Advertisement

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

03:45 PM Sep 20, 2024 | Team Udayavani |

ಇದು, ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ವಿಜಯಭಾಸ್ಕರ್‌ ಅವರ ಜನ್ಮಶತಮಾನೋತ್ಸವ ವರ್ಷ. ಆ ನೆಪದಲ್ಲಿ ವಿಜಯಭಾಸ್ಕರ್‌ ಅವರ ವೈಶಿಷ್ಟ್ಯ ಚಿತ್ರರಂಗದಲ್ಲಿ ಅವರು ತಂದ ಹೊಸತನ ಕುರಿತು ನಾಲ್ಕು ಮಾತು…

Advertisement

ಭಾಸ್ಕರ್‌ ಕನ್ನಡ ಚಿತ್ರರಂಗದ ಧೀಮಂತ ಸಂಗೀತ ನಿರ್ದೇಶಕ. ಬೆಂಗಳೂರಿನಲ್ಲಿ ಜನಿಸಿದ ಇವರು, ಬಾಲ್ಯದಲ್ಲಿಯೇ ಸಂಗೀತದ ಕಡೆಗೆ ಆಸಕ್ತಿ ಹೊಂದಿದ್ದರು. ಓದಿದ್ದು ಮೆಕಾನಿಕಲ್‌ ಇಂಜಿನಿಯರಿಂಗ್‌ ಆದರೂ, ವೃತ್ತಿಯಾಗಿ ತೆಗೆದುಕೊಂಡಿದ್ದು ಸಂಗೀತ ಕ್ಷೇತ್ರವನ್ನು. ಹಿಂದಿಯ ಸಂಗೀತ ನಿರ್ದೇಶಕ ನೌಷದ್‌ ಅವರ ಸಹಾಯಕರಾಗಿ ಮುಂಬೈನಲ್ಲಿ ವೃತ್ತಿ ಬದುಕು ಆರಂಭಿಸಿದ ವಿಜಯ ಭಾಸ್ಕರ್‌, ನಂತರ ಬೆಂಗಳೂರಿಗೆ ಬಂದು 1954ರಲ್ಲಿ ತೆರೆಕಂಡ “ಶ್ರೀ ರಾಮ ಪೂಜಾ’ ಚಿತ್ರದಿಂದ ಸ್ವತಂತ್ರ ಸಂಗೀತ ನಿರ್ದೇಶಕನಾದರು.

ಡಾ.ರಾಜಕುಮಾರ್‌ ಮತ್ತು ಪಂಡರಿಬಾಯಿ ಅಭಿನಯದ “ರಾಣಿ ಹೊನ್ನಮ್ಮ’ ಚಿತ್ರ ಇವರಿಗೆ ಹೆಸರು ತಂದುಕೊಟ್ಟ ಚಿತ್ರ. ನಂತರ ತೆರೆ ಕಂಡ “ಸಂತ ತುಕಾರಾಂ’ ಚಿತ್ರದ ಗೀತೆಗಳೆಲ್ಲ ಜನಪ್ರಿಯವಾಗಿ ವಿಜಯಭಾಸ್ಕರ್‌ ಅವರಿಗೆ ಸ್ಟಾರ್‌ ಪಟ್ಟ ತಂದುಕೊಟ್ಟವು. ಮುಂದೆ ಅವರು “ಮುಟ್ಟಿದ್ದೆಲ್ಲಾ ಚಿನ್ನ’ ವಾಯಿತು. “ಬೆಳ್ಳಿಮೋಡ’ ಚಿತ್ರದಿಂದ ಆರಂಭಿಸಿ ಪುಟ್ಟಣ್ಣ ಕಣಗಾಲ್‌ ಅವರ 18 ಚಿತ್ರಗಳಿಗೆ ಸಂಗೀತ ನೀಡಿದ್ದು ಇವರ ವಿಶೇಷ.

ಪುಟ್ಟಣ್ಣ ಕಣಗಾಲ್‌ ಅವರ ಚಿತ್ರದ ಹಾಡುಗಳ ಮಾಧುರ್ಯ ಹೆಚ್ಚಿಸುವಲ್ಲಿ ವಿಜಯಭಾಸ್ಕರ್‌ ಕೊಡುಗೆ ಅಪಾರ. ಪ್ರತಿ ಸಿನೆಮಾದಲ್ಲೂ ಏನಾದರೊಂದು ಹೊಸ ಪ್ರಯೋಗ ಮಾಡಿ ಯಶಸ್ಸು ಕಾಣುತ್ತಿದ್ದ ವಿಜಯಭಾಸ್ಕರ್‌, “ಮನ ಮೆಚ್ಚಿದ ಮಡದಿ’ ಚಿತ್ರದ ಟೈಟಲ್‌ ಕಾರ್ಡ್‌ ತೋರಿಸುವ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ “ಜೈ ಭಾರತ ಜನನಿಯ ತನುಜಾತೆ’ಯನ್ನು ಹಿನ್ನೆಲೆ ಗೀತೆಯಾಗಿ ಬಳಸಿದ್ದರು. ನಂತರದ ದಿನಗಳಲ್ಲಿ ಬೇಂದ್ರೆ ಮತ್ತು ಜಿಎಸ್‌ಎಸ್‌ ಅವರ ಗೀತೆಗಳನ್ನೂ ಬೆಳ್ಳಿತೆರೆಗೆ ಅಳವಡಿಸಿದರು.

Advertisement

“ಮಲಯ ಮಾರುತ’ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಪ್ರತಿಷ್ಠಿತ “ಸುರ್‌ ಸಿಂಗಾರ್‌’ ಪ್ರಶಸ್ತಿ ಪಡೆದ ವಿಜಯ ಭಾಸ್ಕರ್‌, ತಮಿಳು, ತೆಲುಗು, ಮಲಯಾಳಂ, ತುಳು, ಕೊಂಕಣಿ, ಮರಾಠಿ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. “ರಾಬರ್ಟ್‌ ಕ್ಲೈವ್‌’ ಎಂಬ ಇಂಗ್ಲೀಷ್‌ ಚಿತ್ರದ ಸಂಗೀತ ನಿರ್ದೇಶನಕ್ಕೆ ಇಂಗ್ಲೆಂಡಿಗೆ ಹೋಗಿ ಬಂದದ್ದು ಮತ್ತೊಂದು ವಿಶೇಷ. ಕೆ.ಎಸ್‌.ಎಲ್. ಸ್ವಾಮಿ (“ಸೂರ್ಯಂಗೂ ಚಂದ್ರಂಗೂ’) ಕಸ್ತೂರಿ ಶಂಕರ್‌ (“ಯಾವ ತಾಯಿಯು ಹಡೆದ ಮಗಳಾದರೇನು’), ಬಿ.ಆರ್‌. ಛಾಯಾ (“ಹಿಂದೂಸ್ಥಾನವು ಎಂದೂ ಮರೆಯದ’), ಸುದರ್ಶನ್‌ (“ಹೂವೊಂದು ಬಳಿ ಬಂದು’), ವಿಷ್ಣುವರ್ಧನ್‌ (“ತುತ್ತು ಅನ್ನ ತಿನ್ನೋಕೆ’) ಅವರ ಧ್ವನಿಯನ್ನು ಹಿನ್ನೆಲೆ ಗಾಯನಕ್ಕೆ ಅಳವಡಿಸಿದ್ದು, ಲಕ್ಷ್ಮಣರಾವ್‌ ಮೋಹಿತೆ ಎಂಬ ಯುವಕನಿಗೆ “ಗೀತಪ್ರಿಯ’ ಎಂದು ನಾಮಕರಣ ಮಾಡಿ ನಿರ್ದೇಶನಕ್ಕೆ ಇಳಿಸಿದ್ದು ವಿಜಯಭಾಸ್ಕರರ ಹೆಗ್ಗಳಿಕೆ. ಕಮರ್ಷಿಯಲ್‌ ಚಿತ್ರಗಳ ನಿರ್ದೇಶಕರಿಗೆ ಮಾತ್ರವಲ್ಲ; ಕಲಾತ್ಮಕ ಚಿತ್ರಗಳ ನಿರ್ದೇಶಕರ ಪಾಲಿಗೂ ಅಚ್ಚುಮೆಚ್ಚಿನ ನಿರ್ದೇಶಕರಾಗಿದ್ದು ವಿಜಯಭಾಸ್ಕರರ ವಿಶೇಷತೆ.

ಎನ್‌. ಲಕ್ಷ್ಮೀನಾರಾಯಣರ “ನಾಂದಿ’, ಲಂಕೇಶರ “ಎಲ್ಲಿಂದಲೋ ಬಂದವರು’, ನಾಗಾಭರಣರ “ಗ್ರಹಣ’, “ನೀಲ’, “ಬ್ಯಾಂಕರ್‌ ಮಾರ್ಗಯ್ಯ’, ‘ಅನ್ವೇಷಣೆ’, ಸುಂದರ್‌ ಕೃಷ್ಣ ಅರಸ್‌ ನಿರ್ದೇಶನದ “ಸಂಗ್ಯಾ ಬಾಳ್ಯಾ’ ಚಿತ್ರಗಳಿಗೆ ಮಾತ್ರವಲ್ಲ, ಜಿ. ವಿ. ಅಯ್ಯರ್‌ ಅವರ “ವಿವೇಕಾನಂದ’ ಚಿತ್ರಕ್ಕೂ ವಿಜಯಭಾಸ್ಕರ್‌ ಅವರದ್ದೇ ಸಂಗೀತ ನಿರ್ದೇಶನ.

ಬೆಳ್ಳಿ ಮೋಡ, ಯಾವ ಜನ್ಮದ ಮೈತ್ರಿ, ಸಂಕಲ್ಪ, ಧರಣಿ ಮಂಡಲ ಮಧ್ಯದೊಳಗೆ, ಮುರಳಿ ಗಾನ ಅಮೃತ ಪಾನ, ಪತಿತ ಪಾವನಿ ಚಿತ್ರಗಳಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಪಡೆದಿದ್ದ ವಿಜಯಭಾಸ್ಕರ್‌, 1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮತ್ತು 2001ರಲ್ಲಿ ಜೀವಮಾನದ ಸಾಧನೆಗೆ ಡಾ.ರಾಜಕುಮಾರ್‌ ಪ್ರಶಸ್ತಿಯನ್ನೂ ಪಡೆದಿದ್ದರು.

ವಿಜಯಭಾಸ್ಕರ್‌ ಹಿಟ್ಸ್‌

ಮೂಡಲ ಮನೆಯಾ ಮುತ್ತಿನ ನೀರಿನ (ಬೆಳ್ಳಿಮೋಡ)

ಗಗನವು ಎಲ್ಲೋ ಭೂಮಿಯು ಎಲ್ಲೋ (ಗೆಜ್ಜೆಪೂಜೆ)

ಹದಿನಾಲ್ಕು ವರ್ಷ ವನವಾಸದಿಂದ (ಶರಪಂಜರ)

ಒಲುಮೆ ಸಿರಿಯಾ ಕಂಡು (ಬಂಗಾರದ ಜಿಂಕೆ)

ಹಾಡೊಂದ ಹಾಡುವೆ ನೀ ಕೇಳು ಮಗುವೇ (ನಾಂದಿ)

ಇದೇನಾ ಸಂಸ್ಕೃತಿ, ಇದೇನಾ ಸಭ್ಯತೆ (ಮಣ್ಣಿನ ಮಗ)

ನೀನೇ ಸಾಕಿದಾ ಗಿಣಿ (ಮಾನಸ ಸರೋವರ)

ಎಲ್ಲಿದ್ದೇ ಇಲ್ಲೀತನಕ ಎಲ್ಲಿಂದ ಬಂದ್ಯವ್ವ (ಎಲ್ಲಿಂದಲೋ ಬಂದವರು)

ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲೀ (ಶುಭಮಂಗಳ)

ಎಲ್ಲೆಲ್ಲು ಸಂಗೀತವೇ (ಮಲಯ ಮಾರುತ)

Advertisement

Udayavani is now on Telegram. Click here to join our channel and stay updated with the latest news.

Next