Advertisement

ಶ್ರದ್ಧಾಭಕ್ತಿಯ ವಿಜಯ ದಶಮಿ

04:55 PM Oct 27, 2020 | Suhan S |

ಚಿಕ್ಕಮಗಳೂರು: ವಾರ್ಷಿಕ ಶರನ್ನವರಾತ್ರಿ ಅಂಗವಾಗಿ ಕಾಫಿ ಕಣಿವೆ ಚಿಕ್ಕಮಗಳೂರಿನಲ್ಲಿ ಮಹಾನವಮಿ ಮತ್ತು ವಿಜಯದಶಮಿಯನ್ನು ಕೋವಿಡ್  ಭಯದ ನಡುವೆಯೂ ಭಕ್ತರು ಶ್ರದ್ಧಾಭಕ್ತಿ- ಸಂಭ್ರಮದಿಂದ ಆಚರಿಸಿದರು.

Advertisement

ಜಿಲ್ಲೆಯ ಶೃಂಗೇರಿ ಶಾರದಾ ಪೀಠ, ಹೊರನಾಡು ಅನ್ನಪೂರ್ಣೇಶ್ವರಿದೇವಸ್ಥಾನ, ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠ, ಅಮೃತಾಪುರ, ಚಿಕ್ಕಮಗಳೂರು ನಗರದ ಶಂಕರಮಠ, ಪೇಟೆಕೊಲ್ಲಾಪುರದಮ್ಮನವರ ದೇವಾಲಯ, ಹಟ್ಟಿಮಾರಮ್ಮನವರ ದೇವಾಲಯ, ಚಿಂತಾಮಣಿ ಸರಸ್ವತಿ ದೇವಾಲಯ, ಅಷ್ಟ ಲಕ್ಷ್ಮೀ ದೇವಸ್ಥಾನ ಹಾಗೂ ಬೀಕನಹಳ್ಳಿಯ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಚಿಕ್ಕಮಗಳೂರು ತಾಲೂಕು ಬೀಕನಹಳ್ಳಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತೀ ವರ್ಷ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು. 9 ದಿನಗಳ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಜರುಗುತ್ತಿತ್ತು. ಆನೆಯನ್ನು ಕರೆತಂದು ಮೈಸೂರು ದಸರಾ ಮಾದರಿಯಲ್ಲೇ ಜಂಬೂಸವಾರಿಯನ್ನು ನಡೆಸಲಾಗುತ್ತಿತ್ತು. ಗ್ರಾಮದಲ್ಲಿ ದೇವತೆಯ ಮೆರವಣಿಗೆ ನಡೆಸಲಾಗುತ್ತಿತ್ತು. ಪ್ರತೀದಿನ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಬೀಕನಹಳ್ಳಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸರಳ ದಸರಾ ಆಚರಿಸಲಾಯಿತು.

ದೇವಿಮೂರ್ತಿಯ ಸರಳ ಮೆರವಣಿಗೆ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಗಿತ್ತು. ದೇವಿ ಮೂರ್ತಿಯ ಮೆರವಣಿಗೆ ನಂತರ ಅಂಬು ಹೊಡೆಯುವ ಮೂಲಕ ತೆರೆ ಎಳೆಯಲಾಯಿತು. ಚಿಕ್ಕಮಗಳೂರು ನಗರದ ವಿಜಯಪುರ ಗಣಪತಿ ಪೆಂಡಲ್‌ನಲ್ಲಿ ಪ್ರತೀವರ್ಷ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪಿಸಿ 9 ದಿನಗಳ ಕಾಲ ವಿಶೇಷ ಪೂಜೆ ಹೋಮ, ಹವನ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪಿಸಿ 9 ದಿನಗಳ ಕಾಲ ವಿಶೇಷ ಪೂಜೆ ಹೋಮ- ಹವನಗಳನ್ನು ನಡೆಸಲಾಯಿತು.

ಸೋಮವಾರ ಸಂಜೆ ದುರ್ಗಾದೇವಿಯ ಮೂರ್ತಿಗೆವಿಶೇಷ ಪೂಜೆ ಸಲ್ಲಿಸಿ ಮಹಿಷಾಸುರಪ್ರತಿಮೆ ದಹಿಸಿ ಶರನ್ನವರಾತ್ರಿಗೆ ತೆರೆ ಎಳೆಯಲಾಯಿತು. ಜಿಲ್ಲೆಯಬಹುತೇಕ ದೇವಸ್ಥಾನ ಆವರಣದಲ್ಲಿ ಬನ್ನಿ ಮುರಿಯುವ ಮೂಲಕ ಅಂಬು ಉತ್ಸವಕ್ಕೆ ಅದ್ದೂರಿ ತೆರೆ ಬಿದ್ದಿತು. ಆಯುಧಪೂಜೆ ಅಂಗವಾಗಿ ನಗರದ ಬಹುತೇಕ ಪೊಲೀಸ್‌ ಠಾಣೆಗಳಲ್ಲಿ ಠಾಣೆಯ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆಯುಧ ಪೂಜೆನೆರವೇರಿಸಿದರು. ಸರಣಿ ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಅನೇಕ ಸರ್ಕಾರಿ ಕಚೇರಿಗಳಲ್ಲಿ ಶುಕ್ರವಾರ, ಶನಿವಾರಆಯುಧಪೂಜೆ ನೆರವೇರಿಸಿದರೆ ಅನೇಕ ಸರ್ಕಾರಿ ಕಚೇರಿ ಮತ್ತು ವಾಹನಗಳಿಗೆ ಭಾನುವಾರ ಆಯುಧ ಪೂಜೆ ನೆರವೇರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next