ಗಂಗಾವತಿ: ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪರೀಕ್ಷೆಯ ವಿಷಯದಲ್ಲಿ ಮೇಲಿಂದ ಮೇಲೆ ಎಡವಟ್ಟುಗಳನ್ನು ಮಾಡುತ್ತ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ.
ಮಂಗಳ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಪದವಿ 3ನೇ ಸೆಮಿಸ್ಟರ್ ಸಮಾಜಶಾಸ್ತ್ರದ ಪರೀಕ್ಷೆ ನಡೆಯಬೇಕಾಗಿತ್ತು.ವಿವಿ ಸಮಾಜಶಾಸ್ತ್ರ ವಿಭಾಗದವರು ಮಾಡಿದ ತಪ್ಪಿನಿಂದಾಗಿ ಪರೀಕ್ಷೆ ಮುಂದೂಡಲ್ಪಟ್ಟಿದೆ.
3ನೇ ಸೆಮಿಸ್ಟರ್ ಸಮಾಜ ಶಾಸ್ತ್ರದ ಪ್ರಶ್ನೆ ಪತ್ರಿಕೆ ಬದಲಿಗೆ ಒಂದನೇಯ ಸೆಮಿಸ್ಟರ್ ಸಮಾಜಶಾಸ್ತ್ರದ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಿದ ನಂತರ ವಿದ್ಯಾರ್ಥಿಗಳು ಆಶ್ಚರ್ಯಗೊಂಡು ಈ ಕುರಿತು ಪರೀಕ್ಷಾ ಕೋಣೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ. ಆಯಾ ಕಾಲೇಜಿನ ಪ್ರಾಚಾರ್ಯರು ವಿವಿ ಪರೀಕ್ಷಾಂಗದ ಮುಖ್ಯಸ್ಥರಿಗೆ ಮಾತನಾಡಿ ಪ್ರಶ್ನೆ ಪತ್ರಿಕೆ ಗೊಂದಲದ ಬಗ್ಗೆ ಮಾಹಿತಿ ನೀಡಿದ ತಕ್ಷಣ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಕುರಿತು ಕಾಲೇಜುಗಳಿಗೆ ಆದೇಶ ಮಾಡಿದ್ದಾರೆ.
ಈಗಾಗಲೇ ಒಂದು, ಎರಡು ಮೂರನೇ ಸೆಮಿಸ್ಟರ್ ಪರಿಕ್ಷಾ ಫಲಿತಾಂಶ ಯುಯುಸಿ ಎಂ.ಎಸ್ ತಾಂತ್ರಿಕ ಗೊಂದಲದಿಂದ ಬಹುತೇಕ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿಲ್ಲ.ಈ ಕುರಿತು ಉದಯವಾಣಿ ವೆಬ್ ನ್ಯೂಸ್ ಹಾಗೂ ಪತ್ರಿಕೆ ವಿಸ್ತೃತ ವರದಿ ಪ್ರಕಟಣೆಯ ನಂತರ 5ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕು ಭರಿಸಲು ವಿವಿ ಅವಕಾಶ ಮಾಡಿಕೊಟ್ಟಿತ್ತು.
ಕೆಲವು ಕಾಲೇಜುಗಳಲ್ಲಿ ಪ್ರಾಚಾರ್ಯರು ವಿವಿ ಆದೇಶಕ್ಕೆ ವಿರುದ್ಧವಾಗಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ಮೊದಲಿನ ಮೂರು ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿಲ್ಲ ಆದ್ದರಿಂದ 5ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕ ಪಾವತಿ ಮಾಡಿದರೆ ಪ್ರಯೋಜನವಿಲ್ಲ ಎಂದು ತಪ್ಪು ಮಾಹಿತಿ ನೀಡಿದ್ದಾರೆನ್ನಲಾಗಿದೆ.
ಈಗ 3ನೇ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೇ ಅದಲು ಬದಲಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿದೆ. ವಿವಿ ಕೂಡಲೇ ವಿದ್ಯಾರ್ಥಿಗಳ ಗೊಂದಲ ನಿವಾರಿಸಲು ಯತ್ನಿಸಬೇಕು. ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿದ ಪ್ರಾಚಾರ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಎಸ್ ಎಫ್ ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಒತ್ತಾಯಿಸಿದ್ದಾರೆ.