Advertisement

ನಮ್ಮೊಲುಮೆಯಲ್ಲಿ ಭಾವಾಭಿನಂದನ ವಿಶೇಷ ರಸಮಂಜರಿ

04:39 PM Feb 28, 2021 | Ganesh Hiremath |

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ನಮ್ಮೊಲುಮೆ ಕಾರ್ಯಕ್ರಮದ ನಂತರ ಭಾವಾಭಿನಂದನಾ ರಸಮಂಜರಿ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿಬರಲಿದೆ ಎಂದು ಖ್ಯಾತ ಗಾಯಕ ವಿಜಯಪ್ರಕಾಶ್‌ ಹೇಳಿದರು.

Advertisement

ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮ ಇದಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಕುರಿತಾದ ಒಂದು ವಿಶೇಷ ಹಾಡನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುವುದು. ಈ ಹಾಡನ್ನು ಖ್ಯಾತ ಗೀತರಚನೆಕಾರ ಕೆ. ಕಲ್ಯಾಣ್‌ ರಚಿಸಿದ್ದು ನಾನೇ ಸಂಗೀತ ನೀಡಿದ್ದೇನೆ. ರಾಜೇಶ್‌ ಕೃಷ್ಣನ್‌ ಅವರ ಜೊತೆ ಸೇರಿಕೊಂಡು ನೃತ್ಯ ತಂಡದೊಂದಿಗೆ ಭಾವಾಭಿನಯದ ಮೂಲಕ ಮುಖ್ಯಮಂತ್ರಿಗಳಿಗೆ ಇದನ್ನು ಅರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಸುಮಾರು ಆರು ನಿಮಿಷದ ಹಾಡು ಇದಾಗಿದ್ದು, ಬಿ.ಎಸ್‌.ಯಡಿಯೂರಪ್ಪನವರು ಇದುವರೆಗೂ ಬೆಳೆದು ಬಂದ ರೀತಿ, ಅವರ ಅಭಿವೃದ್ಧಿಗಳು, ಮಾನವೀಯತೆ, ಹೋರಾಟ ಹೀಗೆ ಅವರ ಸಮಗ್ರ ಚಿತ್ರಣ ಈ ಆರು ನಿಮಿಷದಲ್ಲಿ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಹಾಗಾಗಿ ಇಡೀ ಕಾರ್ಯಕ್ರಮದಲ್ಲಿ ಈ ಹಾಡು ಒಂದು ಹೈಲೈಟ್‌ ಆಗಲಿದೆ ಎಂದರು.

ತುಂಬಾ ನಿರೀಕ್ಷೆಯೊಂದಿಗೆ ರಾಜೇಶ್‌ ಕೃಷ್ಣನ್‌ ಮತ್ತು ನಮ್ಮ ತಂಡದವರು ಶಿವಮೊಗ್ಗದಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಸುಮಾರು 75ಕ್ಕೂ ಹೆಚ್ಚು ಕಲಾವಿದರು ಶಿವಮೊಗ್ಗಕ್ಕೆ ಬಂದಿದ್ದು ರಿಹರ್ಸಲ್‌ ಕೂಡ ಮಾಡಲಾಗುತ್ತಿದೆ. ಶಿವಮೊಗ್ಗದ ಪ್ರೇಕ್ಷಕರಿಗೆ ಸಂಗೀತ ರಸದೌತಣವನ್ನು ನೀಡುವ ಉದ್ದೇಶ ನಮ್ಮದು ಎಂದರು. ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್‌ ಮಾತನಾಡಿ, ಕಲಾವಿದರಿಗೆ ಮುಖ್ಯಮಂತ್ರಿಗಳು ಕೊಡುವ ಗೌರವ ಎಂದೇ ಇದನ್ನು ಭಾವಿಸಿದ್ದೇವೆ. ಸಂಗೀತಕ್ಕೂ ಸೆಳೆತವಿದೆ ಎಂಬುದನ್ನು ನಾವು ಮೊದಲ ಬಾರಿಗೆ ತಿಳಿದುಕೊಂಡಿದ್ದೇವೆ. ಈ ಕಾರ್ಯಕ್ರಮವನ್ನು ಆಯೋಜಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿರುವುದು ನಮಗಂತೂ ತುಂಬಾ ಖುಷಿಯಾಗಿದೆ. ನಮ್ಮ ಜೊತೆಗೆ ಖ್ಯಾತ ನಿರೂಪಕಿ ಅನುಶ್ರೀ ಇರಲಿದ್ದಾರೆ. ಎಲ್ಲರೂ ಸೇರಿ ಬಂದು ಸಂಗೀತದ ಸ್ವರ್ಗವನ್ನು ಜನರಿಗೆ ಉಣಬಡಿಸುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ವಿಧಾನಪರಿಷತ್‌ ಸದಸ್ಯ ರುದ್ರೇಗೌಡ, ಬಳ್ಳೇಕೆರೆ ಸಂತೋಷ್‌ ಸೇರಿದಂತೆ ಹಲವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next