ವಿಜಯಪುರ: ಮೊದಲ ದಿನ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಿಕೋ ಎತ್ತುತ್ತಿದ್ದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿಮೇಳ ಎರಡನೇ ದಿನವಾದ ರವಿವಾರದಂದು ಜನರ ದಂಡೇ ಹರಿದು ಬಂದಿತ್ತು. ಹೆಚ್ಚಿನ ಮಾಹಿತಿ ನೀಡುವ ಪ್ರದರ್ಶನಗಳಿಲ್ಲ, ಹೊಸತನವಿಲ್ಲ ಎಂಬ ಗೊಣಗಾಟದ ಮಧ್ಯೆಯೂ ಇರುವ ವ್ಯವಸ್ಥೆಯನ್ನೇ ನೋಡಿಕೊಂಡು ತೃಪ್ತಿ ಪಟ್ಟರು.
ಎರಡನೇ ದಿನ ರೈತರೊಂದಿಗೆ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ರವಿವಾರ ಆಗಿದ್ದರಿಂದ ನಗರದ ಜನತೆಗೆ ವೀಕೆಂಡ್ ಕಳೆಯುವ ವೇದಿಕೆಯಾಗಿ ಕೃಷಿಮೇಳ ಬಳಕೆಯಾಯಿತು. ಮೊದಲ ದಿನ
ರೈತರು, ರೈತ ಮಹಿಳೆಯರು ವಿರಳವಾಗಿದ್ದು, ಎರಡನೇ ದಿನ ರೈತರು-ರೈತ ಮಹಿಳೆಯರೊಂದಿಗೆ ಸಾರ್ವಜನಿಕ ಮಹಿಳೆಯರು, ಮಕ್ಕಳು ಕೂಡ ಮೇಳಕ್ಕೆ ದಾಂಗುಡಿ ಇಟ್ಟಿದ್ದರು.
ಕೃಷಿ ಮೇಳದಲ್ಲಿ ಕೃಷಿ ತಾಂತ್ರಿಕತೆ ಮಾಹಿತಿಗಿಂಗ ಬಟ್ಟೆ ಮಾರಾಟ, ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಂಥ ಕೃಷಿಯೇತರ ವಸ್ತುಗಳ ಮಾರಾಟ ಮಳಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಜಂಗುಳಿ ಕಂಡು ಬರುತ್ತಿತ್ತು. ದ್ರಾಕ್ಷಿ ಬೆಳೆಯಲ್ಲಿ ಔಷಧಿ ಸಿಂಪರಣೆಯಲ್ಲಿ ಬಳಕೆಯಾಗುವ ಸಣ್ಣ ಟ್ರ್ಯಾಕ್ಟರ್‌ಗಳು, ಸ್ಪಿಂಕ್ಲರ್‌ಗಳು ತೋಟಗಳಲ್ಲಿ ಹುಲ್ಲು-ಕಳೆ ಹಸನು ಮಾಡುವ ಯಂತ್ರಗಳು, ಕ್ರಿಮಿನಾಶಕ ಉತ್ಪನ್ನಗಳು, ಹೈಬ್ರೀಡ್ ಬೀಜ ಉತ್ಪದಾನಾ ಕಂಪನಿಗಳ ಮಾರಾಟ ಮಳಿಗೆಗಳ ಮುಂದೆ ಹೆಚ್ಚಿನ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಆದರೆ ಈಚೆಗೆ ಅತಿ ಹೆಚ್ಚು ಪ್ರಚಾರದಲ್ಲಿರುವ ಸಾವಯವ ಕೃಷಿಯಲ್ಲಿ ಪ್ರಮುಖವಾಗಿ ಬೇಕಿರುವ ಎರೆಹುಳು ಸಾಕಾಣಿಕೆ, ಎರೆಜಲ ಉತ್ಪಾನೆ ಘಟಕಗಳತ್ತ ರೈತರು ಸುಳಿಯದೇ ಇರುವುದು ಅಚ್ಚರಿ ಮೂಡಿಸಿತ್ತು. ಸ್ಥಳದಲ್ಲಿದ್ದ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮಗಿರುವ ಅಲ್ಪ ಜ್ಞಾನವನ್ನೇ ಬಳಸಿಕೊಂಡು ಮಾಧ್ಯಮದವರಿಗೆ ಮಾಹಿತಿ ನೀಡುತ್ತಿರುವುದು ಸಾಮಾನ್ಯವಾಗಿತ್ತು.
ಉದ್ಘಾಟನೆ ದಿನವಾದ ಶನಿವಾರ ದೇಶಿ ಗೋ ತಳಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಕೃಷಿ ವ್ಯವಸ್ಥೆಯಲ್ಲಿ ರೈತರನ್ನು ಹೆಚ್ಚು ಆಕರ್ಷಿಸಿ, ಬೇಡಿಕೆ ಹೆಚ್ಚಿಸಿಕೊಂಡಿರುವ ಗೀರ್ ತಳಿ, ದೇಶಿ ತಳಿಗಳಲ್ಲೇ ಪ್ರಮುಖವಾದ ದಕ್ಷಿಣ ಭಾರದಲ್ಲಿ ವಿರಳವಾಗಿ ಸಾಕಲ್ಪಡುವ ಕಾಂಕ್ರೇಜ್ ಸೇರಿದಂತೆ ದೇಶಿ ಗೋ ತಳಿಗಳಲ್ಲಿ 3-4 ತಳಿಗಳ ಗೋವುಗಳ ಪ್ರದರ್ಶನ ಇರಿಸಲಾಗಿತ್ತು. ಆದರೂ ರೈತರು ಈ ಜಾನುವಾರುಗಳ ವೀಕ್ಷಣೆಗೆ ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ಆದರೆ ಕೃಷಿ ಮೇಳದ ಎರಡನೇ ದಿನವಾದ ರವಿವಾರ ಶ್ವಾನ ಪ್ರದರ್ಶನ ವೀಕ್ಷಿಸಲು ಜನರ ದಂಡೇ ಹರಿದು ಬಂದಿತ್ತು. ಲ್ಯಾಬ್ರಡಾರ್, ಪಗ್, ಪಿಟ್ ಬುಲ್, ಡಾಬರ್‌ಮನ್, ರೆಡ್ ಇನ್, ಸಿಡ್ಜ್, ಸೇಂಟ್ ಬರ್ನಾಡ್, ಡ್ರಾಟ್ ವ್ಹೀಲರ್, ಜರ್ಮನ್ ಶಫರ್ಡ ಹೀಗೆ ವಿವಿಧ ತಳಿಗಳ ಸುಮಾರು 35ಕ್ಕೂ ಹೆಚ್ಚು ನಾಯಿಗಳು ಒಂದೇ ವೇದಿಕೆಯಲ್ಲಿ ಇರುವುದನ್ನು ಕಂಡು ಸಾರ್ವಜನಿಕರು ಖುಷಿ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹೆಚ್ಚಿಗೆ ಬೇಡಿಕೆ ಇರುವ ಸಂಪೂರ್ಣ ಶುದ್ಧ ತಳಿಯ ಮುಧೋಳ ನಾಯಿ ಪ್ರದರ್ಶನ ಮಾತ್ರ ನಿಖರವಾಗಿ ಕಂಡು ಬರಲಿಲ್ಲ. ಮಿಶ್ರತಳಿ ಮುಧೋಳ ನಾಯಿಯನ್ನೇ ಕೆಲ ಪ್ರದರ್ಶಕರು ಶುದ್ಧ ತಳಿಯ ಮುಧೋಳ ನಾಯಿ ಎಂದು ಮಾಹಿತಿ ನೀಡುವುದು ಕೂಡ ಕಂಡು ಬಂತು. ನಾಯಿ ತಳಿಗಳ ಬಗ್ಗೆ ನಿಖರ ಮಾಹಿತಿ ಇರುವವರು ಶುದ್ಧ ತಳಿಯ ನಾಯಿಗಳಲ್ಲ ಎಂದು ಪ್ರಶ್ನಿಸಿದಾಗ ಸಂಕರ ತಳಿಯ ಮುಧೋಳ ನಾಯಿ ಇದು, ಈಗೆಲ್ಲಿ ಶುದ್ಧ ತಳಿ ಮುಧೋಳ ನಾಯಿ ಸಿಗಲು ಸಾಧ್ಯ ಎಂದು ಸಮರ್ಥನೆ ನೀಡುತ್ತಿದ್ದರು.
ನಾಯಿತಳ ತಳಿಗಳ ಕುರಿತು ಫಲಕ ಅಳವಡಿಸಿದ್ದ ವಿಭಾಗದಲ್ಲಿ ಕೂಡ ಆಯಾ ತಳಿಯ ನಾಯಿಗಳು ಇಲ್ಲದೇ ಯಾವುದೇ ತಳಿಯ ನಾಯಿಗಳು ಇರುವ ವಿಭಾಗದಲ್ಲಿ ಇನ್ನಾವುದೋ ತಳಿಯ ನಾಯಿಗಳ ಫಲಕಗಳು ಇರುವುದನ್ನು ಕಂಡು ರೈತರು ಗೊಂದಲಕ್ಕೀಡಾಗುತ್ತಿದ್ದರು. ಆದರೆ ಈ ಗೊಂದಲ ನಿವಾರಿಸುವಷ್ಟು ವ್ಯವಧಾನವಿಲ್ಲದಂತೆ ಸ್ಥಳದಲ್ಲಿ ಜನರ ದಂಡು ಕಂಡು ಬಂತು. ಪರಿಣಾಮ ಸಾಕುನಾಯಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸುವುದು ಕೂಡ ಕಂಡು ಬಂತು.