ್ಗದಲ್ಲಿ ಗೋಲಗುಮ್ಮಟವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಈವರೆಗೆ ಒಂದೇ ಒಂದು ಬಾರಿ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಕನಿಷ್ಠ ಈ ವಾಸ್ತವಿಕ ಅಂಶಗಳ ಕುರಿತು ಚರ್ಚೆಯೂ ಆಗಿಲ್ಲ. ವಾಸ್ತವ ಹೀಗಿದ್ದರೂ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಪ್ರಸ್ತಾವನೆ ಸಲ್ಲಿಸುವುದು ತನ್ನ ವ್ಯಾಪ್ತಿಗೆ ಬರದಿದ್ದರೂ ಭಾರತೀಯ ಪುರಾತತ್ವ
ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ನಾವು ಹಲವು ಬಾರಿ ಪ್ರಸ್ತಾವನೆ ಕಳಿಸಿದ್ದೇವೆ ಎನ್ನುತ್ತಾರೆ.

ಮತ್ತೂಂದೆಡೆ ಜಿಲ್ಲೆಯ ರಾಜಕೀಯ ನಾಯಕರು, ಕೇಂದ್ರ-ರಾಜ್ಯ ಸಚಿವರು, ಶಾಸಕ-ಸಂಸದರು ಸೇರಿ ಎಲ್ಲ ಜನಪ್ರತಿನಿಧಿಗಳು ಪ್ರಸ್ತಾವನೆ ಕಳಿಸಲಾಗಿದೆ, ವರದಿ ತಯಾರಿಸಲಾಗಿದೆ, ಸರ್ಕಾರಕ್ಕೆ ಪತ್ರ ಬರೆಯಲಾಗಿದೆ, ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಬಂಥ ಸುಳ್ಳುಗಳ ಮೆರವಣಿಗೆ ನಡೆಸುತ್ತಲೇ ಇದ್ದಾರೆ.

ಪರಿಣಾಮ ಗೋಲಗುಮ್ಮಟ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ ಎಂಬುದು ವಿಜಯಪುರ ಜಿಲ್ಲೆಯ ಜನರ ಮಟ್ಟಿಗೆ ಕೇವಲ ಪ್ರವಾಸೋದ್ಯಮ ದಿನಾಚರಣೆ, ವಿಶ್ವ ಪರಂಪರೆ ದಿನಾಚರಣೆ, ಇತಿಹಾಸದ ಕಾರ್ಯಕ್ರಮಗಳಂಥ ವೇದಿಕೆಗಳಲ್ಲಿ ಭಾಷಣದ ವಸ್ತುವಾಗಿದೆ. ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next