ವಿಜಯಪುರ: ಜಿಲ್ಲೆಯ ಜನರು ಎಂಥದ್ದೇ ಸಂಕಷ್ಟ ಸಂದರ್ಭದಲ್ಲೂ ದುಡಿಮೆ ಅರಸಿ ಗುಳೆ ಹೋಗಬೇಡಿ. ಜಿಲ್ಲಾಡಳಿತ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸ್ಥಳೀಯವಾಗಿ ನಿಮಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಲಿದೆ. ಹಳ್ಳಿ ಕಾರ್ಮಿಕರು ಇದರ ಸದ್ಬಳಕೆ ಮಾಡಿಕೊಂಡು ಹುಟ್ಟಿದೂರಲ್ಲೇ ನೆಲೆಸುವ ಮೂಲಕ ಗ್ರಾಮೀಣ ಬದುಕನ್ನು ಬಲಿಷ್ಠಗೊಳಿಸಿ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಹೇಳಿದರು.
ಬುಧವಾರ ತಿಕೋಟಾ ತಾಲೂಕಿನ ಹೊನವಾಡ ಗ್ರಾಪಂ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೊನವಾಡ ಗ್ರಾಮದಲ್ಲಿ ನಡೆಯುತ್ತಿರುವ ಸುಮಾರು 75 ಎಕರೆ ಪ್ರದೇಶದ ದೊಡ್ಡ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಚರ್ಚೆ ಅವರು ಚರ್ಚೆ ನಡೆಸಿದರು. ಈ ಹಂತದಲ್ಲಿ ಕಾರ್ಮಿಕರು ಎಂಥದ್ದೇ ಸಂಕಷ್ಟದ ಸಂದರ್ಭದಲ್ಲೂ ಗುಳೆ ಹೋಗದಂತೆ ಮನವಿ ಮಾಡಿದ, ಅವರು ಜಿಲ್ಲಾಡಳಿತ ಉದ್ಯೋಗ ಬೇಕೆಂದು ಕೇಳುವ ಎಲ್ಲರಿಗೂ ಸ್ಥಳೀಯವಾಗಿ ನರೇಗಾದಲ್ಲಿ ಉದ್ಯೋಗ ಕೊಡುವ ಕೆಲಸ ಮಾಡುತ್ತೇವೆ. ಹೀಗಾಗಿ ಜಿಲ್ಲೆಯಿಂದ ಭವಿಷ್ಯದಲ್ಲಿ ಯಾರೂ ಗುಳೆ ಹೋಗಬಾರದು ಎಂದು ಕೋರಿದರು.
ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಅವರ ಖಾತೆಗೆ ಕೂಲಿ ಹಣ ಜಮೆ ಆಗುವ ಕುರಿತು ಚರ್ಚಿಸಿದಾಗ ಕಾರ್ಮಿಕರಿಂದ ಕೂಲಿ ಹಣ ಪಾವತಿ ವಿಷಯದಲ್ಲಿ ದೂರು ಕೇಳಿ ಬಂದರು. ಇದಕೆ ಪ್ರತಿಕ್ರಿಯಿಸಿದ ಜಿಲ್ಲಾ ಧಿಕಾರಿ ವೈ.ಎಸ್. ಪಾಟೀಲ, ಏಕಕಾಲಕ್ಕೆ ಶೇಕಡಾ ನೂರರಷ್ಟು ಎಲ್ಲರ ವೇತನ ಜಮೆ ಮಾಡುವಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿರುತ್ತವೆ. ಇದರ ಹೊರತಾಗಿಯೂ ಶೀಘ್ರವೇ ಸಮಸ್ಯೆ ಇತ್ಯರ್ಥಗೊಳಿಸಿ ಬೇಗ ಕೂಲಿ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಆಧಾರ್ ಕಾರ್ಡ್ ಲಿಂಕ್, ಆಧಾರ್ ಮ್ಯಾಪಿಂಗ್‌ನಂತ ಹಲವು ಸಮಸ್ಯೆ ಆದಲ್ಲಿ ಮಾತ್ರ ವೇತನ ತೊಂದರೆ ಆಗುತ್ತದೆ. ಸ್ವಲ್ಪ ದಿನಗಳ ನಂತರ ವೇತನ ಜಮೆ ಆಗುತ್ತದೆ. ಪ್ರತಿ ಕಾರ್ಮಿಕನ ದುಡಿಮೆಗೆ ತಕ್ಕಂತೆ ಕೂಲಿ ಹಣ ಬ್ಯಾಂಕ್ ಖಾತೆಗೆ ಜಮೆ ಆಗಲಿದ್ದು ವಿಳಂಬವಾದರೂ ಹಣ ಪಾವತಿಯಲ್ಲಿ ಮೋಸ ಆಗದು ಎಂದರು.
ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಗ್ರಾಮೀಣ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ 100 ದಿನಗಳ ಉದ್ಯೋಗ ದೊರೆತಿದೆ. ನಿಮಗೆ ಪರಿಚಿತವಿರುವ ಇನ್ನೂ ಕೂಲಿಕಾರರನ್ನು ಕರೆದುಕೊಂಡು ಬಂದು ನರೇಗಾ ಯೋಜನೆ ಅಡಿ ಕೆಲಸ ಮಾಡಿ. ಮಳೆ ಬಂದು ಕೆರೆ ತುಂಬುವವರೆಗೂ ಈ ಹೂಳೆತ್ತುವ ಕೆಲಸ ಮಾಡಿ ಎಂದು ಕೋರಿದರು.
ತಿಕೋಟಾ ತಾಪಂ ಇಒ ಬಿ.ಎಸ್. ರಾಠೊಡ, ಪಿಡಿಒ ಬಿ.ಪಿ. ಉಪ್ಪಲದಿನ್ನಿ, ಗ್ರಾಪಂ ಅಧ್ಯಕ್ಷ ದುಂಡಪ್ಪ ವಾಲೀಕಾರ, ಸದಸ್ಯರಾದ ಫಕ್ರುದ್ದಿನ್ ಮುಲ್ಲಾ, ರವಿ ಮಾಳಗೆ, ಶಂಕರ ಪಡತಾರೆ, ಪ್ರಕಾಶ ಮಸಳಿ, ಹೂವಣ್ಣ ಪೂಜೇರಿ ಇತರರಿದ್ದರು.