ವಿಜಯಪುರ: ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ದರವನ್ನು 2021-22ನೇ ಸಾಲಿನ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಜಿಲ್ಲಾ ಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಯೋಜನಾ ನಿರ್ದೇಶಕರು, ಆಯುಕ್ತರು ಸೇರಿದಂತೆ ಅಧಿ ಕಾರಿಗಳ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ಕರ್ನಾಟಕ ಪೌರ ಕಾಯ್ದೆಗಳ ತಿದ್ದುಪಡಿಯಂತೆ ಸ್ವತ್ತಿನ ಮೂಲ ಮೌಲ್ಯವನ್ನು ಪ್ರಕಟಿಸಲಾದ ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಶೇ. 25ರಷ್ಟು ಪರಿಗಣಿಸಲಾಗುತ್ತದೆ. ಅದೇ ರೀತಿ ಪ್ರದೇಶಗಳಿಗೆ ತಕ್ಕಂತೆ ಬೇರೆ ಬೇರೆ ಆಸ್ತಿ ತೆರಿಗೆ ದರ ನಿಗದಿಪಡಿಸಲಾಗಿದೆ ಎಂದರು. ಕರ್ನಾಟಕ ಪೌರ ನಿಗಮ ಅಧಿ ನಿಯಮದ ತಿದ್ದುಪಡಿಯಂತೆ ವಾಸದ ಕಟ್ಟಡಗಳಿಗೆ ಮಾರುಕಟ್ಟೆ ಮೂಲ ಬೆಲೆಯ ಮೇಲೆ ಕನಿಷ್ಠ ಶೇ. 0.2ಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಶೇ. 1.5ಕ್ಕಿಂತ ಹೆಚ್ಚಿಗೆ ಇಲ್ಲದಂತೆ ಪ್ರದೇಶವಾರು ತೆರಿಗೆ ದರ ವಿಧಿ ಸಲಾಗುತ್ತದೆ.
ಖಾಲಿ ನಿವೇಶನಗಳಿಗೆ ಕನಿಷ್ಠ ಶೇ. 0.2ಗಿಂತ ಕಡಿಮೆ ಹಾಗೂ 0.5ಕ್ಕಿಂತ ಹೆಚ್ಚಿಲ್ಲದಂತೆ ಪ್ರದೇಶವಾರು ಬೇರೆ ಬೇರೆ ತೆರಿಗೆ ದರ ವಿಧಿ ಸಲಾಗುತ್ತದೆ. ಕಟ್ಟಡಕ್ಕೆ ಹೊಂದಿಕೊಂಡಿರುವ 1 ಸಾವಿರ ಚದರ ಅಡಿಗಿಂತ ಹೆಚ್ಚಿರುವ ಖಾಲಿ ನಿವೇಶನಕ್ಕೆ ಖಾಲಿ ಭೂಮಿಗೆ ವಿಧಿ ಸುವ ಆಸ್ತಿ ತೆರಿಗೆ ದರವನ್ನೇ ವಿಧಿ ಸಲಾಗುತ್ತದೆ ಎಂದರು. ಕರ್ನಾಟಕ ಪೌರ ನಿಯಮಗಳ ಅಧಿ ನಿಯಮ ತಿದ್ದುಪಡಿಯಂತೆ ವಾಣಿಜ್ಯ ಕಟ್ಟಡಗಳಿಗೆ ಮಾರುಕಟ್ಟೆ ಮೂಲ ಬೆಲೆಯ ಕನಿಷ್ಠ ಶೇ. 0.5ಕ್ಕಿಂತ ಕಡಿಮೆ ಶೇ. 3.0ಕ್ಕಿಂತ ಹೆಚ್ಚಿಗೆ ಇಲ್ಲದಂತೆ ಪ್ರದೇಶವಾರು ಬೇರೆ ಬೇರೆ ತೆರಿಗೆ ದರ ವಿಧಿಸಲಾಗುತ್ತದೆ. ತಿದ್ದುಪಡಿ ಪ್ರಕಾರ ಪ್ರತಿವರ್ಷ ಶೇ. 3-5ರಷ್ಟು ಸ್ವತ್ತು ತೆರಿಗೆ ಹೆಚ್ಚಿಸಲು ಅವಕಾಶವಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪಾಲಿಕೆಗೆ ಸಂಬಂ ಧಿಸಿದಂತೆ 2005ರಿಂದ 2021ಕ್ಕೆ ಆಸ್ತಿ ತೆರಿಗೆ ದರವನ್ನು ಪರಿಷ್ಕರಣೆ ಮಾಡಲಾಗಿರುತ್ತದೆ. ಆದರೆ ಕರ್ನಾಟಕ ಪೌರ ನಿಗಮ ಅಧಿನಿಯಮ 1976ರ ತಿದ್ದುಪಡಿ ಮಾಡಿ, ಫೆಬ್ರುವರಿ 18 ರಂದು ರಾಜ್ಯಪತ್ರ ಹೊರಡಿಸಲಾಗಿದೆ. ಅದರಂತೆ 2005-06ನೇ ಹಣಕಾಸು ವರ್ಷದಿಂದ ಆರಂಭಿಸಿ ಪ್ರತಿ 3 ವರ್ಷಕ್ಕೊಮ್ಮೆ ಶೇ. 15ರಿಂದ 30 ಆಸ್ತಿ ತೆರಿಗೆ ಹೆಚ್ಚಿಸಿ ಪರಿಷ್ಕರಿಸಲು ಅವಕಾಶವಿದೆ ಎಂದರು.
ವಾರ್ಡ್‌ವಾರು ಮತ್ತು ಪ್ರದೇಶವಾರು ಆಸ್ತಿ ತೆರಿಗೆ ದರಗಳನ್ನು ನಿಗ ದಿ ಪಡಿಸಿ ಠರಾವು ಮಾಡಿದ ಪ್ರಕಾರ 2021-22ನೇ ಸಾಲಿನ ಅನ್ವಯವಾಗುವಂತೆ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ಸಾರ್ವಜನಿಕರು ವಾರ್ಡ್‌ವಾರು ಮತ್ತು ಪ್ರದೇಶವಾರು ಆಸ್ತಿ ತೆರಿಗೆ ದರಗಳ ಮಾಹಿತಿಯನ್ನು ಕಂದಾಯ ವಿಭಾಗದಲ್ಲಿ ಪಡೆಯಬೇಕೆಂದು ಸೂಚಿಸಿದರು. ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.