ವಿಜಯಪುರ: ಲಾಕ್‌ಡೌನ್ ನಿರ್ಬಂಧ ತೆರವುಗೊಂಡು ಸಂಚಾರ ಮರು ಆರಂಭಿಸಿರುವ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯಿಂದ ಬುಧವಾರ 117 ಬಸ್ ಸಂಚಾರ ನಡೆಸಿವೆ. ಬೆಂಗಳೂರಿಗೆ ಓಡಿರುವ 10 ಬಸ್ ಸೇರಿ ವಿಜಯಪುರ ಜಿಲ್ಲೆಯಿಂದ ಹೊರ ರಾಜ್ಯಕ್ಕೆ 30 ಬಸ್ ಸಂಚಾರ ಬೆಳೆಸಿವೆ. ಜಿಲ್ಲೆಯ ಆಂತರಿಕ ವಲಯದಲ್ಲಿ ಗ್ರಾಮೀಣ ಸಾರಿಗೆ ಹೊರತಾಗಿ ತಾಲೂಕು-ಜಿಲ್ಲಾ ಕೇಂದ್ರಗಳ ಮಧ್ಯೆ 85 ಬಸ್ ಸಂಚಾರ ನಡೆಸುವ ಮೂಲಕ ಜಿಲ್ಲೆಯಲ್ಲಿ ಎರಡನೇ ದಿನ ಪ್ರಯಾಣದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿದೆ.
ಲಾಕ್‌ಡೌನ್ ಬಳಿಕ ಜಿಲ್ಲೆಯಲ್ಲಿ ಮಂಗಳವಾರದಿಂದ ಆರಂಭಗೊಂಡಿದ್ದ ಸಾರಿಗೆ ಸಂಸ್ಥೆಯ ಬಸ್ ಸಂಚಾರದಲ್ಲಿ ಮೊದಲ ದಿನ ಪ್ರಯಾಣಿಕರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. ಬೆಳಗ್ಗೆ 7 ರಿಂದ ಸಂಜೆ 7ರೊಳಗೆ ಪ್ರಯಾಣ ಮುಗಿಸುವ ಷರತ್ತು ಪಾಲನೆ ಕಡ್ಡಾಯವಾಗಿದೆ. ಪರಿಣಾಮ ಹೊರ ಜಿಲ್ಲೆಗೆ ಕೇವಲ 16 ಬಸ್ ಓಡಿದ್ದರೆ, 22 ಸಿಟಿಬಸ್ ಹಾಗೂ 142 ಬಸ್ ಗಳು ಜಿಲ್ಲೆಯ ವ್ಯಾಪ್ತಿಯ ತಾಲೂಕು-ಜಿಲ್ಲಾ ಕೇಂದ್ರಕ್ಕೆ ಓಡಾಡಿದ್ದವು. ಆದರೆ ಪ್ರಯಾಣಿಕರ ಕೊರತೆ ಕಾರಣ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇವಲ 30 ಪ್ರಯಾಣಿಕರಿಗೆ ಅವಕಾಶ ನೀಡಿದ್ದರಿಂದ ಮೊದಲ ದಿನ ವಿಜಯಪುರ ವಿಭಾಗಕ್ಕೆ ಕೇವಲ 1.50 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
2ನೇ ದಿನ ಪ್ರಯಾಣಿಕರಿಂದ ಸ್ಪಂದನೆ ದೊರಕಿದ್ದು, ಬುಧವಾರದಿಂದ ಬೆಂಗಳೂರಿಗೆ ಸಂಚಾರ ಆರಂಭಿಸಿದ್ದು, 8 ಬಸ್‌ಗಳನ್ನು ಓಡಿಸಲಾಗಿದೆ. ಇದಲ್ಲದೇ ಕಲಬುರಗಿ, ಬೆಳಗಾವಿ, ಬಾಗಲಕೋಟೆ, ಹೊಸಪೇಟೆ (ಬಳ್ಳಾರಿ) ಸೇರಿದಂತೆ ಅಂತರ ಜಿಲ್ಲೆಗಳಿಗೆ 30 ಬಸ್ ಓಡಿವೆ. ಅಂತರ ಜಿಲ್ಲೆಯಲ್ಲಿ ಓಡಾಟ ನಡೆಸಿರುವ 85 ಸೇರಿ ಎರಡನೇ ದಿನ 117 ಬಸ್ ಸಂಚಾರ ನಡೆಸಿವೆ. ಇದಲ್ಲದೇ ಸರ್ಕಾರ ಬುಧವಾರದಿಂದ ರಾತ್ರಿ 7 ನಂತರವೂ ದೂರದ ಊರುಗಳಿಗೆ ನೇರ ಪ್ರಯಾಣ ಬೆಳೆಸಲು ಅವಕಾಶ ನೀಡಿದೆ. ಹೀಗಾಗಿ ಬುಧವಾರ ರಾತ್ರಿ ಬೆಂಗಳೂರಿಗೆ 2 ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಾಗಿವೆ. ಮಂಗಳೂರು ಸೇರಿದಂತೆ ದೂರದ ಜಿಲ್ಲೆಗಳಿಗೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ ಓಡಿಸಲು ಕೂಡ ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ. ಬುಧವಾರ ಪ್ರಯಾಣಿಕರಿಂದ ದೊರಕಿರುವ ಸ್ಪಂದನೆಯಿಂದ ವಿಜಯಪುರ ವಿಭಾಗಕ್ಕೆ ಕನಿಷ್ಟ 4 ಲಕ್ಷ ರೂ. ಆದಾಯ ನಿರೀಕ್ಷೆಯಲಿದೆ.
ಇನ್ನು ಜಿಲ್ಲೆಯ ಆಂತರಿಕ ವ್ಯವಸ್ಥೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳ ಮಧ್ಯೆ 85 ಬಸ್ ಓಡಾಟ ನಡೆಸಿದ್ದು, ಸರ್ಕಾರ ಗ್ರಾಮೀಣ ಸಾರಿಗೆಗೆ ಇನ್ನೂ ಅನುಮತಿ ಸಿಗದ ಕಾರಣ ಹಳ್ಳಿಗಳತ್ತ ಸಾರಿಗೆ ಸಂಸ್ಥೆ ಬಸ್‌ಗಳು ಮುಖ ಮಾಡಿಲ್ಲ. ಆದರೆ ಹಳ್ಳಿಗಳ ಪ್ರಮುಖ ಸಾರಿಗೆ ಆಧಾರ ಎನಿಸಿರುವ ಟಂಟಂ, ಆಟೋಗಳಂಥ ಸಾರಿಗೆ ಆರಂಭಗೊಂಡಿದೆ.
ಜಿಲ್ಲೆಯಲ್ಲಿ ಲಾಕ್‌ಡೌನ್ ಬಳಿಕ ಬಸ್ ಸಂಚಾರ ಆರಂಭಗೊಂಡ ಎರಡನೇ ದಿನ ಬೆಂಗಳೂರಿಗೆ ಮೊದಲ ಬಾರಿಗೆ 10 ಬಸ್ ಸೇರಿ ಅಂತರ ಜಿಲ್ಲೆಗೆ 30 ಬಸ್ ಓಡಿಸಿದ್ದೇವೆ. ಸಾರ್ವಜನಿಕರಿಂದ ಸ್ಪಂದನೆ ವ್ಯಕ್ತವಾಗಿದ್ದು, ಎರಡನೇ ದಿನ 4 ಲಕ್ಷ ರೂ. ಆದಾಯ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಗಂಗಾಧರ, ವಿಭಾಗೀಯ
ನಿಯಂತ್ರಣಾಧಿಕಾರಿ ಈ.ಕ.ರ.ಸಾರಿಗೆ
ಸಂಸ್ಥೆ, ವಿಜಯಪುರ