Advertisement

ಖಾಸಗಿ ಆಸ್ಪತ್ರೆ ಸೇವೆ ಆರಂಭಿಸಲು ಡಿಸಿ ಸೂಚನೆ

01:51 PM Apr 26, 2020 | Naveen |

ವಿಜಯಪುರ: ಕೋವಿಡ್‌-19 ಸಂಕಷ್ಟದ ಸಂದರ್ಭದಲ್ಲಿ ಯುದ್ಧದ ಪರಿಸ್ಥಿತಿ ಇದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಕೂಡಲೇ ಸೇವೆ ಪುನರಾರಂಭಿಸಿ ಖಾಸಗಿ ವೈದ್ಯರು-ದಾದಿಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚಿಸಿದರು.

Advertisement

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆಗಳ ಕುರಿತು ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಖಾಸಗಿ ವೈದ್ಯರ ಸೇವೆಯೂ ಈ ಹಂತದಲ್ಲಿ ಅಮೂಲ್ಯವಾಗಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ವೈದ್ಯರು ಸೇವೆ ಆರಂಭಿಸಿ ಕೋವಿಡ್‌ -19 ಲಕ್ಷಣ ಇರುವ ರೋಗಿಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ತುರ್ತು ಸಂದರ್ಭದಲ್ಲಿ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯ ಪ್ರಮಾಣದಷ್ಟು ಪಿಪಿಇ ಕಿಟ್‌ ಮತ್ತು ಎನ್‌-95 ಮಾಸ್ಕ್ ಪೂರೈಸಲು ನಾವು ಸಿದ್ಧರಿದ್ದೇವೆ. ಒಂದೊಮ್ಮೆ ಸೇವೆ ಸಲ್ಲಿಸುವ ಖಾಸಗಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ ಕುರಿತು ನಿರ್ದಿಷ್ಟ ದೂರು ಬಂದಲ್ಲಿ ಜಿಲ್ಲಾಡಳಿತ ಅಂಥ ಆಸ್ಪತ್ರೆಗಳ ಲೈಸನ್ಸ್‌ ರದ್ದು ಮಾಡುವ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್‌-19 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಗಳ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ. ನಾಲ್ಕು ತಜ್ಞರ ತಂಡಗಳನ್ನು ಸಹ ರಚಿಸಿ ಮತ್ತು ಇತರೆ ಆರೋಗ್ಯ ಸಿಬ್ಬಂದಿಗಳು ಸಂಪರ್ಕ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಪಾಸಿಟಿವ್‌ ಪ್ರಕರಣ ಕಂಡುಬಂದ 37 ಜನರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ. ಜಿಪಂ ಸಿಇಒ ಗೋವಿಂದ ರೆಡ್ಡಿ, ಎಡಿಸಿ ಡಾ| ಔದ್ರಾಮ್‌, ಸರ್ಕಾರಿ ಹಾಗೂ ಖಾಸಗಿ ವೈದ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next