Advertisement
1988ರಲ್ಲಿ ಉಡುಪಿ ಜಿಲ್ಲೆಯ ಭದ್ರಗಿರಿ ಸದ್ಗುರು ಸಂತ ಶ್ರೀ ಕೇಶವದಾಸರಿಂದ ಪ್ರಾರಂಭವಾದ ವಿಶ್ವಶಾಂತಿ ಆಶ್ರಮದಲ್ಲಿರುವ 36ಅಡಿ ಎತ್ತರದ ಶ್ರೀ ವಿಜಯ ವಿಠ್ಠಲ ಪಾಂಡುರಂಗಸ್ವಾಮಿ ಏಕಶಿಲಾ ಮೂರ್ತಿ ವಿಶ್ವಕ್ಕೆ ಶಾಂತಿಯನ್ನು ಸಾರುವಂತೆ ಕಂಗೊಳಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ.
Related Articles
Advertisement
ವಿಷ್ಣುವಿನ ವಿಶ್ವರೂಪ ದರ್ಶನ: ಪಾಂಡುರಂಗನ ದರ್ಶನದ ಬಳಿಕ ಪ್ರವಾಸಿಗರನ್ನು ಆಕರ್ಷಿಸುವುದು ಸಪ್ತ ನದಿಗಳ ಸಂಗಮದ ದೃಶ್ಯ. ಇದಕ್ಕೆ ಹೊಂದಿಕೊಂಡಂತೆ ನಾಲ್ಕು ಕುದುರೆಗಳುಳ್ಳ ಬೃಹತ್ ರಥದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುವಂತಹ ರಮಣೀಯ ದೃಶ್ಯ ಪ್ರತಿಯೊಬ್ಬರನ್ನೂ ಮಂತ್ರಮುಗರನ್ನಾಗಿಸುತ್ತದೆ.
ಶ್ರೀ ಕೃಷ್ಣಾರ್ಜುನರ ಸಂಭಾಷಣೆ ಅತ್ಯಂತರ ಸುಂದರವಾಗಿ ಚಿತ್ರಣಗೊಂಡಿದ್ದು, ರಥದ ಹಿಂದೆ ಬೃಹತ್ ಕಟ್ಟಡದಲ್ಲಿ ನಿರ್ಮಾಣವಾಗಿರುವ ಸುಮಾರು 48ಅಡಿ ಎತ್ತರದ ಶ್ರೀ ವಿಷ್ಣುವಿನ ವಿಶ್ವರೂಪ ದರ್ಶನದ ಮೂರ್ತಿ ರಮಣೀಯವಾಗಿದೆ. ವಿಷ್ಣುವಿನ ವಿಶ್ವರೂಪ ದರ್ಶನ ಮಂದಿರದ ಒಳಗೆ ಮತ್ತು ಹೊರಭಾಗದಲ್ಲಿ ಭಗವದ್ಗೀತೆಯ ಸುಮಾರು 700ಶ್ಲೋಕಗಳನ್ನು ಸಂಸ್ಕೃತ, ಕನ್ನಡ, ಹಿಂದಿ, ಆಂಗ್ಲ ಭಾಷೆಗಳಲ್ಲಿ ಗ್ರಾನೈಟ್ ಕಲ್ಲುಗಳಲ್ಲಿ ಕೆತ್ತನೆ ಮಾಡಿಸಿ ಗೋಡೆಗಳಿಗೆ ಅಂಟಿಸಲಾಗಿದೆ.
ಸಪ್ತ ಮಹರ್ಷಿಗಳ ವಿಗ್ರಹ: ವಿಶ್ವರೂಪ ದರ್ಶನ ಮಂದಿರಲ್ಲಿರುವ 48ಅಡಿ ಎತ್ತರದ ಮೂರ್ತಿಯ ಮುಂಭಾಗದಲ್ಲಿ ಅಮೃತಶಿಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಶ್ರೀ ಕೃಷ್ಣಾರ್ಜುನರ ಮೂರ್ತಿಗಳಿದ್ದು, ವಿಶ್ವರೂಪ ದರ್ಶನದ ಮೂರ್ತಿಯ ಸುತ್ತಲಿನಲ್ಲಿರುವ ಕಂಬಗಳಲ್ಲಿ ವಸಿಷ್ಠ, ಕಶ್ಯಪ, ಹತ್ರಿ ಮಹರ್ಷಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ ಮತ್ತು ಜಮದಗ್ನಿ ಮಹರ್ಷಿಗಳ ವಿಗ್ರಹಗಳನ್ನು ನಿರ್ಮಾಣ ಮಾಡಲಾಗಿದೆ. ನೆಲಮಹಡಿಯಲ್ಲಿ ಶ್ರೀ ಗಾಯತ್ರಿದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಕಲಾವಿದರು: ಗೀತಾ ಮಂದಿರದಲ್ಲಿರುವ ಕೃಷ್ಣಾರ್ಜುನರ ರಥ ಸೇರಿದಂತೆ ಮತ್ತಿತರ ಎಲ್ಲಾ ರೀತಿಯ ವಿಗ್ರಹಗಳು ಶಿವಮೊಗ್ಗದ ಕಾಶಿನಾಥ್ ಎಂಬುವರ ಕೈಚಳಕದಲ್ಲಿ ನಿರ್ಮಾಣವಾಗಿವೆ. ಗೀತಾ ಮಂದಿರದ ಗೋಡೆಗಳಲ್ಲಿರುವ ಭಗವದ್ಗೀತೆಯ 700ಶ್ಲೋಕಗಳನ್ನು ಕೆತ್ತನೆ ಮಾಡಿರುವುದು ಆಂಧ್ರಪ್ರದೇಶ ವಿಶಾಖ ಪಟ್ಟಣಂನ ಹಬೀಬ್ ಮತ್ತು ಹಂಸ ಎಂಬ ಮುಸ್ಲಿಂ ಸಹೋದರರು.
ದಾಸೋಹ: ವಾರಾಂತ್ಯದಲ್ಲಿ ವಿಹಾರಕ್ಕೆ ಬಂದು ಹೋಗುವವರು ಮತ್ತು ಪಾಂಡುರಂಗನ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಹಾಗೂ ಆಶ್ರಮದ ಆಸುಪಾಸಿನಲ್ಲಿ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಊಟೋಪಚಾರಕ್ಕೆ ಅನುಕೂಲವಾಗಲಿ ಅಥವಾ ಹೊಟೇಲ್‌ಗಳಿಲ್ಲದ ಕಾರಣ ಆಶ್ರಮದಲ್ಲಿಯೇ ಭಾನುವಾರ ಮಧ್ಯಾಹ್ನ 12.30ರಿಂದ 3ಗಂಟೆವರೆಗೂ ಅನ್ನಸಂತರ್ಪಣೆ ನಡೆಸಲಾಗುತ್ತಿದೆ. ಆಶ್ರಮದ ಉಸ್ತುವಾರಿ ಮತ್ತು ಮೇಲ್ವಿಚಾರಣೆಯನ್ನು ಶ್ರೀ ಕೇಶವದಾಸರ ಪತ್ನಿ ರಮಾ ಅವರು ನಿರ್ವಹಿಸುತ್ತಿದ್ದಾರೆ.
ಬಸ್ ಮಾರ್ಗ: ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಪಟ್ಟಣ ಮತ್ತು ಅರಿಶಿನಕುಂಟೆ ಸರ್ವಿಸ್ ರಸ್ತೆ ಮೂಲಕ ಆಶ್ರಮಕ್ಕೆ ಹೋಗಬಹುದಾಗಿದೆ. ಬೆಂಗಳೂರು ನೆಲಮಂಗಲ ಮಾರ್ಗವಾಗಿ ಸಂಚರಿಸುವ ಬಿಎಂಟಿಸಿ, ಕೆಸ್‌ಆರ್‌ಟಿಸಿ ಬಸ್ ಸೇರಿದಂತೆ ಖಾಸಗಿ ಬಸ್‌ಗಳ ಮೂಲಕ ಪ್ರಯಾಣಿಸಬಹುದಾಗಿದೆ.
* ಕೊಟ್ರೇಶ್ ಆರ್.