Advertisement

ದಶಕಗಳ ನಿರೀಕ್ಷೆಗೆ ಮರುಜೀವ

09:36 AM Jul 10, 2020 | Suhan S |

ವಿಜಯಪುರ: ಜಿಲ್ಲೆಯ ಮದಭಾವಿ- ಬುರಣಾಪುರ ಪ್ರದೇಶದಲ್ಲಿ ಉದ್ದೇಶಿತ ದೇಶೀ ವಿಮಾನ ನಿಲ್ದಾಣ ಕಾಮಗಾರಿಗೆ ಬೆಂಗಳೂರಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೂಲಕ ಜಿಲ್ಲೆಯ ಜನರ ದಶಕಗಳ ನಿರೀಕ್ಷೆಗೆ ಮರುಜೀವ ಬಂದಂತಾಗಿದೆ.

Advertisement

ವಿಜಯಪುರ ವಿಮಾನ ನಿಲ್ದಾಣ ಉದ್ದೇಶಿತ ಸ್ಥಳ ಮಹಾನಗರದಿಂದ 15 ಕಿ.ಮೀ. ದೂರದಲ್ಲಿರುವ ಬುರಾಣಪುರ- ಮದಭಾವಿ ಮಧ್ಯದಲ್ಲಿ 727 ಎಕರೆ ಜಮೀನನನ್ನು ಮೀಸಲಿಡಲಾಗಿದೆ. ಸದರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ದಶಕದ ಹಿಂದೆ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರವೇ 2008 ಡಿಸೆಂಬರ್‌ 7 ರಂದು ಭೂಮಿಪೂಜೆ ನೆರವೇರಿಸಿತ್ತು. ಆದರೆ ನಂತರ ರಾಜ್ಯದಲ್ಲಿ ಬದಲಾದ ರಾಜಕೀಯ ಹಾಗೂ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಂಡಿರಲಿಲ್ಲ. ಹಲವು ಬಾರಿ ಈ ವಿಷಯ ಚರ್ಚೆಗೆ ಬಂದರೂ ಕಾಮಗಾರಿಗೆ ಜೀವ ನೀಡುವ ದಿಟ್ಟ ನಿಲುವು ಪ್ರದರ್ಶನಗೊಂಡಿರಲಿಲ್ಲ.

ಹೀಗಾಗಿ ದಶಕದಿಂದ ನನೆಗುದಿಗೆ ಬಿದ್ದಿರುವ ಉದ್ದೇಶಿತ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಹಲವು ಬಾರಿ ಹೋರಾಟ ಮಾಡಿದ್ದವು. ಕಳೆದ ಎರಡು ವರ್ಷಗಳ ಹಿಂದೆ ವಿಮಾನ ನಿಲ್ದಾಣ ಹೋರಾಟ ಸಮಿತಿಯೂ ಅಸ್ತಿತ್ವಕ್ಕೆ ಬಂದು ಹೋರಾಟವನ್ನು ಜೀವಂತ ಇರಿಸುವ ಕೆಲಸ ಮಾಡಿತ್ತು. ವಿಮಾನ ನಿಲ್ದಾಣ ನಿರ್ಮಾಣದಿಂದ ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಐತಿಹಾಸಿಕ ಸ್ಮಾರಕಗಳಿರುವ ಪ್ರವಾಸಿ ತಾಣಗಳಿಗೆ ದೇಶ-ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲು ಸಹಕಾರಿ ಆಗಲಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಇದಲ್ಲದೇ ದ್ರಾಕ್ಷಿ ಕಣಜ ಎಂದು ಕರೆಸಿಕೊಂಡಿರುವ ವಿಜಯಪುರ ಜಿಲ್ಲೆ ದೇಶದಲ್ಲಿ ಅತಿ ಹೆಚ್ಚು ಲಿಂಬೆ ಬೆಳೆಯುವ ಪ್ರದೇಶ ಹೊಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿ, ಲಿಂಬೆ, ದಾಳಿಂಬೆಯಂಥ ರಫು¤ ಗುಣಮಟ್ಟದ ದರ್ಜೆಯ ತೋಟಗಾರಿಕೆ ಬೆಳೆಗಳಿಗೆ ವಿದೇಶಗಳಿಗೆ ರಫು¤ ಮಾಡಲು ಸಹಕಾರಿ ಆಗಲಿದೆ. ಜಿಲ್ಲೆಯಲ್ಲಿ ಈಚೆಗೆ ಕೆರೆತುಂಬುವ ಯೋಜನೆಗಳಿಂದ ನಾಲೆಗಳಿಗೆ ನೀರು ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ನೂರಾರು ಬಾಂದಾರುಗಳಲ್ಲೂ ನೀರು ನಿಲ್ಲುತ್ತಿದೆ. ಇದರಿಂದ ಹೈನೋದ್ಯಮ, ಮತ್ಸೂದ್ಯಮದಂಥ ಕೃಷಿ ಉಪ ಕಸಬುಗಳ ಉತ್ಪನ್ನಗಳಿಗೂ ಜಾಗತಿಕ ಮಟ್ಟದಲ್ಲಿ ಸುಲಭವಾಗಿ ಮಾರುಕಟ್ಟೆ ಕಂಡುಕೊಳ್ಳಲು ನೆರವಾಗಲಿದೆ.

ಜಿಲ್ಲೆಯಲ್ಲಿ ಮಂಕಾಗಿರುವ ಕೈಗಾರಿಕೋದ್ಯಮ ಅಭಿವೃದ್ಧಿಗೆ ಪೂರಕವಾಗಿರುವ ವಿಮಾನ ನಿಲ್ದಾಣದಿಂದ ಕೈಗಾರಿಕೆಗಳು ಬೆಳೆದು, ನಿರುದ್ಯೋಗ ನಿವಾರಣೆಯಲ್ಲಿ ಹೆಚ್ಚಿನ ಸಹಕಾರಿ ಆಗಲಿದೆ. ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ವಿಮಾನ ನಿಲ್ದಾಣ ದೊಡ್ಡ ವೇದಿಕೆ ಕಲ್ಪಿಸಿಕೊಡಲಿದೆ ಎಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next