Advertisement

ವಿಜಯಪುರ ಪಾಲಿಕೆ; ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ: ಬಿಜೆಪಿ

03:54 PM Oct 20, 2022 | Team Udayavani |

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 33 ವಾರ್ಡ್ ಗಳಿಗೆ ಸ್ಪರ್ಧಿಸಿದ್ದು, ಎಲ್ಲಾ ವಾರ್ಡಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಇದರೊಂದಿಗೆ ನಮ್ಮ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ ಕುಚಬಾಳ ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರಗಳು ಮಾಡಿರುವ ಜನಪರ ಕಾರ್ಯಕ್ರಮಗಳು, ನಗರದಲ್ಲಿ ಆಗಿರುವ, ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳೇ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಗೆಲುವಿನ ಶ್ರೀರಕ್ಷೆ ಆಗಲಿದೆ ಎಂದರು.

ಇದನ್ನೂ ಓದಿ : ಪರೇಶ್ ಮೇಸ್ತಾ ಸಾವಿನ ಪ್ರಕರಣ ಮರು ತನಿಖೆಗೆ ಸರ್ಕಾರದ ಚಿಂತನೆ

ಮರಾಠಾ, ಕುರುಬ, ಪಂಚಮಸಾಲಿ, ಬಣಜಿಗ, ಗಾಣಿಗ, ಭಾವಸಾರ ಕ್ಷತ್ರಿಯ, ಮಾದಿಗ, ಬಂಜಾರ, ಬ್ರಾಹ್ಮಣ ಸೇರಿದಂತೆ ಸಾಮಾಜಿಕ ನ್ಯಾಯದ ಆಧಾರದಲ್ಲಿ ಟಿಕೆಟ್ ನೀಡಿದ್ದೇವೆ. ಎರಡು ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಾಧ್ಯವಾಗಿಲ್ಲ. ಮುಸ್ಲಿಂ ಸಮುದಾಯದ ಯಾರೂ ಟಿಕೆಟ್ ಕೇಳದ ಕಾರಣ ಅವಕಾಶ ನೀಡಿಲ್ಲ. ಎರಡು ವಾರ್ಡಗಳಿಗೆ ಅಭ್ಯರ್ಥಿ ಹಾಕದಿರುವುದು ಕೂಡ ಚುನಾವಣೆ ತಂತ್ರಗಾರಿಕೆಯ ಭಾಗವೇ ಹೊರತು, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಒಳ ಒಪ್ಪಂದವೇನಲ್ಲ ಎಂದು ಸಮಜಾಯಿಸಿ ನೀಡಿದರು.

ಹಲವು ವಾರ್ಡ್ ಗಳಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಲವರು ನಾಮಪತ್ರ ಸಲ್ಲಿಸಿದ್ದಾರೆ. ಇಂಥದನ್ನು ಬಂಡಾಯ ಎನ್ನಲಾಗದು. ಸ್ಪರ್ಧಾ ಆಕಾಂಕ್ಷಿಗಳ ಅಸಮಾಧಾನ‌ ಸಹಜವಾಗಿದ್ದು, ಬಹುತೇಕರ ಮನವೊಲಿಕೆ ಕಾರಣ ನಾಮಪತ್ರ ಹಿಂಪಡೆದಿದ್ದಾರೆ. ಪಕ್ಷದ ಸೂಚನೆ ಹೊರತಾಗಿಯೂ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳಲಿದೆ ಎಂದರು.

Advertisement

ರಾಜ್ಯದ ಗಮನ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮೇಲೆ ನೆಟ್ಟಿದೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಪಾಲಿಕೆ ಚುನಾವಣೆ ವಿಶೇಷ ಗಮನ ಸೆಳೆಯುತ್ತಿದೆ ಎಂದರು.

ಪಕ್ಷದ ಪ್ರಮುಖರಾದ ಮಲ್ಲಿಕಾರ್ಜುನ ಜೋಗೂರ, ಬಾಪುಸಿಂಗ್ ರಜಪೂತ, ವಿಜಯ ಜೋಶಿ, ಚಂದ್ರಶೇಖರ ಕವಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next