Advertisement

ಶ್ರೀಕೃಷ್ಣಮಠದಲ್ಲಿ ವಿಜಯದಶಮಿ ಉತ್ಸವ; ಕದಿರು ಕಟ್ಟುವ ಹಬ್ಬ

10:40 AM Oct 09, 2019 | mahesh |

ಉಡುಪಿ: ಶ್ರೀಕೃಷ್ಣಮಠದಲ್ಲಿ ಸಂಪ್ರದಾಯದಂತೆ ವಿಜಯದಶಮಿಯಂದು ಕದಿರುಕಟ್ಟುವ ಹಬ್ಬ ನಡೆಯಿತು.

Advertisement

ಸೋದೆ ಮಠದಲ್ಲಿರಿಸಿದ್ದ ಕದಿರುಗಳ ಐದು ಕಟ್ಟುಗಳನ್ನು ಪರ್ಯಾಯ ಪಲಿಮಾರು ಮಠದ ಪಾರುಪತ್ಯದಾರ ಮಧುಸೂದನ ಆಚಾರ್ಯರು ಪೂಜಿಸಿದ ಬಳಿಕ ಬಂಗಾರದ ಪಲ್ಲಕ್ಕಿಯಲ್ಲಿರಿಸಿಕೊಂಡು ರಥಬೀದಿಗೆ ಒಂದು ಪ್ರದಕ್ಷಿಣೆ ಬಂದು ಮೆರವಣಿಗೆಯಲ್ಲಿ ಶ್ರೀಕೃಷ್ಣಮಠಕ್ಕೆ ತರಲಾಯಿತು. ಅಲ್ಲಿಂದ ಶ್ರೀಕೃಷ್ಣಮಠದ ಮೂಡುಬಾಗಿಲು (ಚೆನ್ನಕೇಶವ ಬಾಗಿಲು) ಮೂಲಕ ಕದಿರುಗಳನ್ನು ಒಳಗೆ ತರಲಾಯಿತು. ಈ ಬಾಗಿಲು ವರ್ಷಕ್ಕೆ ಒಮ್ಮೆ ಮಾತ್ರ ಇದಕ್ಕಾಗಿ ತೆರೆಯಲಾಗುತ್ತದೆ. ಅಲ್ಲಿ ಒಳಗೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯ ಪಟ್ಟದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪೂಜೆ ನಡೆಯಿತು.

ಗರ್ಭಗುಡಿಯ ಹೊರಗೆ ಇರುವ ಮಂಟಪಕ್ಕೆ ಕದಿರುಗಳನ್ನು ತಂದು ಅಷ್ಟಮಠಗಳು, ಇತರ ಮಠಗಳ ಪ್ರತಿನಿಧಿಗಳಿಗೆ ಕದಿರುಗಳನ್ನು ವಿತರಿಸಲಾಯಿತು. ಅವರು ಅವರವರ ಮಠಗಳಿಗೆ ತೆರಳಿ ಕದಿರುಗಳನ್ನು ಕಟ್ಟಿದರು. ಅನಂತರ ಬಡಗುಮಾಳಿಗೆಗೆ ಬಂಗಾರದ ಪಲ್ಲಕ್ಕಿಯಲ್ಲಿ ಕದಿರುಗಳನ್ನು ತಂದು ಅಲ್ಲಿ ಪೂಜಿಸಿದ ಬಳಿಕ ಊರಿನ ಭಕ್ತರಿಗೆ ಕದಿರುಗಳನ್ನು ವಿತರಿಸಲಾಯಿತು. ಇದಾದ ಬಳಿಕ ಪರ್ಯಾಯ ಪಲಿಮಾರು ಮಠ ಮತ್ತು ಭಾವೀ ಪರ್ಯಾಯ ಅದಮಾರು ಮಠಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಕದಿರು ಕಟ್ಟಲಾಯಿತು.

ಶ್ರೀಕೃಷ್ಣದೇವರಿಗೆ ಮಹಾಪೂಜೆ ಬಳಿಕ ಗರ್ಭಗುಡಿ ಎದುರಿನ ಚಂದ್ರಶಾಲೆಯಲ್ಲಿ ಶಾಸ್ತ್ರಗಳಿಗೆ ಸಂಬಂಧಿಸಿ ಶಾಂತಿ ಪಾಠವನ್ನು ನಡೆಸಲಾಯಿತು. ಮೂರು ದಿನಗಳಿಂದ ನಡೆಯುತ್ತಿದ್ದ ವ್ಯಾಸಪೂಜೆಯನ್ನು ಪರ್ಯಾಯ ಶ್ರೀಗಳು ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next